ಕನ್ನಡ ರಕ್ಷಣೆಗೆ ಹೋರಾಡಿ: ಡಾ. ಪಾಟೀಲ ಪುಟ್ಟಪ್ಪ
ದುರ್ಗಸಿಂಹ ಮಹಾಮಂಟಪ
ಕನ್ನಡಪ್ರಭ ವಾರ್ತೆ, ರೋಣ, ಫೆ. 23
ಕನ್ನಡ ನಾಡು, ನುಡಿ, ನೆಲ-ಜಲದ ರಕ್ಷಣೆಗೆ ಕನ್ನಡಿಗರು ಜಾಗೃತರಾಗಬೇಕು. ಕನ್ನಡದ ರಕ್ಷಣೆಗೆ ಹೋರಾಡಲು ಸಿದ್ಧರಾಗಬೇಕು. ಆ ದಿಶೆಯಲ್ಲಿ ಸಿದ್ಧತೆ ಕೈಗೊಳ್ಳಿ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಕರೆ ನೀಡಿದರು.
ಭಾನುವಾರ ಪಟ್ಟಣದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಅತ್ಯಂತ ಶ್ರೇಷ್ಠವಾಗಿದ್ದು, ಅದು ಉಳಿಯಬೇಕಿದೆ. ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧೆಡೆ ಕನ್ನಡ ಭಾಷೆಯ ಶಬ್ದಗಳು ಹರಿದು ಹಂಚಿ ಹೋಗಿವೆ. ಇಂದಿಗೂ ಇತರೆ ರಾಜ್ಯಗಳಲ್ಲಿ ಕನ್ನಡ ನಾಡಿನ ಹೆಸರುಗಳ್ಳುಳ್ಳ ಗ್ರಾಮಗಳಿವೆ. ಪಕ್ಕದ ಮಹಾರಾಷ್ಟ್ರದಲ್ಲಿ ಕನ್ನಡ ಬೇರುಗಳು ಹರಡಿವೆ ಎಂಬುದಕ್ಕೆ ಉತ್ಕನನವಾಗಬೇಕು. ಮಹಾರಾಷ್ಟ್ರದಲ್ಲಿ ಕನ್ನಡ ಎಂಬ ತಾಲೂಕಿದೆ. ರಾಜವಾಡೆ ಎಂಬ ಮಹಾರಾಷ್ಟ್ರದ ಸಂಶೋಧಕನ ಪ್ರಕಾರ ಕಲ್ಮಠ, ದೇವರಕೊಪ್ಪ, ಅಕ್ಕಲಕೊಪ್ಪ, ದೋಣಿ, ನಿರ್ಗುಡಿ, ಕನಕವಲ್ಲಿ, ಗಾಣಗಾಪುರ ಸೇರಿದಂತೆ ಅನೇಕ ಕನ್ನಡದ ಹೆಸರುಗಳ ಗ್ರಾಮಗಳಿವೆ. ಅಲ್ಲಿ 100 ಶಿಲಾ ಶಾಸನಗಳಲ್ಲಿ 80 ಶಾಸನಗಳು ಕನ್ನಡದಲ್ಲಿವೆ. 15 ಮರಾಠಿಯಲ್ಲಿ, 5 ಪ್ರಾಕೃತ ಭಾಷೆಯಲ್ಲಿವೆ. ತಮಿಳಿಗಿಂತ ಕನ್ನಡ ಅತ್ಯಂತ ಪುರಾತನ ಭಾಷೆಯಾಗಿದೆ ಎಂದರು.
ಕಾಂಗ್ರೆಸ್, ಬಿಜೆಪಿ, ಇತರೆ ಪಕ್ಷಗಳು ದೇಶವನ್ನಾಳಿದ್ದು, ಇವರ ದುರಾಡಳಿತದಿಂದ ದೇಶ ದಿವಾಳಿಯಾಗಿದೆ. ಕೇಂದ್ರದ ಕೋಟ್ಯಂತರ ಅಭಿವೃದ್ಧಿ ಅನುದಾನ ರಾಜ್ಯವನ್ನು ತಲುಪುತ್ತಿಲ್ಲ. ಮಹತ್ವಪೂರ್ಣ ನರೇಗಾ ಯೋಜನೆ ಹಳ್ಳ ಹಿಡಿಯುವಲ್ಲಿ ಜನಪ್ರತಿನಿಧಿಗಳೇ ಕಾರಣ.
ಜನತೆ ನಾಡು ರಕ್ಷಣೆಗೆ ಎಚ್ಚೆತ್ತುಕೊಂಡು ಹೋರಾಟ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡ ನಾಡಿಗೆ ನೇರೆ ರಾಜ್ಯಗಳಿಂದ ಅನ್ಯಾಯವಾಗುತ್ತಿದ್ದರೂ ಇಲ್ಲಿನ ಪ್ರಗತಿಪರರು, ಬುದ್ದಿಜೀವಿಗಳು, ವಕೀಲರು, ಡಾಕ್ಟರ್, ಶಿಕ್ಷಕರು, ರಾಜಕಾರಣಿಗಳಾದಿಯಾಗಿ ಸುಮ್ಮನೆ ಕುಳಿತಿದ್ದು ದುರ್ದೈವ ಸಂಗತಿ. ಸರ್ಕಾರ ಕರ್ನಾಟಕವನ್ನು ಸಮಗ್ರ ದೃಷ್ಟಿಕೋನದಿಂದ ಕಾಣಬೇಕು. ಇಲ್ಲವಾದಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಶಿವಪ್ಪ ಕುರಿ ಅಧ್ಯಕ್ಷತೆ ವಹಿಸಿದ್ದರು. ಗುಲಗಂಜಿ ಮಠದ ಗುರಪಾದ ಸ್ವಾಮೀಜಿ, ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳಾನಧ್ಯಕ್ಷ ಡಾ. ಸೋಮಶೇಖರ ಇಮ್ರಾಪುರ ಅವರಿಗೆ ಶಾಸಕ ಜಿ.ಎಸ್. ಪಾಟೀಲ ಅಭಿನಂದನೆ ಸಲ್ಲಿಸಿದರು.
ವಿ.ಆರ್. ಗುಡಿಸಾಗರ, ದಶರಥ ಗಾಣಿಗೇರ, ವಿಶ್ವನಾಥ ಜಿಡ್ಡಿಬಾಗೀಲ, ವೀರಣ್ಣ ಸೊನ್ನದ, ಶರಣು ಗೋಗೇರಿ, ಪ್ರಭು ಮೇಟಿ, ಎನ್.ಎಸ್. ಬಳ್ಳಾರಿ, ವಿ.ಬಿ. ಸೋಮನಕಟ್ಟಿಮಠ, ಸಂಗಮೇಶ ಬಾದವಾಡಿಗಿ, ಶಶಿಧರ ಹಟ್ಟಿ, ರಮಾಕಾಂತ ಕಮತಗಿ, ಸಿ.ಕೆ. ಕೇಸರಿ, ಬಿ.ಎಚ್. ಮಲ್ಲೇಶ, ಪ್ರೇಮಕ್ಕ ಬಿಂಕದಕಟ್ಟಿ ಮುಂತಾದವರು ಉಪಸ್ಥಿತರಿದ್ದರು.
ತಾಲೂಕು ಕಸಾಪ ಅಧ್ಯಕ್ಷ ಶಿವರಾಜ ಗುರಿಕಾರ ಸ್ವಾಗತಿಸಿದರು. ಶಿಕ್ಷಕ ಎಸ್.ಎಸ್. ತಳ್ಳಿಹಾಳ, ಶಿವಪುತ್ರಪ್ಪ ದೊಡ್ಡಮನಿ ನಿರೂಪಿಸಿದರು. ವೈ.ಎನ್.ಪಾಪನ್ನವರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

