ರೈತರ ಹೊಲಗಳಿಗೆ ಬದು ನಿರ್ಮಾಣ ಕಾರ್ಯ ಆರಂಭ
ಕನ್ನಡಪ್ರಭ ವಾರ್ತೆ, ರೋಣ, ಫೆ. 17
ಮಣ್ಣಿನ ಫಲವತ್ತತೆ ಹೆಚ್ಚಿಸಿ, ಅಧಿಕ ಇಳುವರಿ ಪಡೆಯುವಲ್ಲಿ ಹೊಲಗಳಿಗೆ ಬದು ನಿರ್ಮಾಣ ಅತ್ಯಗತ್ಯವಾಗಿದೆ. ಆ ದಿಶೆಯಲ್ಲಿ ಜಲಾನಯನ ಇಲಾಖೆ ವತಿಯಿಂದ ರೈತರ ಹೊಲಗಳಿಗೆ ಬದು ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕ ಪ್ರಗತಿ ಹೊಂದಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಭಾನುವಾರ ತಾಲೂಕಿನ ನೆಲ್ಲೂರ ಗ್ರಾಮದ ಮರಿಗೌಡ ಪಾಟೀಲ ಹೊಲದಲ್ಲಿ ಜಿಲ್ಲಾ ಮತ್ತು ತಾಲೂಕು ಜಲಾನಯನ ಇಲಾಖೆ ವತಿಯಿಂದ ಹಮ್ಮಿಕೊಂಡ ಸಮಗ್ರ ಜಲಾನಯನ ನಿರ್ವಹಣೆ ಯೋಜನೆ ಅಡಿಯಲ್ಲಿ 3ನೇ ಹಂತದ ರೈತರ ಹೊಲಗಳಿಗೆ ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಗ್ರಾಮದ ಮುಪ್ಪಿನಾಥೇಶ್ವರ ದೇವಸ್ಥಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಫಲವತ್ತಾದ ಮಣ್ಣು ಕೊಚ್ಚಿ ಹೋಗದಂತೆ ತಡೆಯುವಲ್ಲಿ ಬದುಗಳು ಸಹಕಾರಿಯಾಗುತ್ತವೆ. ಜಲಾನಯನದ ವತಿಯಿಂದ ಮುಶಿಗೇರಿ, ಲಕ್ಕಲಕಟ್ಟಿ ಮತ್ತು ಹಿರೇಹಾಳ ಗ್ರಾಪಂ ವ್ಯಾಪ್ತಿಯ ಶಾಂತಗೇರಿ, ಬೊಮ್ಮಸಾಗರ, ಸರ್ಜಾಪುರ, ಮುಶಿಗೇರಿ, ನೆಲ್ಲೂರ, ಚಿಕ್ಕಅಳಗುಂಡಿ, ಹಿರೇಅಳಗುಂಡಿ, ಗುಳಗುಳಿ, ಕಲ್ಲಿಗನೂರ, ರುದ್ರಾಪುರ, ದ್ಯಾಮುನಸಿ, ಇಟಗಿ, ಅಮರಗಟ್ಟಿ, ಸೂಡಿ ಮತ್ತು ಹಿರೇಹಾಳ, ಬಳಗೋಡ, ಹೊನ್ನಿಗನೂರ ಸೇರಿದಂತೆ 17 ಗ್ರಾಮಗಳ 13 ಸಾವಿರ ಎಕರೆ(5496 ಹೆಕ್ಟರ್) ಪ್ರದೇಶದಲ್ಲಿ ಸುಮಾರು ರು. 74 ಲಕ್ಷಗಳಲ್ಲಿ ಬದು ನಿರ್ಮಿಸುವ ಯೋಜನೆ ಇದಾಗಿದೆ. ಬದು ನಿರ್ಮಾಣದ ವೇಳೆ ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಅಂದಾಗ ಯೋಜನೆ ಯಶಸ್ವಿಯಾಗುತ್ತದೆ. ಜತೆಗೆ ಮಣ್ಣಿನ ಸಂರಕ್ಷಣೆ ಹಾಗೂ ಅಂತರ್ಜಲ ಹೆಚ್ಚಳವಾಗುತ್ತದೆ ಎಂದರು.
ನೆಲ್ಲೂರ ಗ್ರಾಮದಿಂದ ಶಾಂತೇಶ್ವರ ದೇಗುಲಕ್ಕೆ ಹೋಗುವ 3.5 ಕಿ.ಮೀ ಒಳ ರಸ್ತೆಯನ್ನು ರು. 1.75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ನಾಗೇಂದ್ರಗಡ ಹತ್ತಿರದ ಕುಡಿಯುವ ನೀರಿನ ಕೆರೆಯನ್ನು ರು. 75 ಲಕ್ಷ ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗುವುದು. ನೆಲ್ಲೂರ, ಕಲ್ಲಿಗನೂರ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿಗಾಗಿ 35 ಎಕರೆ ಪ್ರದೇಶದಲ್ಲಿ 60 ಲಕ್ಷ ವೆಚ್ಚದಲ್ಲಿ ನೂತನ ಕೆರೆ ನಿರ್ಮಿಸಲಾಗುವುದು. ಕೃಷಿಯಲ್ಲಿ ರೈತರು ತಾಂತ್ರಿಕತೆ ಅಳವಡಿಸಿ ಅಭಿವೃದ್ಧಿ ಪಡಿಸಲು ಸರ್ಕಾರ ಕೃಷಿಭಾಗ್ಯ ಯೋಜನೆ ಜಾರಿ ತಂದಿದ್ದು, ಇದಕ್ಕಾಗಿ ರು. 600 ಕೋಟಿ ಕಾಯ್ದಿರಿಸಿದೆ ಎಂದರು.
ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಶಿವನಗೌಡ ಪಾಟೀಲ, ಗ್ರಾಪಂ ಉಪಾಧ್ಯಕ್ಷ ಅಂದಪ್ಪ ಗೂಡದೂರ, ನಿಂಗಪ್ಪ ಬೇವಿನಮರದ, ವೀರಣ್ಣ ಶೆಟ್ಟರ್, ಹನುಮಂತಪ್ಪ ದೊಡ್ಡಮನಿ, ಎಂ.ಎಸ್. ಪಾಟೀಲ ಮಾತನಾಡಿದರು.
ಜಲಾನಯನ ಕೃಷಿ ಸಹಾಯಕ ನಿರ್ದೇಶಕ ವಿ.ಕೆ. ಕಮತರ, ಕೆ.ಸಿ. ಭಗವತಿ, ಎಚ್.ಎ. ಹಾಳಕೇರಿ, ಗ್ರಾಪಂ ಸದಸ್ಯ ಶಿವಪ್ಪ ಮಾದರ, ಕೆ.ವಿ. ಗುಡಿಮನಿ, ಶಾಂತಗೌಡ ಗೌಡರ, ಪ್ರಕಾಶ ಕುರಹಟ್ಟಿ, ಪೀರಪ್ಪ ಲಮಾಣಿ, ಶರಣಯ್ಯ ಕರಡಿ, ವೀರಣ್ಣ ಕರಡಿ, ಎಸ್.ಬಿ. ಗೌಡರ, ರಾಜು ಮಾಲಗಿತ್ತಿ, ಶೇಖಪ್ಪ ಮಂತೂರ ಮುಂತಾದವರು ಉಪಸ್ಥಿತರಿದ್ದರು. ಶರಣಯ್ಯ ಮಾಸ್ತಿಗತ್ತಿ ನಿರೂಪಿಸಿದರು. ಜಲಾನಯನ ತಾಲೂಕು ಅಧಿಕಾರಿ ಎಸ್.ಪಿ. ಕಾಶಪ್ಪನವರ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

