ಸಾಂಪ್ರದಾಯಿಕ, ನೈಸರ್ಗಿಕ ಕೃಷಿ ಇತಿಹಾಸದ ಕೊಡುಗೆ
ಕನ್ನಡಪ್ರಭ ವಾರ್ತೆ, ಗದಗ, ಫೆ. 23
ಸಾಂಪ್ರದಾಯಿಕ ಹಾಗೂ ನೈಸರ್ಗಿಕ ಕೃಷಿಯು ಇತಿಹಾಸದ ಕೊಡುಗೆಯಾಗಿದೆ ಎಂದು ಹುಲಕೋಟಿಯ ಸಾವಯವ ಕೃಷಿ ತಜ್ಞ ಹಾಗೂ ಪ್ರಗತಿಪರ ರೈತ ಸುರೇಶಗೌಡ ಪಾಟೀಲ ಹೇಳಿದರು.
ಅವರು ಸ್ಥಳೀಯ ಎಕ್ಸಲೆಂಟ್ ಕೋಚಿಂಗ್ ಸೆಂಟರ್ನಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ, ಜಿಲ್ಲಾ ಘಟಕದ ಆಶ್ರಯದಲ್ಲಿ ಈಚೆಗೆ ಪ್ರಾಚೀನ ಕೃಷಿ ಸಂಪ್ರದಾಯಗಳು ಆಚರಣೆ ಹಾಗೂ ವೈಶಿಷ್ಟ್ಯಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇತಿಹಾಸವು ಪುನರಾವರ್ತಿಸುತ್ತದೆ ಎಂಬ ನಾಣ್ನುಡಿಯಂತೆ ಇತ್ತೀಚೆಗೆ ಸಾಂಪ್ರದಾಯಿಕ ಹಾಗೂ ನೈಸರ್ಗಿಕ ಕೃಷಿ ಜನಪ್ರಿಯತೆ ಪಡೆಯುತ್ತಿದೆ. ಇಂತಹ ಕೃಷಿಯಿಂದ ಉತ್ತಮ ಇಳುವರಿ ಹಾಗೂ ಆರೋಗ್ಯಕರ ಕೃಷಿ ಉತ್ಪನ್ನಗಳನ್ನು ಪಡೆಯುಬಹುದಾಗಿದೆ. ಪ್ರಾಚೀನ ಕಾಲದಲ್ಲಿ ನೈಸರ್ಗಿಕ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ಬೀಜಗಳನ್ನು ಬಿತ್ತುತ್ತಿದ್ದು, ಆಕಳ ಸಗಣೆ, ಗೋಮೂತ್ರ ಮುಂತಾದವುಗಳನ್ನು ಗೊಬ್ಬರ ರೂಪದಲ್ಲಿ ಉಪಯೋಗಿಸುತ್ತಿದ್ದರು.
ಹೀಗಾಗಿ ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ಸಾಧ್ಯವಾಗುತ್ತಿತ್ತು. ಚರಕ ಸಂಹಿತೆಯಲ್ಲಿ 486 ರೋಗಗಳಿಗೆ ಕೇವಲ ಆಯುರ್ವೇದದ ನೈಸರ್ಗಿಕ ಉತ್ಪಾದನೆಗಳಿಂದಲೇ ಉಪಶಮನವಿತ್ತೆಂದು ಹೇಳಲಾಗಿದೆ. ತ್ವರಿತ ಹಾಗೂ ಹೆಚ್ಚು ಇಳುವರಿಯನ್ನು ಪಡೆಯುವ ಭರದಲ್ಲಿ ನಮ್ಮ ರೈತರು ಐಟಿಬಿಟಿ ಮೊರೆ ಹೋಗಿ ಸಾಂಪ್ರದಾಯಿಕ, ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ನಿರ್ಲಕ್ಷಿಸುತ್ತಿರುವುದು ವಿಷಾದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ವೈ.ಆರ್. ಬೇಲೇರಿ ಮಾತನಾಡಿ, ವಿದ್ಯಾರ್ಥಿಗಳು ಶಾಸನಗಳಲ್ಲಿ ಹುದುಗಿರುವ ಕೃಷಿ ಸಂಪ್ರದಾಯ ಮತ್ತು ಆಚರಣೆಗಳ ವೈಶಿಷ್ಟ್ಯಗಳನ್ನು ಅಧ್ಯಯನ ಮಾಡಬೇಕು ಎಂದರು.
ಇತಿಹಾಸ ಅಕಾಡೆಮಿಯ ಜಿಲ್ಲಾ ಸಂಚಾಲಕಿ ಪ್ರೊ. ಶಕುಂತಲಾ ಸಿಂಧೂರ, ಆರ್.ಸಿ. ಬಿರಾದಾರ, ಪ್ರೊ. ನರೇಗಲ್ಲ, ಅ.ದ. ಕಟ್ಟಿಮನಿ ಸೇರಿದಂತೆ ಗದಗ ಜಿಲ್ಲೆಯ ವಿವಿಧ ಕಾಲೇಜುಗಳ ಇತಿಹಾಸ ಉಪನ್ಯಾಸಕರು, ಅಕಾಡೆಮಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಿ.ಎನ್. ತಾರಾ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ದತ್ತಪ್ರಸನ್ನ ಪಾಟೀಲ ಸ್ವಾಗತಿದರು. ರಾಜ್ಯ ಘಟಕದ ಕಾರ್ಯಕಾರಿ ಮಂಡಳಿ ಸದಸ್ಯ ಕೆ.ಎಂ. ಗರಗ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

