ರೋಣ: ಅಕ್ಷರ ಜಾತ್ರೆಗೆ ಭರದ ಸಿದ್ಧತೆ
ಕನ್ನಡಪ್ರಭ ವಾರ್ತೆ, ರೋಣ, ಫೆ. 17
ಗದಗ ಜಿಲ್ಲಾ 6 ಕನ್ನಡ ಸಾಹಿತ್ಯ ಸಮ್ಮೇಳನ ರೋಣ ಪಟ್ಟಣದಲ್ಲಿ ಫೆ. 22 ಮತ್ತು 23ರಂದು ನಡೆಯಲಿದ್ದು, ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆದಿದೆ. ಅಕ್ಷರ ಜಾತ್ರೆಯ ಯಶಸ್ವಿಗೆ ಒಟ್ಟು 28 ಸಮಿತಿಗಳನ್ನು ರಚಿಸಿ ಆ ಮೂಲಕ ಭರ್ಜರಿ ರೂಪರೇಷೆ ತಯಾರಿಸಲಾಗುತ್ತಿದೆ.
ಅದ್ಧೂರಿ ವ್ಯವಸ್ಥೆ: ಪಟ್ಟಣದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಮ್ಮೇಳನ ಆಯೋಜಿಸಲಾಗಿದ್ದು, ಸುಮಾರು 24 ಸಾವಿರ ಚದುರ ಅಡಿ ಅಳತೆ ಮಳೆ ನಿರೋಧಕ ಪೆಂಡಾಲಿನಲ್ಲಿ 5000 ಆಸನಗಳ ವ್ಯವಸ್ಥೆ ಮಾಡಲಾಗಿದೆ. 2400 ಚ ಅಡಿ ಅಳತೆ ಮುಖ್ಯ ವೇದಿಕೆ ನಿರ್ಮಿಸಲಾಗಿದೆ. ಪೆಂಡಾಲಿನಲ್ಲಿ 5000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಪುಸ್ತಕ ಮಾರಾಟ ಮತ್ತು ಪ್ರದರ್ಶನಕ್ಕಾಗಿ 40 ಪ್ರತ್ಯೇಕ ಮಳಿಗೆ ನಿರ್ಮಿಸಲಾಗಿದೆ.
ಉಪನ್ಯಾಸಕರಿಗೆ, ಕಲಾವಿದರಿಗೆ, ಸಾಹಿತಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವಲ್ಲಿ, ಸಮ್ಮೇಳನಕ್ಕೆ ಆಗಮಿಸಿದ ಸಾಹಿತ್ಯಾಸಕ್ತರಿಗೆ ಭವಾನಿ ಬೆಟಗೇರಿ ಹೊಲದಲ್ಲಿ ಊಟದ ವ್ಯವಸ್ಥೆ, ಕಾಲೇಜ್ ಎದುರಿಗಿನ ವಿಶಾಲ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಮ್ಮೇಳನದ ಸರ್ವ ಸಿದ್ಧತೆಗಳನ್ನು ವಿವಿಧ ಸಮಿತಿಗಳ ಮೂಲಕ ಕೈಗೊಳ್ಳಲಾಗುತ್ತಿದೆ.
22 ವರ್ಷಗಳ ನಂತರ ಸಮ್ಮೇಳನ: ಕನ್ನಡ ನಾಡಿಗೆ ಭುವನೇಶ್ವರಿ(ಕನ್ನಡಾಂಬೆ) ಭಾವಚಿತ್ರವನ್ನು ಬರೆದು ಕೊಟ್ಟಿದ್ದಲ್ಲದೇ ಭಾರತರತ್ನ ಡಾ. ಭೀಮಸೇನ ಜೋಶಿ, ಆಲೂರು ವೆಂಕಟರಾವ್, ಅಂದಾನಪ್ಪ ದೊಡ್ಡಮೇಟಿ ಸೇರಿದಂತೆ ಅನೇಕ ಸಾಹಿತಿಗಳು, ಸಂಗೀತಗಾರರು, ಕಲಾವಿದರು, ಕವಿಗಳನ್ನು ದೇಶಕ್ಕೆ ಪರಿಚಯಿಸಿದ ತಾಲೂಕಿನ ಕೇಂದ್ರ ಸ್ಥಾನವಾದ ರೋಣದಲ್ಲಿ 22 ವರ್ಷಗಳ ಬಳಿಕ ಕನ್ನಡ ಡಿಂಡಿಂಮ ಮೊಳಗಲಿದೆ.
ಬರದ ನಾಡೆಂದು ಹಣೆಪಟ್ಟಿ ಹೊಂದಿದ ತಾಲೂಕಿನ ಜ್ವಲಂತ ಸಮಸ್ಯೆಗಳ ಅನಾವರಣಕ್ಕೆ ಹಾಗೂ ಜ್ಞಾನದ ಹಸಿವು ನೀಗಿಸಲು ಅಕ್ಷರ ಬೀಜ ಬಿತ್ತಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಅಕ್ಷರ ಜಾತ್ರೆ ಮೂಲಕ ಜ್ಞಾನ ದಾಸೋಹಕ್ಕೆ ಮುನ್ನುಡಿ ಬರೆಯುವಲ್ಲಿ ಜನಪ್ರತಿನಿಧಿಗಳು, ಸಾಹಿತ್ಯಾಸಕ್ತರು, ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳು, ಯುವಕರು ಮತ್ತು ಸಾರ್ವಜನಿಕರು ಸಮ್ಮೇಳನ ಯಶಸ್ಸಿಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಸಾಂಸ್ಕೃತಿಕ ಮೆರುಗು: ಫೆ. 23ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ, ಮಧ್ಯಾಹ್ನ 11ರಿಂದ 2ರ ವರೆಗೆ ಭುವನೇಶ್ವರಿ ಭಾವಚಿತ್ರ ಮೆರವಣಿಗೆಯೊಂದಿಗೆ ಚಾಲನೆ ನೀಡಲಾಗುತ್ತಿದ್ದು, ಸ್ತಬ್ಧಚಿತ್ರ, ಕಲಾವಿದರು ಮೆರವಣಿಗೆಗೆ ಮೆರುಗು ನೀಡಲಿದ್ದಾರೆ. 2ಕ್ಕೆ ಊಟದ ವ್ಯವಸ್ಥೆ, 3ಕ್ಕೆ ಸಿ.ಎಂ. ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು.
ಡಾ. ಭೀಮಸೇನ ಜೋಶಿ ಮಹಾವೇದಿಕೆ ಹಾಗೂ ದುರ್ಗಸಿಂಹ ಮಹಾಮಂಟಪದಲ್ಲಿ ಪ್ರಖ್ಯಾತ ವಿದ್ವಾಂಸರಿಂದ ವಿಚಾರ ಗೋಷ್ಠಿಗಳು ಜರುಗಲಿವೆ. ಸಾಹಿತ್ಯ, ಸಂಸ್ಕೃತಿ ಅವಲೋಕನ, ಸೃಜನಶೀಲ ಸಾಹಿತ್ಯ, ಸೃಜನೇತರ ಸಾಹಿತ್ಯ, ಸಾಂಸ್ಕೃತಿಕ ಪರಂಪರೆ, ಕನ್ನಡ ಭಾಷೆ ರಕ್ಷಣೆ, ವಿವಿಧ ಗೋಷ್ಠಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ. ನಾಡಿನ ಪ್ರಗತಿಪರ ಚಿಂತಕರು, ಜನಪ್ರತಿನಿಧಿಗಳು, ಕಲಾವಿದರು, ಸಂಶೋಧಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯ ಮತ್ತು ಹೊರ ರಾಜ್ಯಗಳಿಂದ ಪ್ರಖ್ಯಾತ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಪಟ್ಟಣದಲ್ಲಿ ಆಲೂರು ವೆಂಕಟರಾವ್, ಅಂದಾನಪ್ಪ ದೊಡ್ಡಮೇಟಿ, ರಂ.ಶ್ರೀ. ಮುಗಳಿ, ಆರ್.ಸಿ. ಹಿರೇಮಠ, ಶಿವಪ್ಪ ನೆಲ್ಲೂರ, ಬಸಮ್ಮ ಪಾಟೀಲ, ವಿರೂಪಾಕ್ಷಪ್ಪ ಅಬ್ಬಿಗೇರಿ ಮತ್ತು ಮಹಾಂತೇಶ ಮಾಂಡ್ರೆ ಹೆಸರಿನಲ್ಲಿ ಅಲ್ಲಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗುವುದು. ಸಮ್ಮೇಳನದ ಯಶಸ್ಸಿಗೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು, ಮಹಿಳಾ ಗುಂಪುಗಳು, ಯುವ ಸಂಘಟನೆಗಳು, ನೌಕರರು ಸ್ವಪ್ರೇರಣೆಯಿಂದ ಶ್ರಮಿಸುತ್ತಿದ್ದಾರೆ.
ಪಿ.ಎಸ್. ಪಾಟೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

