ಸಾಹಿತ್ಯ ಸಮ್ಮೇಳನಕ್ಕೆ ಕಳಸವಿಟ್ಟ ಗೋಷ್ಠಿಗಳು
ಕನ್ನಡಪ್ರಭ ವಾರ್ತೆ, ರೋಣ, ಫೆ. 23
ಪಟ್ಟಣದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ದುರ್ಗಸಿಂಹ ಮಹಾ ಮಂಟಪದಲ್ಲಿ ಶನಿವಾರ ಮತ್ತು ಭಾನುವಾರ ಜರುಗಿದ ವಿವಿಧ ಗೋಷ್ಠಿಗಳು ಸಮ್ಮೇಳಕ್ಕೆ ಕಳಸವಿಟ್ಟಂತೆ ಜರುಗಿದವು.
ಶನಿವಾರದ ಮೊದಲ ಗೋಷ್ಠಿ ಗದಗ ಜಿಲ್ಲೆ ದರ್ಶನ ಕುರಿತು ಜರುಗಿದ್ದು, ಗೋಷ್ಠಿಯಲ್ಲಿ ಸಂಸ್ಕೃತಿ ಚಿಂತಕ ಪ್ರೊ. ಬಿ.ಎ. ಕೆಂಚರಡ್ಡಿ ಅವರು ನೆಲ, ಜಲ ಮತ್ತು ಭಾಷೆಯ ಕುರಿತು, ಇತಿಹಾಸ ಪ್ರಾಧ್ಯಾಪಕ ಡಾ. ವೈ.ಎಸ್. ಬೇಲೇರಿ ಮಾತನಾಡಿ, ನಾಡಿಗೆ ಜಿಲ್ಲೆಯು ಅಪಾರ ಕೊಡುಗೆ ನೀಡಿದ್ದು, ಅಲ್ಲಮಪ್ರಭು ಲೀಲೆ ಬರೆದ ಚಾಮರಸ, ಗದುಗಿನ ಮಹಾಭಾರತ ರಚಿಸಿದ ಕುಮಾರವ್ಯಾಸ, ಉದಯವಾಗಲಿ ಚೆಲುವ ಕನ್ನಡ ನಾಡು ಕವಿತೆ ರಚಿಸಿದ ಹುಯಿಲಗೋಳ ನಾರಾಯಣ, ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಅಂದಾನಪ್ಪ ದೊಡ್ಡಮೇಟಿ, ಆಲೂರು ವೆಂಕಟರಾಯ ಸೇರಿದಂತೆ ಅನೇಕ ಕವಿಗಳನ್ನು ನಾಡಿಗೆ ನೀಡಿದ ಕೀರ್ತಿ ಗದಗ ಜಿಲ್ಲೆಗೆ ಸಲ್ಲುತ್ತದೆ. ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಕನ್ನಡಿಗರು ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಭಾನುವಾರ ಜರುಗಿದ ಎರಡನೇ ಗೋಷ್ಠಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಸೋಮಶೇಖರ ಇಮ್ರಾಪುರ ಸಾಹಿತ್ಯ ಮತ್ತು ಸಾಧನೆ ಕುರಿತು ಡಾ. ಶರಣಬಸವ ವೆಂಕಟಾಪುರ ಅವರ ಆಶಯ ನುಡಿಯೊಂದಿಗೆ ಪ್ರಾರಂಭಗೊಂಡಿತು. ಡಾ. ಇಮ್ರಾಪುರ ಅವರ ಜಾನಪದ ಅಧ್ಯಯನ, ಸಾಹಿತ್ಯ ವಿಮರ್ಶೆ, ಅಂಕಣ ಬರಹಗಳು ಮತ್ತು ಡಾ. ಇಮ್ರಾಪುರ ನಡೆದ ಬಂದು ದಾರಿ ಕುರಿತು ಡಾ. ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿದರು.
ಡಾ. ವಿ.ಎಲ್. ಪಾಟೀಲ ಮತ್ತು ಡಾ. ಪ್ರಹ್ಲಾದ್ ಆಗಸನಕಟ್ಟೆ ಮಾತನಾಡಿ, ಡಾ. ಇಮ್ರಾಪುರ ನಡೆದು ಬಂದ ದಾರಿ ಕಲ್ಲು, ಮುಳ್ಳುಗಳಿಂದ ಕೂಡಿತ್ತು. ಅದೆಲ್ಲವನ್ನು ದಿಟ್ಟವಾಗಿ ಎದುರಿಸಿ ಸಾಹಿತ್ಯದ ಶ್ರೇಷ್ಠತೆಯ ಉತ್ತುಂಗ ಶಿಖರವನ್ನು ಏರಿದ್ದಾರೆ. ಸಾಹಿತ್ಯ ಮೂಲಕ ಕತ್ತಲೆಯನ್ನು ಹೊಡೆದೋಡಿಸಿ ಬೆಳಕು ನೀಡಿದ್ದಾರೆ. ಜನಪದ ಸಾಹಿತ್ಯ ಚರಿತ್ರೆಯನ್ನು ಕಟ್ಟಿ ಬೆಳೆಸಿದ್ದಾರೆ. ಜನಪದದಿಂದ ಓದುಗರನ್ನು ಶಾಸ್ತ್ರೀಯವಾಗಿ ತಾವು ರಚಿಸಿದ ಗ್ರಂಥಗಳತ್ತ ಆಕರ್ಷಿಸಿದ್ದಾರೆ. ಡಾ. ಇಮ್ರಾಪುರ ಜನಪದ, ಜಾನಪದ, ಜನಪದ ವಿಜ್ಞಾನ ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಜನಪದ ಒಗಟುಗಳು ಕುರಿತು ಮಹಾಪ್ರಬಂಧವನ್ನು ಮಂಡಿಸಿದ್ದು, ಪ್ರಬಂಧದಲ್ಲಿ ಗದ್ಯ ಸಾಹಿತ್ಯದ ಚಿಕ್ಕ ರೂಪವನ್ನು ಕೂಲಂಕಷವಾಗಿ ಪೂರ್ಣ ರೂಪಕಗಳ ನೆಲೆಗಟ್ಟಿನಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ ಎಂದರು.
ಮಕ್ಕಳ ಕಾವ್ಯ ವಿಹಾರ ಕುರಿತು ಜರುಗಿದ ಮೂರನೇಯ ಗೋಷ್ಠಿಯಲ್ಲಿ ಚೈತ್ರಾ ವಿಶ್ವಬ್ರಾಹ್ಮಣ, ಕಾವ್ಯಾ ದಂಡಿನ, ಶ್ರೀನಿಧಿ ಕುಲಕರ್ಣಿ, ಲಕ್ಷ್ಮೀ ಹಡಪದ, ವೀಣಾ ಕಿತ್ತೂರು, ಶಿವರಾಜ ಕ್ಷತ್ರಿಯ, ಮೋಲ್ಲಾಸಿನಿ, ಪಿ. ಪವಿತ್ರಾ ಸೇರಿದಂತೆ ಅನೇಕ ಪುಟಾಣಿಗಳು ಸ್ವರಚಿತ ಕಾವ್ಯಗಳನ್ನು ಸುಮಧುರವಾಗಿ ವಾಚನ ಮಾಡಿದರು.
ಗೋಷ್ಠಿಯನ್ನುದ್ದೇಶಿಸಿ ಮಕ್ಕಳ ಸಾಹಿತಿ ಡಾ. ರಾಜೇಂದ್ರ ಗಡಾದ ಮಾತನಾಡಿ, ಮಕ್ಕಳು ಭಾವಜೀವಿಗಳು. ಭಾವನಾತ್ಮಕ, ವೈಚಾರಿಕ ಪ್ರಜ್ಞೆ ಮಕ್ಕಳಲ್ಲಿರುತ್ತದೆ. ಮಕ್ಕಳ ಕಾವ್ಯ ಸೃಷ್ಟಿಗೆ ಕೇವಲ ಪ್ರೀತಿಗಿಂತ ಪ್ರತಿಭೆ ಅಗತ್ಯವಾಗಿದೆ. ಇಂದು ಮಕ್ಕಳ ಸಾಹಿತ್ಯದಲ್ಲಿ ಸತ್ವಯುತ ಸಾಹಿತ್ಯ ಅಷ್ಟಾಗಿ ಕಾಣುತ್ತಿಲ್ಲ. ಮಕ್ಕಳಿಗೆ ಸಾಹಿತ್ಯದಲ್ಲಿ ಸಿಗಬೇಕಾದ ಸ್ಥಾನಮಾನ, ಗೌರವ ಸಿಗದಿರುವುದು ಕಳವಳ ಸಂಗತಿಯಾಗಿದೆ ಎಂದರು.
ಸಾಹಿತಿ ಕ್ಷಮಾ ವಸ್ತ್ರದ ಮಾತನಾಡಿ, ಬದಲಾಗುತ್ತಿರುವ ಮೌಲ್ಯ ಮತ್ತು ನಮ್ಮ ಸಮಾಜದಿಂದ ಮಕ್ಕಳ ಮನಸ್ಸಿನ ಮೇಲೆ ಪೆಟ್ಟು ಬೀಳುತ್ತಿದೆ. ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ ಮೂಡಲು ಕೌಟುಂಬಿಕ ಹಾಗೂ ಶಿಕ್ಷಣದ ವ್ಯವಸ್ಥೆ ಸುಧಾರಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಡಿಡಿಪಿಐ ರಾಜೇದ್ರ ಪ್ರಸಾದ, ಬಿಇಒ ಡಿ.ಐ. ಅಸುಂಡಿ, ಐ.ಆರ್. ಅಕ್ಕಿ, ಬಿ.ಎಂ. ಗುಣಾರಿ, ವಿ.ಕೆ. ಪಾಟೀಲ, ಕೆ.ಎಸ್. ಕಳಕನ್ನವರ, ಬಿ.ಎಚ್. ಮಲ್ಲೇಶ ಉಪಸ್ಥಿತರಿದ್ದರು.
ಮಧ್ಯಾಹ್ನ ಜರುಗಿದ ನಾಲ್ಕನೆಯ ಮಹಿಳಾ ಸಂವೇದನೆ ಚಿಂತನ ಗೋಷ್ಠಿಯಲ್ಲಿ, ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯನ್ನು ಕನಿಷ್ಠವಾಗಿ ಕಾಣಲಾಗಿತ್ತಿದೆ. ಇದು ನಿಲ್ಲಬೇಕಾದಲ್ಲಿ ಮಹಿಳೆ ಜಾಗೃತಳಾಗಬೇಕು ಎಂದು ಶಂಕುತಲಾ ಸಿಂಧೂರ ಹೇಳಿದರು.
ಜಾಗತೀಕರಣ ಮತ್ತು ಮಹಿಳೆ, ಆಧುನಿಕ ಮಹಿಳೆಯ ಸಮಸ್ಯೆಗಳ ಕುರಿತು ಹೇಮಲತಾ ವಸ್ತ್ರದ, ಪಾರ್ವತಿ ಲೆಂಕೆಣ್ಣವರ ಮಾತನಾಡಿದರು.
ಕೊನೆಯ ಗೋಷ್ಠಿಯಾದ ಕವಿತಾ ವಿಹಾರದಲ್ಲಿ ಡಿಡಿಪಿಐ ಬಿ.ಎ. ರಾಜೇಂದ್ರಪ್ರಸಾದ ಆಶಯ ನುಡಿ, ಸಾಹಿತಿ ಮನು ಬಳಿಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಷ್ಠಿಯಲ್ಲಿ ನಾಡಿನ ವಿವಿಧ ಕವಿಗಳಿಂದ ಕವನ ವಾಚನ ಜರುಗಿತು.
ಮತೀಯತೆ, ಅವೈಚಾರಿಕತೆಯನ್ನು ಪ್ರಚೋದಿಸುವ ಮಕ್ಕಳ ಸಾಹಿತ್ಯ ಬೇಡವಾಗಿದೆ. ಮಕ್ಕಳ ಸಾಹಿತ್ಯದಲ್ಲಿ ಇವತ್ತಿನ ವರೆಗೆ 20 ಸಾವಿರಕ್ಕೂ ಹೆಚ್ಚು ಕಾವ್ಯ, ಕೃತಿಗಳು ಪ್ರಕಟವಾಗಿವೆ. ಆದರೆ, ಅವೆಲ್ಲವೂ ಮಕ್ಕಳಿಗೆ ಸಿಗುತ್ತಿಲ್ಲ. ನವೋದಯದ ನಡೆಯಲ್ಲಿ ಬಂದ ಮಕ್ಕಳ ಕಾವ್ಯಕ್ಕೆ ಸೂಕ್ತ ನೆಲೆ ಇಲ್ಲದಂತಾಗಿದೆ. ಮಕ್ಕಳ ಸಾಹಿತ್ಯ ಕುರಿತು ಸಮಗ್ರ ವಿಮರ್ಶೆಯಾಗಬೇಕು.
- ಡಾ. ರಾಜೇಂದ್ರ ಗಡಾದ,
ಮಕ್ಕಳ ಸಾಹಿತಿ
-ದುರ್ಗಸಿಂಹ ಮಹಾ ಮಂಟಪ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

