ಸಾಗಾಟವಾಗದ ಗೋವಿನಜೋಳ: ಆತಂಕ
ಕನ್ನಡಪ್ರಭ ವಾರ್ತೆ, ನರಗುಂದ, ಫೆ. 28
ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಿರುವ ಗೋವಿನಜೋಳವನ್ನು ಸಕಾಲದಲ್ಲಿ ಸಾಗಾಣಿಕೆ ಮಾಡುತ್ತಿಲ್ಲ. ಇನ್ನೊಂದೆಡೆ ನಾಲ್ಕೈದು ದಿನಗಳಿಂದ ತೀವ್ರ ಮೋಡಕವಿದ ವಾತಾವರಣ ನಿರ್ಮಾಣವಾಗಿ ಬುಧವಾರ ಮತ್ತು ಗುರುವಾರ ಮಳೆಯಾದ ಹಿನ್ನೆಲೆಯಲ್ಲಿ ತಾಲೂಕಿನ ರೈತರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲದೆ ಇರುವುದರಿಂದ ರೈತರು ಸರ್ಕಾರ ಪ್ರಾರಂಭಿಸಿರುವ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಕ್ವಿಂ ರು. 1310ರ ಬೆಲೆಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಿದ್ದಾರೆ. ಆದರೆ ಅವುಗಳ ಸಾಗಾಟ ಮಾತ್ರ ಆಗಿಲ್ಲ.
ಸಾಗಾಣಿಕೆ ಇಲ್ಲ: ಸರ್ಕಾರ ಪ್ರಾರಂಭಿಸಿರುವ ಬೆಂಬಲ ಬೆಲೆಯ ಯೋಜನೆಯಡಿ ರೈತರು ಗೋವಿನಜೋಳ ಮಾರಾಟ ಮಾಡಿದ್ದಾರೆ. ಅದರ ತೂಕವೂ ಆಗಿ ವಾರವೇ ಕಳೆದಿದೆ. ಆದರೂ ಸರ್ಕಾರ ಮತ್ತು ಅವುಗಳನ್ನು ಖರೀದಿಸಿರುವ ಕೇಂದ್ರಗಳು ಗೋವಿನಜೋಳವನ್ನು ಸಾಗಾಣಿಕೆ ಮಾಡದೇ ಖರೀದಿಸಿದ ಕೇಂದ್ರದಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಈ ಬಗ್ಗೆ ಯಾರೊಬ್ಬರೂ ಗಮನ ನೀಡುತ್ತಿಲ್ಲ. ಅದರಲ್ಲಿಯೂ ಖರೀದಿ ಕೇಂದ್ರದಿಂದ ಗೋವಿನಜೋಳ ಸಾಗಾಣಿಕೆಯಾಗುವವರೆಗೂ ಅವುಗಳ ಜವಾಬ್ದಾರಿ ರೈತರದ್ದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ.
ವಿವಿಧೆಡೆ ಖರೀದಿ: ತಾಲೂಕಿನ ನರಗುಂದ, ಚಿಕ್ಕನರಗುಂದ, ಶಿರೋಳ, ಕೊಣ್ಣೂರು ಈ ನಾಲ್ಕು ಕೇಂದ್ರಗಳಿಂದ ಒಟ್ಟು 2413 ರೈತರಿಂದ 423788 ಚೀಲ ಗೋವಿನಜೋಳ ಖರೀದಿಸಿ ಪಟ್ಟಣದಲ್ಲಿರುವ ಎಲ್ಲ ಗೋದಾಮುಗಳಲ್ಲಿ ಸಂಗ್ರಹಿಸಲಾಗಿದೆ. ಇನ್ನೂ 2ಸಾವಿರಕ್ಕೂ ಹೆಚ್ಚಿನ ಚೀಲಗಳನ್ನು ತೂಕ ಮಾಡಿ ಸಾಗಾಣಿಕೆ ಮಾಡಬೇಕಾಗಿದೆ. ಇದಕ್ಕೂ ಯಾರೂ ಪ್ರಯತ್ನಿಸುತ್ತಿಲ್ಲ. ಸ್ಥಳದ ಕೊರತೆ ಇದೆ ಎನ್ನುವ ನೆಪದ ಮೇಲೆ ರೈತರ ಶೋಷಣೆ ನಡೆಯುತ್ತಿದೆ.
ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳಿಯ ನಿಯಮಿತ ಪ್ರಭಾರ ಶಾಖಾ ವ್ಯವಸ್ಥಾಪಕ ಕೆ.ಜಿ.ಮುರನಾಳಕರ ಮಾತನಾಡಿ, ಗೋದಾಮುಗಳ ಕೊರತೆಯಿಂದ ಗೋವಿನಜೋಳ ಸಾಗಾಣಿಕೆ ವಿಳಂಬವಾಗಿದೆ. ಸಾಧ್ಯವಾದಷ್ಟು ಬೇಗನೆ ತೂಕ ಮಾಡಿಸಲಾಗುವುದು ಎಂದರು.
-ಎಸ್.ಜಿ. ತೆಗ್ಗಿನಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

