ಹಣ ಬಿಡುಗಡೆ ಮಾಹಿತಿ ಇಲ್ಲ
ಗದಗ: ಲಕ್ಕುಂಡಿ ಉತ್ಸವಕ್ಕೆ ಸರ್ಕಾರದಿಂದ ಬಿಡುಗಡೆಯಾದ ಹಣದ ಬಗ್ಗೆ ನನಗೆ ಮಾಹಿತಿ ಇಲ್ಲ, ನೀವು ಜಿಲ್ಲಾಧಿಕಾರಿಗಳನ್ನೇ ಕೇಳಿ ಎಂದು ನರಗುಂದ ಶಾಸಕ ಬಿ.ಆರ್. ಯಾವಗಲ್ಲ ಹೇಳುವ ಮೂಲಕ ಆಶ್ಚರ್ಯಕ್ಕೆ ಕಾರಣರಾದರು.
ಅವರು ಮಂಗಳವಾರ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಫೆ. 22ರಿಂದ 24ರ ವರೆಗೆ ನಡೆಯಲಿರುವ ಲಕ್ಕುಂಡಿ ಉತ್ಸವದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ರೀತಿಯಲ್ಲಿ ಮಾತನಾಡಿದರು.
ಈ ಉತ್ಸವಕ್ಕೆ ಎಷ್ಟೊಂದು ಅನುದಾನ ಬಿಡುಗಡೆಯಾಗಿದೆ ಎನ್ನುವ ಪ್ರಶ್ನೆಗೆ ನನಗೆ ಗೊತ್ತಿಲ್ಲ ಎಂದರು. ನೀವು ಈ ಕ್ಷೇತ್ರದ ಶಾಸಕರಾಗಿ ನಿಮಗೆ ಸರ್ಕಾರದಿಂದ ಉತ್ಸವಕ್ಕೆ ಬಿಡುಗಡೆಯಾದ ಅನುದಾನ ಬಗ್ಗೆ ಮಾಹಿತಿ ಇಲ್ಲ ಅಂದ್ರೆ ಹೇಗೆ ಸಾರ್ ಎನ್ನುವ ಪ್ರಶ್ನೆಗೆ, ಹೌದು ನನಗೆ ಗೊತ್ತಿಲ್ಲ, ಅದನ್ನೇ ನಾನು ಹೇಳುತ್ತಿದ್ದೇನೆ. ಹಾಗಾದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ನಿಮಗೆ ಮಾಹಿತಿ ನೀಡಿಲ್ಲವೇ? ನೀವು ಅದನ್ ಅವ್ರನ್ನೇ ಕೇಳಿ ಎನ್ನುವ ಮೂಲಕ ಪರೋಕ್ಷವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಬಗ್ಗೆ ಅವರಿಗಿರುವ ಅಸಮಾಧಾನ ಹೊರಹಾಕಿದರು.
ನೀವ್ಯಾಕೆ ಕೇವಲ ಅನುದಾನ ಬಗ್ಗೆ ಮಾತ್ರ ಪ್ರಶ್ನೆ ಮಾಡುತ್ತೀರಿ ಎಂದು ಮರು ಪ್ರಶ್ನೆ ಹಾಕಿದರು. ಉತ್ಸವ ನಡೆಸುವ ಕುರಿತು ಕ್ಷೇತ್ರದ ಶಾಸಕರಾಗಿ ಒಂದು ಬಜೆಟ್ ಸಿದ್ಧ ಪಡಿಸಿರುತ್ತೀರಿ, ಆ ಬಜೆಟ್ ಆದ್ರು ಎಷ್ಟು ಎನ್ನುವ ಪ್ರಶ್ನೆಗೂ ಅವರು ಉತ್ತರಿಸಲಿಲ್ಲ. ಉತ್ಸವದ ಕುರಿತು ನಿಮ್ಮ ಹೇಳಿಕೆಯ ಪ್ರಕಾರ ಹಲವಾರು ಸಭೆಗಳನ್ನು ನಡೆಸಲಾಗಿದೆ. ಹಾಗಾದರೆ ಆ ಸಭೆಗಳಲ್ಲಿ ನೀವು ಪಾಲ್ಗೊಳ್ಳಲಿಲ್ಲವೇ? ಅಲ್ಲಿ ಈ ಬಗ್ಗೆ ಚರ್ಚೆ ನಡೆದಿಯೇ ಎನ್ನುವ ಪ್ರಶ್ನೆಗೂ ಕೂಡಾ ಯಾವಗಲ್ಲ ನಕ್ಕು ಸುಮ್ಮನಾದರು.
ಜಿಲ್ಲೆಯ ಎರಡು ಪ್ರಮುಖ ಕಾರ್ಯಕ್ರಮಗಳು ಲಕ್ಕುಂಡಿ ಉತ್ಸವ ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನ, ಎರಡನ್ನೂ ಒಂದೇ ದಿನ ಮಾಡುವ ಉದ್ದೇಶವಾದರೂ ಏನು ಎಂದಾಗ ಸಿಎಂ ಅವರ ದಿನಾಂಕ ಲಭ್ಯತೆಯ ತೊಂದರೆಯಿಂದ ಹೀಗಾಗಿದೆ ಎಂದರು.
ಸಿಎಂ ಸಲುವಾಗಿ ಉತ್ಸವ ಆಯೋಜನೆಯಾಗಿದೆಯೇ ಎನ್ನುವ ಪ್ರಶ್ನೆಗೆ ಸ್ವಲ್ಪ ಗರಂ ಆದ ಅವರು, ಹಾಗೇನಿಲ್ಲ, ಸಿಎಂ ಕಾರ್ಯಕ್ರಮಕ್ಕೆ ಬರುವುದರಿಂದ ಉತ್ಸವಕ್ಕೆ ಮತ್ತಷ್ಟು ಮೆರಗು ಬರುತ್ತೆ ಎನ್ನುವುದೇ ಮುಖ್ಯ ಉದ್ದೇಶ ಎಂದರು.
ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಇಲ್ಲಿ ನಡೆಯುತ್ತಿರುವ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವ ಲಕ್ಷಣ ಕಂಡು ಬರುತ್ತಿಲ್ಲ ಎಂದಾಗ, ಆ ಬಗ್ಗೆ ಸಂಶಯ ಬೇಡ, ಎಲ್ಲವೂ ಅಚ್ಚುಕಟ್ಟಾಗಿ ನೆರವೇರುತ್ತದೆ. ಆದರೆ, ಅದಕ್ಕೆ ನಿಮ್ಮ ಸಹಕಾರ ಬೇಕಷ್ಟೇ ಎಂದರು.
ತಾಪಂ ಸದಸ್ಯ ಮಹೇಶ ಮುಸ್ಕಿನಬಾವಿ, ಗ್ರಾಪಂ ಅಧ್ಯಕ್ಷೆ ಶಾಂತವ್ವ ನಂದಪ್ಪನವರ, ಉಪಾಧ್ಯಕ್ಷ ರೇಣವ್ವ ಮುಳ್ಳಾಳ, ವೀರಯ್ಯ ಗಂಧದ, ಎಂಪಿಎಂಸಿ ಉಪಾಧ್ಯಕ್ಷ ಸಿದ್ದಲಿಂಗೇಶ ಪಾಟೀಲ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

