ಗದಗ

ಸಹಕಾರಿ ಕ್ಷೇತ್ರಕ್ಕೆ ಜಿಲ್ಲೆ ಕೊಡುಗೆ ಅಪಾರ

Published On :

ಕನ್ನಡಪ್ರಭ ವಾರ್ತೆ, ಗದಗ, ಫೆ. 18
ರಾಷ್ಟ್ರದ ಸಹಕಾರಿ ಕ್ಷೇತ್ರಕ್ಕೆ ಗದಗ ಜಿಲ್ಲೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ    ಹೇಳಿದರು.
ಅವರು ಮಂಗಳವಾರ ಎಪಿಎಂಸಿ ಯಾರ್ಡ್ನಲ್ಲಿರುವ ಗದಗ ತಾಲೂಕು ಒಕ್ಕಲುತನ ಹುಟ್ಟುವಳಿ ಸಹಕಾರ ಮಾರಾಟ ಸಂಸ್ಕರಣ ಸಂಘದ ಆವರಣದಲ್ಲಿ ಗದಗ ತಾಲೂಕು ಒಕ್ಕಲುತನ ಹುಟ್ಟುವಳಿ ಸಹಕಾರ ಮಾರಾಟ ಸಂಸ್ಕರಣ ಸಂಘದ ಸಂಸ್ಥಾಪಕ ವಿ.ಆರ್. ಮಾಳಗೊಂಡವರ 84ನೇ ಜಯಂತ್ಯುತ್ಸವ, ಕಂಚಿನ ಪುತ್ಥಳಿ ಅನಾವರಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಸಂಘದ  ಆವರಣದ ಮುಖ್ಯದ್ವಾರ ಉದ್ಘಾಟಿಸಿ     ಮಾತನಾಡಿದರು.
ಸಹಕಾರಿ ಕ್ಷೇತ್ರಕ್ಕೆ ಸಾಕಷ್ಟು ಮಹನೀಯರು ಕೊಡುಗೆ ನೀಡಿದ್ದಾರೆ. ಅವರಲ್ಲಿ ವಿ.ಆರ್. ಮಾಳಗೊಂಡರ ಕೊಡುಗೆ ಅಪಾರ. ಅಂದು ರೈತರಿಗೆ ಆಗುತ್ತಿರುವ ಶೋಷಣೆ, ದಲ್ಲಾಲಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಸ್ವಾತಂತ್ರ್ಯ ಪೂರ್ವದಲ್ಲಿಯೇ ವಿ.ಆರ್. ಮಾಳಗೊಂಡರು ಗದಗ ತಾಲೂಕು ಒಕ್ಕಲುತನ ಹುಟ್ಟುವಳಿ ಸಹಕಾರ ಮಾರಾಟ ಸಂಸ್ಕರಣ ಸಂಘ ಸ್ಥಾಪನೆ ಮಾಡಿ ರೈತರ ಏಳ್ಗೆಗೆ ಶ್ರಮಿಸಿದ್ದರು. ಕೇವಲ ಸಹಕಾರಿ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿಯೂ ಮಾಳಗೊಂಡರು ತೊಡಗಿಸಿಕೊಂಡರು. ಆದರೆ, ಸಹಕಾರಿ ಕ್ಷೇತ್ರದಲ್ಲಿ ಎಂದಿಗೂ ರಾಜಕೀಯ ತೊಡಗಿಸಿದವರಲ್ಲ. ಈ ಮಹಾನ್ ನಾಯಕರು ಕಟ್ಟಿ ಬೆಳೆಸಿದ ಈ ಸಹಕಾರಿ ಸಂಘವನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಗೊಳಿಸಲು ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಒಗ್ಗಟ್ಟಿನ ಕೊರತೆ: ಸಹಕಾರಿ ಕ್ಷೇತ್ರದಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ರೈತರು ಎಂದು ಒಗ್ಗಟ್ಟಿನಿಂದ ಹೋರಾಟ ಮಾಡುವರೋ ಅಂದು ರೈತರ ಏಳ್ಗೆ ಸಾಧ್ಯವಾಗಲಿದೆ. ದಿ. ಕೆ.ಎಚ್. ಪಾಟೀಲರು ಹೇಳಿದಂತೆ ಎಂದು ರೈತರು ತಾವು ಬೆಳೆದ ಬೆಳೆಗೆ ತಾವೇ ಬೆಲೆ ಕಟ್ಟಲು ಸಾಧ್ಯವಾಗುವುದಿಲ್ಲವೋ, ಅಲ್ಲಿಯವರೆಗೆ ರೈತರ ಏಳ್ಗೆ ಅಸಾಧ್ಯ ಎಂಬುದನ್ನು ರೈತರು ಅರಿತುಕೊಳ್ಳಬೇಕಾಗಿದೆ. ಇಂದು ಕೈಗಾರಿಕಾ ನೀತಿಯಿಂದಾಗಿ ಸಹಕಾರಿ ಕ್ಷೇತ್ರಗಳು ಉನ್ನತಿ ಹೊಂದಲು ಸಾಧ್ಯವಾಗುತ್ತಿಲ್ಲ. ಇಂದಿನ ರಾಜಕೀಯ ವಿದ್ಯಾಮಾನಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಖಾಸಗಿ ಕೈಗಾರಿಕೆಗಳಿಗೆ ಕ್ಷೇತ್ರಕ್ಕೆ ನೀಡಿದ ಪ್ರೋತ್ಸಾಹದಲ್ಲಿ ಶೇ. 5ರಷ್ಟೂ ಪ್ರೋತ್ಸಾಹ ನೀಡುತ್ತಿಲ್ಲ ಎಂದರು.
ಸಹಕಾರಿ ಕ್ಷೇತ್ರದ ಉನ್ನತಿಗೆ ಶ್ರಮಿಸಿ: ದಿ. ವಿ.ಆರ್. ಮಾಳಗೊಂಡರ ಪುತ್ಥಳಿ ಅನಾವರಣಗೊಳಿಸಿದ ಮಾಜಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ರೈತರಿಗೆ ಆಗುವ ತೊಂದರೆ, ಶೋಷಣೆ ತಪ್ಪಿಸಲು ಮಾಳಗೊಂಡರು ಗದಗ ತಾಲೂಕು ಒಕ್ಕಲುತನ ಹುಟ್ಟುವಳಿ ಸಹಕಾರ ಮಾರಾಟ ಸಂಸ್ಕರಣ ಸಂಘವನ್ನು ಸ್ಥಾಪನೆಗೊಳಿಸಿ ಆ ಮೂಲಕ ರೈತರ ಏಳ್ಗೆಗೆ ಶ್ರಮಿಸಿದವರು. ಅವರು ಹಾಕಿಕೊಟ್ಟ ಆದರ್ಶಗಳನ್ನು ಇಂದಿನ ನಾಯಕರು, ಸಹಕಾರಿ ಕ್ಷೇತ್ರದವರು ಅಳವಡಿಸಿಕೊಂಡು ಅವರ ಮಾದರಿಯಲ್ಲಿಯೇ ಸಂಘವನ್ನು ಅಭಿವೃದ್ಧಿಗೊಳಿಸಲು ಶ್ರಮಿಸಿ. ಮಾಳಗೊಂಡರ ತತ್ವ ಸಿದ್ಧಾಂತಗಳಿಗೆ ತಿಲಾಂಜಲಿ ಇಡುವ ಕಾರ್ಯವಾಗದೇ ಅವರ ಆದರ್ಶಗಳ ಪಾಲನೆಯಿಂದ ಸಹಕಾರಿ ಕ್ಷೇತ್ರದ ಉನ್ನತಿಗೆ ಪ್ರತಿಯೊಬ್ಬರೂ ಶ್ರಮಿಸುವಂತೆ ಕೋರಿದರು. ವಿ.ಆರ್. ಮಾಳಗೊಂಡರ ಜೀವನ ಚಿತ್ರಣದ ಬೆಲ್ಲದ ಅಚ್ಚು ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ ರಾಜ್ಯ ಸಹಕಾರಿ ಮಹಾಮಂಡಳದ ಅಧ್ಯಕ್ಷ ಹಾಲಪ್ಪ ಆಚಾರ ಹಾಗೂ ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿದರು. ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿ.ಆರ್. ಮಾಳಗೊಂಡವರ ಪ್ರತಿಷ್ಠಾನವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಹಲವು ಮಹನೀಯರನ್ನು ಸನ್ಮಾನಿಸಲಾಯಿತು. ಎಸ್.ಕೆ. ಮೇಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಶ್ರೀಶೈಲಪ್ಪ ಬಿದರೂರ, ಸಿ.ಎಸ್. ಮುತ್ತಿನಪೆಂಡಿಮಠ, ಸಂಘದ ನಿರ್ದೇಶಕ ಚಂದ್ರಶೇಖರ ಮಾಳಗೊಂಡ, ರೇವಣಪ್ಪ ಕೊಂಡಿಕೊಪ್ಪ, ಸಾವಿತ್ರಿ ಕಡಿ ಮುಂತಾದವರು ಇದ್ದರು. ಸಂಘದ ವ್ಯವಸ್ಥಾಪಕ ನಿರ್ದೇಶಕ ವಸಂತ ಮೇಟಿ ಸ್ವಾಗತಿಸಿದರು. ಪಿ.ಎಸ್. ಪೈಲದ ನಿರೂಪಿಸಿದರು. ಬಿ.ಎಲ್. ತಮ್ಮನಗೌಡ್ರ  ವಂದಿಸಿದರು. ಗುಂಡೇಟು ಪ್ರಕರಣದಲ್ಲಿ ಗಾಯಗೊಂಡು ಗುಣಮುಖರಾದ ನಂತರ ಮಾಜಿ ಸಚಿವ ಸಿ.ಸಿ. ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.