ಗದಗ

ನುಡಿ ಜಾತ್ರೆಗೆ ರಂಗೇರಿದ ಹೆಬ್ಬಾಳ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಫೆ. 17
ಪ್ರಥಮ ಅಕ್ಷರ ಚುಂಬನದ ಖುಷಿಗೆ ಹೆಬ್ಬಾಳ ಪುಳಕಗೊಂಡಿದೆ. ಸಾಹಿತ್ಯ ಸಮ್ಮೇಳನ ಅಂದ್ರೇನ್ರೀ ಅಂತ ಕೇಳುವ ಸಾಮಾನ್ಯರ ನಡುವೆಯೇ ದೊಡ್ಡದೊಡ್ಡೋರು ಬರುತ್ತಾರಂತೆ ಎಂಬ ಬೆರಗು ಕೂಡ ಮನೆ ಮಾಡಿದೆ.
ಶಿರಹಟ್ಟಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಕ್ಕೆ ಒಂದು ದಿನ ಮುನ್ನವೇ ಹೆಬ್ಬಾಳ ಗ್ರಾಮದ ಶಿವಯೋಗೀಶ್ವರ ಪ್ರೌಢಶಾಲಾ ಮೈದಾನದಲ್ಲಿ ಮುಖ್ಯ ವೇದಿಕೆಗೆ ಅಂತಿಮ ಸ್ಪರ್ಶ ನೀಡುವುದರಲ್ಲಿ ನಿರತರಾಗಿದ್ದು, ಸಮ್ಮೇಳನದ ಆವರಣ ಚಟುವಟಿಕೆಯ ಕೇಂದ್ರವಾಗಿದೆ. ಊರು ರಂಗೇರಿದೆ. ಹಸಿರು ತೋರಣ, ದೀಪಾಲಂಕಾರ, ಸ್ವಾಗತ ಕಮಾನುಗಳು, ಕನ್ನಡ ಧ್ವಜಗಳು ಜನರನ್ನು ಕೈಬೀಸಿ ಕರೆಯುತ್ತಿವೆ.
ಹೆಬ್ಬಾಳ ಗ್ರಾಮದಲ್ಲಿ ಸಮ್ಮೇಳನ ಸಂಭ್ರಮಕ್ಕೆ ಮಹಿಳೆಯರೂ ಕೈ ಜೋಡಿಸಿದ್ದಾರೆ. ಬಣ್ಣ ಬಣ್ಣದ ರಂಗೋಲಿ, ಮನೆ ಮನೆಗಳ ಮೇಲೆ ಕನ್ನಡ ಧ್ವಜ, ಎಲ್ಲರ ಮುಖದಲ್ಲಿ ಅಚ್ಚಕನ್ನಡ ನಗು, ಶಾಲಾ-ಕಾಲೇಜು ವಿದ್ಯಾರ್ಥಿಗಳಂತೂ ಕಳೆದೆರಡು ದಿನಗಳಿಂದಲೇ ಸೈಕಲ್ ರ್ಯಾಲಿ ನಡೆಸಿ ನಾಡ ಹಬ್ಬಕ್ಕೆ ಜನರನ್ನು ಆಹ್ವಾನಿಸುವ ಕೆಲಸ ಮಾಡುತ್ತಿದ್ದಾರೆ. ಸಮ್ಮೇಳನದ ಯಶಸ್ವಿಗೆ ಹಗಲಿರುಳು ಶ್ರಮಿಸುತ್ತಿರುವ ವಿವಿಧ ಸಮಿತಿಗಳ ಪದಾಧಿಕಾರಿಗಳು ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.
ಮೂರ್ತಿಗಳ ಪ್ರದರ್ಶನ: ಸಮ್ಮೇಳನ ಪೂರ್ವ ತಯಾರಿ ಕುರಿತು ವಿವರಣೆ ನೀಡಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ್ ಮಾತನಾಡಿ, ಸಮ್ಮೇಳನದ ಹಿನ್ನೆಲೆಯಲ್ಲಿ ಈಗಾಗಲೇ ನಾಡಿನ ಶ್ರೇಷ್ಠ ಕವಿಗಳ ಸಾಹಿತಿಗಳ, ಸಮ್ಮೇಳನಾಧ್ಯಕ್ಷರ ಪೋಟೋ ಇರುವ ಬಂಟ್ಟಿಂಗ್ಸ್ ಕಟ್ಟಲಾಗುತ್ತಿದೆ. ಶಿಲ್ಪ ಕಲೆಗೆ ಹೆಸರಾದ ಹೆಬ್ಬಾಳ ಗ್ರಾಮದ ಶಿಲ್ಪಿಗಳೇ ತಯಾರಿಸಿದ ಮೂರ್ತಿಗಳನ್ನು ಪ್ರದರ್ಶನಕ್ಕೆ ಇಡುವ ವ್ಯವಸ್ಥೆ ಮಾಡಲಾಗಿದೆ.
ವ್ಯಾಪಾರ ಜೋರು: ಸಮ್ಮೇಳನ ನಡೆಯುವ ಸ್ಥಳದ ಪಕ್ಕದಲ್ಲಿಯೇ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಸಣ್ಣ ಪುಟ್ಟ ವ್ಯಾಪಾರಿಗಳು ಮೊದಲೇ ಬೀಡು ಬಿಟ್ಟಿದ್ದು, ಹಸಿಕಡಲೆ, ಚಹಾ, ಮಿರ್ಚಿ ಅಂಗಡಿಗಳು ಆಗಲೇ ವಹಿವಾಟು ಶುರು ಮಾಡಿವೆ.
ಬೆಂಗಳೂರಿನ ಸೂರ್ಯ ಆರ್ಟ್ ಇಂಟರ್‌ನ್ಯಾಶನಲ್ ಕಲಾ ತಂಡ, ಕೊತಬಾಳದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರುಣೋದಯ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಪಪಂ ಸದಸ್ಯ ಹುಮಾಯೂನ ಮಾಗಡಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈ.ಎಸ್. ಪಾಟೀಲ, ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ, ವಿಶ್ವಚೇತನ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎನ್.ಆರ್. ಕುಲಕರ್ಣಿ, ಜಿ.ಆರ್. ಸರ್ಜಾಪುರ, ಎಂ.ಕೆ. ಲಮಾಣಿ, ಕಸಾಪ ಗೌರವ ಕಾರ್ಯದರ್ಶಿ ಅಶೋಕ ಸೊರಟೂರ, ಜೆ.ಎಸ್. ರಾಮಶೆಟ್ಟರ್ ಉಪಸ್ಥಿತರಿದ್ದರು.

 ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.