ರು. 60 ಲಕ್ಷ ವೆಚ್ಚದಲ್ಲಿ ಲಕ್ಕುಂಡಿ ಉತ್ಸವ
ಕನ್ನಡಪ್ರಭ ವಾರ್ತೆ, ಗದಗ, ಫೆ. 18
ಲಕ್ಕುಂಡಿ ಉತ್ಸವವನ್ನು ರು. 60 ಲಕ್ಷ ವೆಚ್ಚದಲ್ಲಿ ಫೆ. 22, 23 ಹಾಗೂ 24ರಂದು ಆಚರಿಸಲು ಎಲ್ಲ ಸಿದ್ಧತೆ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ಅವರು ಮಂಗಳವಾರ ಲಕ್ಕುಂಡಿ ಗ್ರಾಮದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರು. 30 ಲಕ್ಷ ಅನುದಾನ ನೀಡಿದೆ. ರು. 10 ಲಕ್ಷ ಪ್ರವಾಸೋದ್ಯಮ ಇಲಾಖೆಯಿಂದ ಹಾಗೂ ರು. 20 ಲಕ್ಷ ಸ್ಥಳೀಯ ಸಂಪನ್ಮೂಲಗಳ ಸಂಗ್ರಹಸಲಾಗುತ್ತಿದೆ. ಈಗಾಗಲೇ ಪ್ರಾಥಮಿಕ ಹಂತದ ಸಿದ್ಧತೆ ಪೂರ್ಣಗೊಂಡಿದೆ.
ವಿಷಯಗಳ ವಿಚಾರ ಗೋಷ್ಠಿ: ಉತ್ಸವವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು. ಗ್ರಾಮದಲ್ಲಿ ಜನಪದ ಕಲಾ ತಂಡಗಳ ಮೆರವಣಿಗೆ, 101 ಪೂರ್ಣಕುಂಭದ ಮಹಿಳೆಯರು ಹಾಗೂ ವಿಶೇಷ ಕಲಾ ರೂಪಕ ಒಳಗೊಂಡಿದೆ. ಉತ್ಸವದ ಅಂಗವಾಗಿ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಕುಸ್ತಿ, ಕ್ರಾಸ್ ಕಂಟ್ರಿ, ಮಲ್ಲಕಂಬ ಪ್ರದರ್ಶನ ಆಯೋಜಿಸಲಾಗಿದೆ. ಕವಿ ಗೋಷ್ಠಿ, ಮಹಿಳಾ ಗೋಷ್ಠಿ ಹಾಗೂ ವಿವಿಧ ಪ್ರಮುಖ ವಿಷಯಗಳ ಮೇಲೆ ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅರ್ಚನ ಉಡುಪ ಅವರ ತಂಡ ಹಾಗೂ ಮನು ಕಲಾಕೇಂದ್ರ ಶಿವಮೊಗ್ಗ ಇವರಿಂದ ನೃತ್ಯ ಸಂಗಮ, ಸಂಗೀತಾ ಕಟ್ಟಿ ಅವರ ತಂಡದಿಂದ ಸಂಗೀತ ಝೇಂಕಾರ, ಪ್ರಿನ್ಸ್ ನೃತ್ಯ ತಂಡದಿಂದ ವಿಶೇಷ ಒಡಿಸ್ಸಿ ನೃತ್ಯ, ಪ್ರಭಾತ ಕಲಾತಂಡದಿಂದ ನೃತ್ಯ ನಾಟಕ, ಶಂಕರ ಶಾನಭಾಗ ತಂಡದಿಂದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಕಾವ್ಯ ನಮನ, ಹೆಜ್ಜೆನಾದ ತಂಡದಿಂದ ವಿಶೇಷ ನೃತ್ಯ ಹಾಗೂ ರಘು ದೀಕ್ಷಿತ ತಂಡದವರಿಂದ ರಸಸಂಜೆ ಮತ್ತು ವಾರ್ತಾ ಇಲಾಖೆಯಿಂದ ಲೇಸರ್ ಶೋ ಕಾರ್ಯಕ್ರಮ ನಡೆಯಲಿದೆ.
ಚಿತ್ರ ಕಲಾವಿದರು ಹಾಗೂ ಕವಿಗಳಿಂದ ವಿಶೇಷ ಕಲಾ ಕುಂಚ ಕಾರ್ಯಕ್ರಮ ಜರುಗಲಿದ್ದು, ಸ್ಥಳೀಯ 23 ಕಲಾತಂಡಗಳು ಹಾಗೂ 15 ಹೊರಗಿನಿಂದ ಆಗಮಿಸಿದ ಕಲಾತಂಡಗಳ ಈ ಉತ್ಸವದಲ್ಲಿ ಪ್ರದರ್ಶನ ನೀಡಲಿದ್ದಾರೆ. ಹಾಗೂ ಉತ್ಸವದ ಅಂಗವಾಗಿ 3 ದಿನಗಳ ಕಾಲ ಗದಗ ಜಿಲ್ಲೆಯ ವಿವಿಧ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಲು ರಿಯಾಯಿತಿ ದರದಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಪಿ ಡಾ. ಶರಣಪ್ಪ ಎಸ್.ಡಿ., ಜಿಪಂ ಸಿಇಒ ವೀರಣ್ಣ ತುರಮರಿ, ಶಾಸಕ ಬಿ.ಆರ್. ಯಾವಗಲ್ಲ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

