ಗದಗ

ಜಾಗತಿಕ ಮಟ್ಟದಲ್ಲಿ ಕನ್ನಡ ಬೆಳೆಸಿ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಫೆ. 19
(ಹೆಬ್ಬಾಳ, ಸಿದ್ಧರಾಮ ಶಿವಯೋಗಿಗಳ ವೇದಿಕೆ)
ಕರ್ನಾಟಕದಲ್ಲಿ ಕನ್ನಡ ಕಲಿಯಿರಿ ಕನ್ನಡ ಕಲಿಸಿರಿ ಎಂಬ ಫಲಕಗಳನ್ನು ಹಾಕಿ ಕನ್ನಡ ಕಲಿಸುವ ಮಟ್ಟಿಗೆ ಕನ್ನಡ ಭಾಷೆ ದುಸ್ಥಿತಿಯಲ್ಲಿದೆ. ಇದನ್ನು ತೊಡೆದು ಹೊರ ಹಾಕಲು ಪ್ರತಿಯೊಬ್ಬ ಕನ್ನಡಿಗರು ಕನ್ನಡಾಭಿಮಾನ ಹೊಂದಿ ಬೇರೆ ಭಾಷೆಗಳೊಂದಿಗೆ ಪೈಪೋಟಿ ನಡೆಸಿ ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಬೇಕು ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ಬುಧವಾರ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಏರ್ಪಡಿಸಿದ್ದ ಶಿರಹಟ್ಟಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲು. ಹೆತ್ತ ತಾಯಿಯನ್ನು ಹೊತ್ತ ತಾಯಿನಾಡಿನ ಭಾಷೆಯ ಪುಸ್ತಕ ಓದಿ ಪದವಿ ಪಡೆದರೆ ಸಾಲದು. ಕನ್ನಡ ನಾಡಿನಲ್ಲಿ ಜನಿಸಿದ ನಾವುಗಳು ಪುಣ್ಯವಂತರು. ಆದರೆ, ಕನ್ನಡದ ನೆಲದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಸೊರಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಸಕ ರಾಮಕೃಷ್ಣ ದೊಡ್ಡಮನಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಬಾಲೇಹೊಸೂರಿನ ದಿಂಗಾಲೇಶ್ವರ ಮಹಾಸ್ವಾಮಿಗಳು, ಜಿಲ್ಲಾ ಕಸಾಪ ಅಧ್ಯಕ್ಷ ಶಿವಪ್ಪ ಕುರಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎ.ಬಿ. ಹಿರೇಮಠ ಮಾತನಾಡಿದರು. ಹೆಬ್ಬಾಳದ ಸಣ್ಣಹಾಲಸ್ವಾಮಿಗಳು, ಜಿಪಂ ಅಧ್ಯಕ್ಷೆ ಕಮಲಮ್ಮ ಸಜ್ಜನರ, ಸದಸ್ಯರಾದ ಎಂ.ಎಸ್.  ದೊಡ್ಡಗೌಡರ, ಸುನಿತ ಹಳ್ಳೆಪ್ಪನವರ, ತಾಪಂ ಅಧ್ಯಕ್ಷೆ ಸುನಂದ ಬಿದರಳ್ಳಿ, ತಾಪಂ ಸದಸ್ಯ ಶಿವನಗೌಡ ಕಂಠಿಗೌಡ್ರ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಟಿ.ಬಿ. ಮುಂಡವಾಡ, ಎಸ್.ಜಿ.  ತೆಗ್ಗಿನಮನಿ, ಮಹೇಂದ್ರ ಮುಂಡವಾಡ, ಗ್ರಾಪಂ. ಉಪಾಧ್ಯಕ್ಷೆ ಮೈತ್ರಾ ಉಡಚಣ್ಣವರ, ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ, ಬಿಇಒ ಆರ್.ಎಸ್. ಬುರಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ. ನಾರಾಯಣ ಮತ್ತಿತರರು ಇದ್ದರು. ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ ಸ್ವಾಗತಿಸಿದರು. ಜಯಶ್ರೀ ಹೊಸಮನಿ ನಿರೂಪಿಸಿದರು. ಎಸ್.ಎ. ಮತ್ತೂರ ವಂದಿಸಿದರು.
ಕನ್ನಡ ಮಾಧ್ಯಮ ಶಾಲೆ ಕಟ್ಟಿ
ಇದುವರೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಕನ್ನಡದ ಗಟ್ಟಿತನಕ್ಕೆ ಸಾಕ್ಷಿಯಾಗಿದ್ದು, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಮನ್ನಣೆ ದೊರೆತಿದ್ದರೂ ಆಳುವ ಸರ್ಕಾರದ ನಿರ್ಲಕ್ಷ್ಯದಿಂದ ಪ್ರಯೋಜನವಾಗಿಲ್ಲ. ದೇಶದಲ್ಲಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿದ್ದು, ಪೂರಕ ಪರೀಕ್ಷೆಯಲ್ಲಿ ಕನ್ನಡದ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಯ್ಕೆಯಾಗದಿರುವುದಕ್ಕೆ ಅವರಲ್ಲಿ ಸ್ಪರ್ಧಾತ್ಮಕ ರೀತಿಯಲ್ಲಿ ಸಿದ್ಧಗೊಳಿಸದಿರುವುದು ಕಾರಣ ಎಂದು ಅವರು, ಇನ್ನಾದರೂ ಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಕನ್ನಡ ಮಾಧ್ಯಮ ಶಾಲೆಗಳನ್ನು ಕಟ್ಟಲು ಸರ್ಕಾರ ಮುಂದಾಗಬೇಕು. ಸರ್ಕಾರ ಕನ್ನಡ ಮಾಧ್ಯಮ ಶಾಲೆಗೆ ಒತ್ತು ಕೊಟ್ಟಂತೆ ಕೃಷಿಗೆ ಆದ್ಯತೆ ನೀಡಬೇಕು. ವಿದ್ಯೆ, ಬುದ್ಧಿ, ಸಾಧನೆ ಜತೆಗೆ ಒಳ್ಳೆಯ ಮನಸ್ಸು ಕಟ್ಟುವ ಕೆಲಸಕ್ಕೆ ಮುಂದಾಗಬೇಕು. ಉತ್ಸವ ಮತ್ತು ಭಾಷೆಯ ಹೆಸರಿನಲ್ಲಿ ಸಂಸ್ಕೃತಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರ ವರ್ತಿಸುತ್ತಿದ್ದು ಅದು ನಿಲ್ಲಬೇಕು. ಮತಬ್ಯಾಂಕ್ ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರಗಳು ಆಮಿಷವೊಡ್ಡಿ ಮನಸ್ಸು ಕದಲುವ ಕೆಲಸಕ್ಕೆ ಕೈಹಾಕಿದೆ ಎಂದು ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.