ಜಾತಿ, ಆದಾಯ ಪತ್ರ ಶಾಲೆಯಲ್ಲೇ ವಿತರಣೆ
ಗದಗ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹೊಸದಾಗಿ ಜಾತಿ, ಆದಾಯ ಪ್ರಮಾಣ ಪತ್ರಕ್ಕಾಗಿ ವಿದ್ಯಾರ್ಥಿ ಅಥವಾ ಅವರ ಪಾಲಕರಿಂದ ಸದ್ಯ ಕಲಿಯುತ್ತಿರುವ ಶಾಲೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಅಲ್ಲಿಯೇ ಪ್ರಮಾಣ ಪತ್ರಗಳ ವಿತರಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರವು ಜಾರಿಗೊಳಿಸಿದೆ ಎಂದು ಗದಗ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗದಗ ಜಿಲ್ಲೆಯಲ್ಲಿ 1007 ಶಾಲೆಗಳಿದ್ದು 1.80 ಲಕ್ಷ ವಿದ್ಯಾರ್ಥಿಗಳಿದ್ದು, ಈ ಪೈಕಿ ಶೇ. 30ರಷ್ಟು ಅಂದರೆ 54 ಸಾವಿರ ವಿದ್ಯಾರ್ಥಿಗಳು ಅರ್ಜಿಸಲ್ಲಿಸುವ ಅಂದಾಜು ಮಾಡಲಾಗಿದೆ. ಜತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ನಿಯೋಜಿತ ಎನ್‌ಜಿಒಗಳ ಮೂಲಕ ಕ್ರಮಜರುಗಿಸಲು ನಿರ್ದೇಶನ ನೀಡಲಾಗಿದೆ. ಈ ಕುರಿತಂತೆ ಉಪವಿಭಾಗಾಧಿಕಾರಿ ಐ.ಜಿ. ಗದ್ಯಾಳ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯನ್ನು ಜರುಗಿಸಿ ಈ ಕುರಿತು ಕೈಕೊಳ್ಳಬೇಕಾದ ಕ್ರಮಗಳ ಕುರಿತು ಸವಿಸ್ತಾರ ಚರ್ಚೆ ನಡೆಸಿ ಅಗತ್ಯದ ನಿರ್ದೇಶನಗಳನ್ನು ನೀಡಲಾಗಿದೆ.
ಎನ್‌ಜಿಒಗಳನ್ನು ಜಿಲ್ಲಾಧಿಕಾರಿಗಳು, ತಹಸೀಲ್ದಾರರ ಮೂಲಕ ನೇಮಿಸಲಾಗುತ್ತಿದ್ದು, ಅವರು ಶಾಲೆಗಳಿಗೆ ಭೇಟಿ ನೀಡುವ ವೇಳಾಪಟ್ಟಿಯನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗೆ ಒದಗಿಸಲಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಆ ಶಾಲೆಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ ಜಾತಿ ವ ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ತಿಳಿಸಲು ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡುತ್ತಾರೆ.
ಏ. 15ರೊಳಗಾಗಿ ಪೂರ್ಣಗೊಳಿಸಿ: ಎನ್‌ಜಿಒ ತಂಡವು ಶಾಲೆಗೆ ನಿಗದಿತ ವೇಳಾಪಟ್ಟಿಯಂತೆ ಮಾರ್ಚ್10ರ ಒಳಗಾಗಿ ಭೇಟಿ ನೀಡಿ ಗಣಕಯಂತ್ರದ ಮೂಲಕ ಅರ್ಜಿಯನ್ನು (ತಾಂತ್ರಿಕ ತೊಂದರೆಯಿದ್ದಲ್ಲಿ ಲಿಖಿತ ಅರ್ಜಿಯನ್ನು) ಹಾಗೂ ವಿದ್ಯಾರ್ಥಿಯ ಭಾವಚಿತ್ರ ಸಂಗ್ರಹಿಸಿ ಆಯಾ ಶಾಲೆಗಳಲ್ಲಿ ತರಗತಿವಾರು ವಿದ್ಯಾರ್ಥಿಗಳ ವಿವರ ಮತ್ತು ದಾಖಲೆಗಳ ಪಟ್ಟಿಮಾಡಿ ಶಾಲಾ ಮುಖ್ಯೋಪಾಧ್ಯಾಯರಿಂದ ಪ್ರಮಾಣೀಕರಿಸಿಕೊಂಡು ನಾಡಕಚೇರಿಯ ಅಟಲಜಿ ಜನಸ್ನೇಹಿ ತಂತ್ರಾಂಶದಲ್ಲಿ ಅಳವಡಿಸುತ್ತಾರೆ.
ಇವುಗಳ ಕ್ರಮಬದ್ಧ ಪರಿಷ್ಕರಣೆ ಹಾಗೂ ಸ್ಥಳೀಯ ಪರಿಶೀಲನೆಯನ್ನು ಕಂದಾಯ ಅಧಿಕಾರಿಗಳು ಏಪ್ರಿಲ್ 15ರೊಳಗಾಗಿ ಪೂರ್ಣಗೊಳಿಸಿ ನೀಡುವ ವರದಿಯ ಅಂಶಗಳನ್ನು ತಂತ್ರಾಂಶದಲ್ಲಿ ಭರ್ತಿ ಮಾಡಲಾಗುತ್ತದೆ.
ವೇಳಾಪಟ್ಟಿಯಂತೆ ಕಟ್ಟುನಿಟ್ಟಾಗಿ ಪಾಲಿಸಿ: ಕ್ರಮಬದ್ಧ ಸಂಸ್ಕರಣೆಯ ನಂತರ ಅನುಮೋದಿತ ಪ್ರಮಾಣ ಪತ್ರಗಳ ಮುದ್ರಣವನ್ನು ಕೈಕೊಂಡು ಅವುಗಳನ್ನು ಲ್ಯಾಮಿನೇಟ್ ಮಾಡಿ ಆಯಾ ಶಾಲೆಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಅದೇ ಎನ್‌ಜಿಒ ವಹಿಸಲಾಗಿದೆ.
ಮುಖ್ಯೋಪಾಧ್ಯಾಯರು ಇವುಗಳನ್ನು ಆಯಾ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ವಿತರಿಸಬೇಕು. ಇದೆಲ್ಲದರ ಮೇಲ್ವಿಚಾರಣೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನೋಡಿಕೊಳ್ಳಬೇಕು. ಒಟ್ಟಾರೆಯಾಗಿ ಅರ್ಜಿ ಸಲ್ಲಿಸಿದ ವಿದಾರ್ಥಿಗಳಿಗೆ ಮೇ 15ರ ಒಳಗಾಗಿ ಶಾಲೆಯಲ್ಲಿ ಪ್ರಮಾಣಪತ್ರ ದೊರೆಯುವಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗಳು ಜ. 21ರಂದು ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸ್ಪಷ್ಟಪಡಿಸಿದ್ದು, ಅದನ್ನು ನಿಗದಿತ ವೇಳಾಪಟ್ಟಿಯಂತೆ ಕಟ್ಟುನಿಟ್ಟಾಗಿ ಪಾಲಿಸಲು ಕಂದಾಯ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಜಂಟಿ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ವಿದ್ಯಾರ್ಥಿಗೆ ಮೂಲಪ್ರತಿ ಹಿಂತಿರುಗಿಸಿ: ಜಾತಿ ಮತ್ತು ಆದಾಯ ಪತ್ರ ಮೂಲಪ್ರತಿ ವಿದ್ಯಾರ್ಥಿಗಳಲ್ಲಿರಬೇಕು. ವಿದ್ಯಾರ್ಥಿಗಳು ಜಾತಿ ವ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸುವಾಗ ಮೂಲಪ್ರತಿಯೊಂದಿಗೆ ಝರಾಕ್ಸ್ ಪ್ರತಿ ನೀಡಬೇಕು. ಆಯಾ ಶಾಲೆ ಅಥವಾ ಇಲಾಖೆ ಕಚೇರಿ ಮುಖ್ಯಸ್ಥರು ಮೂಲಪ್ರತಿಯೊಂದಿಗೆ ತಾಳೆ ಮಾಡಿ ತಾವೇ ದೃಢೀಕರಿಸಿದ ಝರಾಕ್ಸ್ ಪ್ರತಿಯನ್ನು ಮಾತ್ರ ಇಟ್ಟುಕೊಂಡು ಮೂಲಪ್ರತಿಯನ್ನು ವಿದ್ಯಾರ್ಥಿಗೆ ಕಡ್ಡಾಯವಾಗಿ ಹಿಂತಿರುಗಿಸಲು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ತಿಳಿಸಿದ್ದಾರೆ.
ಯಾವುದಾದರು ಶಾಲೆ ಅಥವಾ ಇಲಾಖೆ ಕಚೇರಿ ಮುಖ್ಯಸ್ಥರು ಈಗಾಗಲೇ ವಿದ್ಯಾರ್ಥಿಗಳ ಜಾತಿ ವ ಆದಾಯ ಪ್ರಮಾಣ ಪತ್ರದ ಮೂಲಪ್ರತಿ ಇಟ್ಟುಕೊಂಡಿದ್ದರೆ ತಕ್ಷಣ ಅದನ್ನು ಆ ವಿದ್ಯಾರ್ಥಿಗೆ ಮರಳಿಸಬೇಕು. ಜಾತಿಯ ಪ್ರಮಾಣ ಪತ್ರ ಜೀವಿತಾವಧಿಯದಾಗಿದ್ದು, ಆದಾಯ ಪ್ರಮಾಣ ಪತ್ರವು 5 ವರ್ಷದ ಅವಧಿ ಹೊಂದಿರುತ್ತದೆ. ಶಾಲೆ, ಇಲಾಖೆ ಕಚೇರಿ ಮುಖ್ಯಸ್ಥರು, ವಿದ್ಯಾರ್ಥಿ ಹಾಗೂ ಪಾಲಕರು ಇದನ್ನು ಗಮನಿಸಬೇಕು. ಅನಾವಶ್ಯಕವಾಗಿ ಪ್ರತಿವರ್ಷ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಅದಕ್ಕಾಗಿ ಅಲೆದಾಡುವ ಅಗತ್ಯವಿರುವುದಿಲ್ಲ. ಹೊಸದಾಗಿ ಜಾತಿ ಅಥವಾ (ಅವಧಿ ಮುಗಿದ) ಆದಾಯ ಪ್ರಮಾಣಪತ್ರಕ್ಕಾಗಿ ಮಾತ್ರ ವಿದ್ಯಾರ್ಥಿಗಳು ಅಥವಾ ಅವರ ಪಾಲಕರು ಸದ್ಯ ಓದುತ್ತಿರುವ ಶಾಲೆಗಳಲ್ಲಿ ಅರ್ಜಿ ಸಲ್ಲಿಸಿ ಅದನ್ನು ಪಡೆದುಕೊಳ್ಳುವ ಸೌಲಭ್ಯವನ್ನು ಸರ್ಕಾರ ಒದಗಿಸಿದ್ದು ಅದನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

