ಗದಗ

ವಾರದ ಬಳಿಕ ಕಡಲೆ ಖರೀದಿ

Published On :

ಕನ್ನಡಪ್ರಭ ವಾರ್ತೆ, ರೋಣ, ಫೆ. 16
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಬೆಂಬಲ ಬೆಲೆಯಲ್ಲಿ ಖರೀದಿಸಲಾದ ಗೋವಿನಜೋಳ, ಸೂರ್ಯಕಾಂತಿ ಚೀಲಗಳಿಂದ ಉಗ್ರಾಣಗಳು ಭರ್ತಿಯಾಗಿವೆ. ಉಗ್ರಾಣದಲ್ಲಿ ಸಂಗ್ರಹ ಮಾಡಲು ಸೂಕ್ತ ಜಾಗೆ ಇಲ್ಲದಿರುವುದರಿಂದ ವಾರದ ಬಳಿಕ ರು. 3100 ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ ಹೇಳಿದರು.
ಪಟ್ಟಣದ ವ್ಯವಸಾಯ ಸೇವಾ ಸಹಕಾರಿ ಸಂಘದ ಆವರಣದಲ್ಲಿ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಬೆಂಗಳೂರು, ಎನ್‌ಎಎಫ್‌ಇಡಿ ಬೆಂಗಳೂರು, ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ ಮತ್ತು ಸಹಕಾರಿ ಸೇವಾ ಸಂಘದ ಆಶ್ರಯದಲ್ಲಿ ಕಡಲೆ ಖರೀದಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಡಲೆ ಬೆಳೆಗೆ ಸೂಕ್ತ ಬೆಲೆ ನೀಡುವ ಉದ್ದೇಶದಿಂದ ಸರ್ಕಾರ ರೈತರ ನೆರವಿಗೆ ಧಾವಿಸಿದ್ದು, ಕ್ವಿಂಟಲ್‌ಗೆ ರು. 3100 ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಈಗಾಗಲೇ ಖರೀದಿ ಕೇಂದ್ರ ಉದ್ಘಾಟಿಸಿದ್ದು, ಕೆಲ ತಾಂತ್ರಿಕ ತೊಂದರೆಯಿಂದ ವಾರದ ಬಳಿಕ ಕಡಲೆ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು. ಈಗಾಗಲೇ ಪಟ್ಟಣದ ಉಗ್ರಾಣದಲ್ಲಿ ಸುಮಾರು 80 ಸಾವಿರ ಗೋವಿನಜೋಳ ಚೀಲಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ದಾಸ್ತಾನು ಮಾಡಲಾಗಿದೆ. ಆದರೆ ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣವೇ ಕಡಲೆ ಖರೀದಿ ಕಾರ್ಯ ಆರಂಭವಾಗಲಿದ್ದು, ರೈತರು ಸಹಕರಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಮಾಜಿ ಉಪಾಧ್ಯಕ್ಷ ದಶರಥ ಗಾಣಿಗೇರ ಮಾತನಾಡಿ, ರೈತರು ಒಂದೇ ತರಹದ ಬೆಳೆ ಬೆಳೆಯುವುದರಿಂದ ಅದರ ಬೆಲೆ ಕುಸಿತವಾಗುವ ಸಾಧ್ಯತೆ ಅಧಿಕ. ಆದ್ದರಿಂದ ಎಲ್ಲ ತರಹದ ಬೆಳೆಗಳನ್ನು ಬೆಳೆಯುವಲ್ಲಿ ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಅಂದಾಗ ರೈತರ ಆರ್ಥಿಕ ಸ್ಥಿತಿ ಸುಧಾರಿಸಿ, ನೆಮ್ಮದಿ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದರು.
ಕೃಷಿ ಪಂಡಿತ ಪ್ರಶಸ್ತಿ ವಿಜೇತ ಶಿವಣ್ಣ ಅರಹುಣಸಿ, ಕೃಷಿ ಅಧಿಕಾರಿ ವಿ.ಎಸ್. ಬಾವಿ, ಅಂದನಗೌಡ ಭರಮಗೌಡ್ರ, ಶಿವಾನಂದ ಗಡಗಿ, ಅಶೋಕ ಗಡಗಿ, ಎಸ್.ನಾರಾಯಣ, ಎಸ್.ಎಂ. ಪಾಟೀಲ, ಹನುಮಂತಪ್ಪ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.
ಕಾಸಿಂಸಾಬ ಪಿಂಜಾರ ಸ್ವಾಗತಿಸಿದರು. ಎಸ್.ಎ. ಆದಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.