ಇಂದಿನಿಂದ ಅಕ್ಷರ ಜಾತ್ರೆ
ಶಿರಹಟ್ಟಿ: ಶಿರಹಟ್ಟಿ ಕನ್ನಡ ನುಡಿ ಜಾತ್ರೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 10 ವರ್ಷಗಳ ನಂತರ ಅಕ್ಷರ ಜಾತ್ರೆಗೆ ಅತಿಥ್ಯ ವಹಿಸುತ್ತಿರುವ ಶಿಲ್ಪಕಲೆಯ ಹೆಬ್ಬಾಳ ಗ್ರಾಮ ಸಂಪೂರ್ಣ ಸಜ್ಜಾಗಿದ್ದು ಫೆ. 19ರಂದು ಶಿರಹಟ್ಟಿ ತಾಲೂಕು 3ನೇ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ.
ಹೆಬ್ಬಾಳ ಗ್ರಾಮದ ಶಿವಯೋಗೀಶ್ವರ ಪ್ರೌಢಶಾಲೆಯ ವಿಶಾಲವಾದ ಮೈದಾನದಲ್ಲಿ ಶಿರಹಟ್ಟಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶ್ರೀ ಸಿದ್ಧರಾಮ ಶಿವಯೋಗಿಗಳ ಮಹಾವೇದಿಕೆ ಸಿದ್ಧವಾಗಿದೆ. ಎರಡು ಮಹಾದ್ವಾರಗಳಲ್ಲಿ ಒಂದಕ್ಕೆ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮೈಲಾರ ಮಹಾದೇವಪ್ಪ, ಮತ್ತೊಂದಕ್ಕೆ ನಾಟಕ ರತ್ನ ಶಿರಹಟ್ಟಿಯ ಶ್ರೀ ವೆಂಕೋಬರಾಯ ಮಹಾದ್ವಾರ ಎಂದು ಹೆಸರಿಡಲಾಗಿದೆ. ಸಮ್ಮೇಳನ ಯಶಸ್ವಿಗಾಗಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದ್ದು, 9 ಉಪ ಸಮಿತಿ ರಚಿಸಿ ಅವುಗಳಿಗೆ ಹೊಣೆಗಾರಿಕೆ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಹೆಬ್ಬಾಳ ಗ್ರಾಮದಲ್ಲಿನ ಎಲ್ಲ ಯುವಕ ಮಂಡಳಗಳು, ಕನ್ನಡಪರ ಸಂಘಟನೆಗಳು, ಸಮಸ್ತ ಹಿರಿಯರು, ಗ್ರಾಮ ಪಂಚಾಯಿತಿಯವರು ಸಮ್ಮೇಳನದ ಯಶಸ್ವಿಗೆ ಶ್ರಮಪಡುತ್ತಿದ್ದಾರೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಹಾಗೂ ಸಾಹಿತಿ ಜಿ.ಎಂ. ಶಿರಹಟ್ಟಿ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಈ ಸಮ್ಮೇಳನವನ್ನು ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಉದ್ಘಾಟಿಸಲಿದ್ದಾರೆ. ಪರಿಷತ್ತಿನ ಕಾರ್ಯಕಾರಿಣಿ ಮಂಡಳಿಯ ಸದಸ್ಯರು, ಕಸಾಪ ತಾಲೂಕು ಅಧ್ಯಕ್ಷ ಕೆ.ಎ. ಬಳಿಗೇರ ಹಾಗೂ ಶಾಸಕ ರಾಮಕೃಷ್ಣ ದೊಡ್ಡಮನಿ ಈ ಸಮ್ಮೇಳನ ಯಶಸ್ವಿಗೆ ಅನೇಕ ಸಭೆಗಳನ್ನು ನಡೆಸಿದ್ದಾರೆ. ಫೆ.19ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ 3 ಗೋಷ್ಠಿಗಳು ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಸಾಹಿತಿಗಳು, ಸಾವಿರಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಸೇರಿದಂತೆ 5ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಾಯಂಕಾಲ ಜರುಗಲಿರುವ ಬಹಿರಂಗ ಅಧಿವೇಶನದಲ್ಲಿ ತಾಲೂಕಿನ ಜ್ವಲಂತ ಸಮಸ್ಯೆಗಳ ಕುರಿತು ನಿರ್ಣಯ ಕೈಗೊಂಡು ಸರ್ಕಾರದ ಕಣ್ತೆರೆಸುವ ಕಾರ್ಯ ಮಾಡಲಿ ಎನ್ನುವುದು ಎಲ್ಲರ ಹೆಬ್ಬಯಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

