ಗದಗ

ಪರಮಾತ್ಮ ಅಗಣಿತ ಶಕ್ತಿಯ ಖಣಿ

Published On :

ಲಕ್ಷ್ಮೇಶ್ವರ: ದೇಹದಲ್ಲಿ ಶಕ್ತಿ ಇದ್ದಾಗ ದೇವರ ಸ್ಮರಣೆ ಮಾಡುವ ಮೂಲಕ ನಮ್ಮ ಜೀವನವನ್ನು ಮುಕ್ತಿಯತ್ತ ಕೊಂಡೊಯ್ಯಬೇಕಾಗಿದೆ. ಹಿಂಸೆಯಿಂದ ಏನ್ನನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದು ಅರಿವಿನಲ್ಲಿ ಇರಬೇಕು ಎಂದು ಪಂಚಮಸಿಂಗ್ ಹೇಳಿದರು. ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಪುರಸಭೆಯ ಎದುರು ಶನಿವಾರ ಸಂಜೆ ಜರುಗಿದ ಅದ್ಬುತ ಪರಿವರ್ತತನೆ ರೋಮಾಂಚಕಾರಿ ಅನುಭವ ಎನ್ನುವ ಕಾರ್ಯಕ್ರಮದಲ್ಲಿ ಚಂಬಲ್ ಕಣಿವೆಯ ಖ್ಯಾತ ಮಾಜಿ ಡಕಾಯಿತ ಪಂಚಮಸಿಂಗ್ ತಮ್ಮ ಜೀವನದಲ್ಲಿ ಘಟಿಸಿದ ಕಹಿ ಅನುಭವಗಳ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಮೈಲಾರಪ್ಪ ಅಗಡಿ, ಆರ್.ಕೆ. ಕುಲಕರ್ಣಿ, ಕೆ.ಎಂ. ಗೋಸಗೊಂಡ, ಆರ್.ವಿ. ಕೋರಿ, ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸುರೇಶ, ನಾಗಲಾಂಭಿಕೆ ಹಾಗೂ ದೇವಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕುಮಾರಿ ವಾಣಿ ಸ್ವಾಗತಿಸಿದರು. ಬಸವರಾಜ ವಂದಿಸಿದರು.
ಎಲುಬು ರೋಗಗಳ ತಿಳಿವಳಿಕೆ ಅತ್ಯವಶ್ಯ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 24
ಮಾನವನ ದೇಹಕ್ಕೆ ಎಲುಬು ಆಧಾರವಾಗಿರುತ್ತದೆ. ನಮ್ಮ ದೇಹದ ಎಲುಬುಗಳು ಗಟ್ಟಿಯಾಗಿದ್ದು, ಎಲ್ಲವನ್ನು ತಡೆದುಕೊಳ್ಳುವಂತಹ ಶಕ್ತಿ ಹೊಂದಿರುತ್ತವೆ. ಇಂತಹ ಎಲುಬುಗಳಿಗೂ ರೋಗ ತಗುಲುತ್ತಿರುವುದನ್ನು ಜನರು ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಡಾ. ವರುಣ ಸವಡಿ ಹೇಳಿದರು.
ಅವರು ಪಟ್ಟಣದ ಅಗಡಿ ಸನ್ ರೈಸ್ ಆಸ್ಪತ್ರೆಯಲ್ಲಿ ಶುಕ್ರವಾರ ಎಲುಬಿನ ಸಾಂದ್ರತೆ ಕುರಿತು ಹಮ್ಮಿಕೊಳ್ಳಲಾಗಿದ್ದ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಎಲುಬುಗಳಿಗೆ ಉಂಟಾಗುವ ಆಸ್ಪಿಯೋಪೋರೊಸಿಸ್ ಅಪರೂಪದ ಕಾಯಿಲೆಯಾಗಿದ್ದು, ಈ ರೋಗಕ್ಕೆ ತುತ್ತಾಗುವ ವ್ಯಕ್ತಿಯನ್ನು ಸದ್ದು ಮಾಡದೇ ಕೊಲ್ಲುವಂತಹ ರೋಗವಾಗಿದೆ. ಜನರು ಇದನ್ನು ಸಾಮಾನ್ಯವಾಗಿ ನಿರ್ಲಕ್ಷಿಸುವುದನ್ನು ಕಾಣಬಹುದಾಗಿದೆ. ಇದರ ನಿರ್ಲಕ್ಷ್ಯದಿಂದ ಬೆನ್ನುಮೂಳೆ, ಚಪ್ಪೆ ಮೂಳೆ ಮುರಿತಕ್ಕೆ ಕಾರಣವಾಗಬಹುದಾಗಿದೆ. ನಮ್ಮ ದಿನನಿತ್ಯದ ಆಹಾರದಲ್ಲಿ ಹಾಲು, ಮೊಸರು, ತರಕಾರಿಗಳನ್ನು ಸರಿಯಾಗಿ ಉಪಯೋಗಿಸುವುದರಿಂದ ಈ ರೋಗದಿಂದ ಪಾರಾಗಬಹುದಾಗಿದೆ ಎಂದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅರುಣ ಪಾಟೀಲ, ಡಾ. ರೇಷ್ಮಾ ರಾಥೋಡ, ಡಾ. ಪ್ರಕಾಶ ಗದಗ, ಪ್ರಾಚಾರ್ಯ ಡಾ. ಎಸ್.ವಿ. ಗೊರಬಾಳ ಮುಂತಾದವರು ಇದ್ದರು. ಡಾ. ಅಜ್ಜು ಗಾಂವಕರ ಸ್ವಾಗತಿಸಿದರು. ಡಾ. ಎಂ.ಬಿ. ಕುಲಕರ್ಣಿ ನಿರೂಪಿಸಿ, ವಂದಿಸಿದರು.
ಅನುಷ್ಠಾನಕ್ಕೆ ಅಧ್ಯಯನ ಅವಶ್ಯಕ: ಮಂಟೇಲಿಂಗಾಚಾರ್
ಗದಗ: ಶೈಕ್ಷಣಿಕ ಯೋಜನೆಗಳ ಅನುಷ್ಠಾನಕ್ಕೆ ಅಧ್ಯಯನ ಅವಶ್ಯಕ ಎಂದು ಶಿಕ್ಷಣ ಇಲಾಖೆಯ ಸಹನಿರ್ದೇಶಕ ಮಂಟೇಲಿಂಗಾಚಾರ್ ಹೇಳಿದರು.
ಅವರು ಈಚೆಗೆ ಹೊಸಹಳ್ಳಿಯ ಬೂದೀಶ್ವರ ವಿದ್ಯಾಪೀಠದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಗದಗ ಜಿಲ್ಲಾ ಶೈಕ್ಷಣಿಕ ಎಲ್ಲಾ ಹಂತದ ಸಂದರ್ಶನಾಧಿಕಾರಿಗಳ 2 ದಿನಗಳ ಪುನಚ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿ, ಶಾಲೆಯಲ್ಲಿ ಶೈಕ್ಷಣಿಕ ವಾತಾವರಣ ಸುಂದರವಾಗಿ ತಯಾರಿಸುವಂತೆ ಮಾರ್ಗದರ್ಶನ ಬೇಕಾಗಿದೆ ಎಂದರು.  ಸಾನ್ನಿಧ್ಯ ವಹಿಸಿದ್ದ ಹೊಸಹಳ್ಳಿಯ ಬೂದೀಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಆಡಳಿತಾಧಿಕಾರಿ ಎಸ್.ಎಸ್. ಬೆಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಡಿಪಿಐ ಬಿ.ವಿ. ರಾಜೇದ್ರಪ್ರಸಾದ, ಡಯಟ್ ಪ್ರಾಚಾರ್ಯ ಬಿ.ಎಸ್. ರಘುವೀರ, ಜಿಲ್ಲಾ ಶಿಕ್ಷಣಾಧಿಕಾರಿ ಕೆ.ಡಿ. ಬಡಿಗೇರ, ಜಿಲ್ಲಾ ಆಕ್ಷದಾಸೊಹದ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ, ಬಿಇಒ ಎಸ್.ಆರ್. ಹೂಗಾರ, ಆರ್.ಎಸ್. ಬುರಡಿ, ಡಿ.ಐ. ಅಸುಂಡಿ, ಎಂ.ಎ. ರಡ್ಡೇರ, ಸುರೇಶ ಹುಗ್ಗಿ, ಐ.ಬಿ. ಬೆನಕೊಪ್ಪ, ಶಂಕರ ಹಳ್ಳಿಗುಡಿ, ಬಸವರಾಜ ಶಿವಪುರ, ಎಂ.ಎಚ್. ಕಂಬಳಿ, ಎ.ಎ. ಖಾಜಿ, ಆರ್.ಎಸ್. ತಿರುಮಲೆ ಅವರನ್ನು ಸನ್ಮಾನಿಸಲಾಯಿತು. ಸಿಅರ್ಪಿ ಎ.ವಿ. ಪ್ರಭು ಸ್ವಾಗತಿಸಿ, ನಿರೂಪಿದರು. ಸಮನ್ವಯಾಧಿಕಾರಿ ವಿ.ವಿ. ನಡುವಿನಮನಿ ವಂದಿಸಿದರು.
ಶಿವರಾತ್ರಿ: ಕಾರ್ಯಕ್ರಮ
ಮುಳಗುಂದ: ಸಮೀಪದ ನೀಲಗುಂದ ಗ್ರಾಮದ ಗುದ್ನೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ. 26 ಮತ್ತು 27ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಫೆ. 26ರಂದು ಸಂಜೆ 5ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಯಲಬುರ್ಗಾದ ಶ್ರೀಧರ ಮುರಡಿಮಠದ ಬಸವಲಿಂಗ ಶ್ರೀಗಳು ಹಾಗೂ ಅಣ್ಣಿಗೇರಿಯ ದಾಸೋಹಮಠದ ಶಿವಕುಮಾರ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಆರ್.ಎನ್. ದೇಶಪಾಂಡೆ, ಮುಳಗುಂದದ ಎಂ.ಡಿ. ಬಟ್ಟೂರ, ಎಪಿಎಂಸಿ ಸದಸ್ಯ ಶಿವಣ್ಣ ನೀಲಗುಂದ, ಆಗ್ರಾ ಜಿಲ್ಲಾಧಿಕಾರಿ ಅರವಿಂದ ಬಂಗಾರಿ, ಗದಗ ಗ್ರಾಮೀಣ ಬಿಇಒ ಶಂಕರ ಹೂಗಾರ, ಮುಳಗುಂದ ಪಿಎಸ್ಐ ಪಿ.ಜಿ. ಕವಟಗಿ ಮುಂತಾದವರು ಭಾಗವಹಿಸುವರು. ನಂತರ ಬಸವರಾಜ ಜಕ್ಕಮ್ಮನವರ ಹಾಗೂ ಸಂಗಡಿಗರಿಂದ ಜಾನಪದ ಕಾರ್ಯಕ್ರಮ ಜರುಗಲಿದೆ. ಫೆ. 27ರಂದು ಮಧ್ಯಾಹ್ನ 3ಕ್ಕೆ ಸುಮಂಗಲಿಯರಿಂದ ಮಲ್ಲಿಕಾರ್ಜುನ ಶ್ರೀಗಳ ಕುಂಭೋತ್ಸವ, ಸಂಜೆ 7.30ಕ್ಕೆ ಮಹಾಶಿವರಾತ್ರಿ ಜಾಗರಣಾ ಕಾರ್ಯಕ್ರಮ ಜರುಗಲಿದ್ದು, ಮುರುಘಾಮಠ-ಧಾರವಾಡ ಗವಿಮಠದ ಪೀಠಾಧ್ಯಕ್ಷ ಮಲ್ಲಿಕಾರ್ಜುನ ಶ್ರೀಗಳು ಹಾಗೂ ಕಂಪ್ಲಿ ಕಲ್ಮಠದ ಪ್ರಭು ಶ್ರೀಗಳು ಸಾನ್ನಿಧ್ಯ ವಹಿಸುವರು. ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಸಂಸದ ಶಿವಕುಮಾರ ಉದಾಸಿ, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ವಿಪ ಸದಸ್ಯ ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಹಾಸನದ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣವರ, ಲಕ್ಷ್ಮೇಶ್ವರ ಚಂದನ ಶಾಲೆಯ ಸಂಸ್ಥಾಪಕ ಟಿ.ಈಶ್ವರ ಆಗಮಿಸುವರು. ಅಹೋರಾತ್ರಿ ಜಾನಪದ, ಹಾಸ್ಯ ಮೇಳಗಳು ನಡೆಯುವವು.
ಜಂಗಮ ವಟುಗಳಿಗೆ ದೀಕ್ಷೆ
ಹೊಳೆಆಲೂರು: ಸ್ಥಳೀಯ ಪಂಚಾಚಾರ್ಯ ಜಂಗಮಾಭಿವೃದ್ಧಿ ಸಂಘ, ಶಿವಪಾರ್ವತಿ ಮಾಂಗಲ್ಯ ಮಂದಿರ ಸೇವಾ ಸಮಿತಿ ಹೊಳೆಆಲೂರು ಇವುಗಳ ಸಹಯೋಗದಲ್ಲಿ ಶಿವಪಾರ್ವತಿ ಮಾಂಗಲ್ಯ ಮಂದಿರದಲ್ಲಿ ಫೆ. 27ರಂದು ಸಂಜೆ 5ಕ್ಕೆ ಲಿಂಗದೀಕ್ಷಾ(ಅಯ್ಯಾಚಾರ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸದಾಶಿವ ಮಹಾಂತ ಶಿವಾಚಾರ್ಯ ಶ್ರೀಗಳು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮಾ. 1ರಂದು ಶನಿವಾರ ಶಿವರಾತ್ರಿ ಅಮವಾಸ್ಯೆಯಂದು ಸಂಜೆ 5ಕ್ಕೆ ಬಸವರಾಜ ನಾರಾಯಣಪುರ ದಂಪತಿಗಳಿಂದ ಅಭಿನವ ಚಂದ್ರಶೇಖರ ಶಿವಾಚಾರ್ಯ ಶ್ರೀಗಳಿಗೆ ಅಕ್ಕಿಯ ತುಲಾಭಾರ ಕಾರ್ಯಕ್ರಮ ಜರುಗಲಿದೆ. ಮಾಹಿತಿಗಾಗಿ ಮೊ. 9481726695, 9916112163, 9972403553ಗೆ ಸಂಪರ್ಕಿಸಬಹುದು.
ಉಸುಕಿನ ಚೀಲ ಎತ್ತುವ ಸ್ಪರ್ಧೆ
ಗದಗ: ಗದಗ ಜಿಲ್ಲಾ ಲಕ್ಕುಂಡಿ ಉತ್ಸವದ ಅಂಗವಾಗಿ ಜರುಗಿದ ಕ್ರೀಡಾ ಸ್ಪರ್ಧೆಗಳ ಭಾರ ಎತ್ತುವ ಸ್ಪರ್ಧೆಯಲ್ಲಿ ಸಂಗ್ರಾಣಿ ಕಲ್ಲು ಎತ್ತುವ ವಿಭಾಗದಲ್ಲಿ 120 ಕೆ.ಜಿ. ಕಲ್ಲಿನ ಸಿಡಿ ಹೊಡೆದ ಹಾಸಲಗೇರಿಯ ಸೋಮನಾಥ ಮೇಲ್ಮನೆ ಪ್ರಥಮ ಸ್ಥಾನ, ಲಿಂಗರಾಜ ದಿನ್ನಿ ದ್ವಿತೀಯ ಸ್ಥಾನ ಹಾಗೂ ನಾಗರಾಜ ಎಂ. ತೃತೀಯ ಸ್ಥಾನ ಪಡೆದರು. ಲಕ್ಕುಂಡಿಯ ಎಲ್ಲಪ್ಪ ನಿಡಗುಂದಿ ಪ್ರಥಮ, ಸಿದ್ಧಯ್ಯ ಕಲ್ಮಠ ದ್ವಿತೀಯ ಹಾಗೂ ಪರಶುರಾಮ ಹಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.