ಗದಗದಲ್ಲಿ ಭಿತ್ತಿಪತ್ರ ಚಳವಳಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ಗದಗ, ಫೆ. 21
ಗದಗ ಭಾಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಮುಸ್ಲಿಂ ಜಾಗ್ರತ ವೇದಿಕೆ, ರೇ ಲ್ವೆ ಅಭಿವೃದ್ಧಿ ಹೋರಾಟ ವೇದಿಕೆ, ಶಿವಬಸವ ಜನಕಲ್ಯಾಣ ಸಂಸ್ಥೆ, ಸಿಜಿಎಚ್ ಮಿತ್ರ ಮಂಡಳಿ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ನಗರದ ಗಾಂಧಿ ವೃತ್ತದಲ್ಲಿ ಭಿತ್ತಿಪತ್ರ ಚಳವಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಭಿತ್ತಿಪತ್ರ ಚಳಿವಳಿಗೆ ಚಾಲನೆ ನೀಡಿದ ರಾಜ್ಯ ಮುಸ್ಲಿಂ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಫರೀದ್ ಸುಂಕದ ಮಾತನಾಡಿ, ಉ.ಕ. ಬೃಹತ್ ಕೈಗಾರಿಕೆಗಳಿಂದ ನೀರಾವರಿ ಯೋಜನೆಗಳಿಂದ ಸಂಪೂರ್ಣವಾಗಿ ಹಿಂದುಳಿದಿದ್ದು, ಈ ಭಾಗದ ನೀರಾವರಿ ಯೋಜನೆಗಳಾದ ಕಳಸಾ-ಬಂಡೂರಿ, ಶಿಂಗಟಾಲೂರು ಏತ ನೀರಾವರಿ, ಹುಲಿಗುಡ್ಡ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಸರ್ಕಾರ ಇಚ್ಛಾಶಕ್ತಿ ಹೊಂದಬೇಕು. ಈ ಕುರಿತು ಇಂದಿನಿಂದ ಭಿತ್ತಿಪತ್ರದ ಚಳವಳಿ ಆರಂಭಿಸಲಾಗಿದೆ ಎಂದರು.
ಬಸವಣ್ಣೆಯ್ಯ ಹಿರೇಮಠ ಮಾತನಾಡಿ, ಕಳೆದ ವಾರದ ಹಿಂದೆ ಗದಗ ನಗರದ ಹತ್ತಿರ ಗ್ರಾಮೀಣಾಭಿವೃದ್ಧಿ ವಿವಿ ಸ್ಥಾಪನೆ, ಸಹಕಾರಿ ವಿವಿ ಸ್ಥಾಪನೆ, ಕೃಷಿ ಆಧಾರಿತ ಪರಿಸರ ಸ್ನೇಹಿ ಬೃಹತ್ ಉದ್ಯಮಗಳನ್ನು ಸ್ಥಾಪಿಸಲು, ಗದಗ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು, ಭೀಷ್ಮೆಕೆರೆ ಅಭಿವೃದ್ಧಿಪಡಿಸಲು ಚಳವಳಿಗಾರರು ತಮ್ಮವೇ ಭಾವಚಿತ್ರವಿರುವ ಅಂಚೆ ಚೀಟಿಗಳನ್ನು ಲಕೋಟೆಗಳಿಗೆ ಅಂಟಿಸಿ ಮುಖ್ಯಮಂತ್ರಿಗೆ ಉಸ್ತುವಾರಿ ಸಚಿವರಿಗೆ ಪತ್ರಗಳನ್ನು ಕಳುಹಿಸಲಾಗಿತ್ತು. ಗದಗ ಜಿಲ್ಲೆಗೆ ಮುಖ್ಯಮಂತ್ರಿಗಳು ಶನಿವಾರ ಭೇಟಿ ಕೊಡಲಿರುವ ಹಿನ್ನೆಲೆಯಲ್ಲಿ ಗದಗ ನಗರಾದ್ಯಂತ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಭಿತ್ತಿಪತ್ರಗಳ ಮೂಲಕ ಬಹಿರಂಗ ಮನವಿ ಮಾಡಿಕೊಳ್ಳುತ್ತಿದ್ದು, ಗದಗ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಅದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯ ಮುಸ್ಲಿಂ ಜಾಗ್ರತ ವೇದಿಕೆಯ ಸಂಚಾಲಕ ಜಾವೇದ ಸುಂಕದ, ರಾಜ್ಯ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ನಿಸಾರಅಹ್ಮದ ಖಾಜಿ ಮಾತನಾಡಿ, ಗದಗ ಅಭಿವೃದ್ಧಿಗಾಗಿ ಹೋರಾಟ ನಿರಂತರ ಮುಂದುವರಿಯುತ್ತದೆ ಎಂದರು. ಬನ್ನೂರ, ಕರವೇ ಗದಗ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ದಾಸರ, ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಪದಾಧಿಕಾರಿ ಶಿವಕುಮಾರ ರಾಮನಕೊಪ್ಪ, ಎಸ್.ಎಸ್. ರಡ್ಡೇರ, ಎನ್.ಕೆ. ಕೊರ್ಲಹಳ್ಳಿ, ಗದಗ-ಬೆಟಗೇರಿ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಬಾಬು ಬೇಲೇರಿ, ಗುಡಿಸಲಮನಿ, ಶಾಹಿದ ಸುಂಕದ, ಎಂ.ಐ. ಮುಲ್ಲಾ, ಡಾ. ಬಾಬಾಸಾಹೇಬ ಅಂಬೇಡ್ಕರ್ ಜ್ಞಾನ ಪ್ರಸಾರ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬೇಲೂರ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

