ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ: ಪ್ರಯಾಣಿಕರು ಸುರಕ್ಷಿತ
ರಾಯಬಾಗ: ತಾಲೂಕಿನ ಚಿಂಚಲಿ ಬಳಿ ಬುಧವಾರ ರಾತ್ರಿ 8 ಗಂಟೆಯ ಹೊತ್ತಿಗೆ ಮುಂಬೈಗೆ ಹೊರಟಿದ್ದ ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ರೇಲ್ವೆ ಸಿಬ್ಬಂದಿಗಳು, ಸ್ಥಳೀಯರು, ಪ್ರಯಾಣಿಕರು ಸೇರಿ ಬೆಂಕಿ ಆರಿಸಿದ್ದು 25 ನಿಮಿಷಗಳ ನಿಲುಗಡೆ ಬಳಿಕ ರೈಲು ಮುಂದೆ ಪ್ರಯಾಣ ಬೆಳೆಸಿತು.
6.20 ಕ್ಕೆ ಬೆಳಗಾವಿಯಿಂದ ಹೊರಟಿದ್ದ ಯಶವಂತಪುರ- ದಾದರ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು, 7.50 ಕ್ಕೆ ರಾಯಬಾಗ ರೈಲು ನಿಲ್ದಾಣ ತಲುಪಿತ್ತು, 7.55 ಕ್ಕೆ ರಾಯಬಾಗ ರೈಲು ನಿಲ್ದಾಣದಿಂದ ಹೊರಟಾಗ ರೈಲಿನ ಎರಡನೇ ಬೋಗಿಯಲ್ಲಿದ್ದ ಪ್ರಯಾಣಿಕರಿಗೆ ಕಮಟು ವಾಸನೆ ಬರಲಾರಂಭಿಸಿತು. ಇದರಿಂದ ಭಯಭೀತಿಗೊಂಡ ಪ್ರಯಾಣಿಕರು ಎಲ್ಲಿ ಬೆಂಕಿ ಹೊತ್ತಿದೆ ಎಂದು ಹುಡುಕಲಾರಂಭಿಸಿದರು. ಅಷ್ಟೊತ್ತಿಗೆ ಏರ್‌ಪೈಪ್ ಸೋರಿಕೆ ಉಂಟಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿರುವುದು ಪ್ರಯಾಣಿಕರಿಗೆ ಕಂಡುಬಂದಿತು. ಕೂಡಲೇ ಬೋಗಿಯಲ್ಲಿನ ಸುರಕ್ಷತಾ ಚೈನ್ ಎಳೆದು ಪ್ರಯಾಣಿಕರು ರೈಲನ್ನು ನಿಲ್ಲಿಸಿದರು. ಬೆಂಕಿ ಹೊತ್ತಿರುವುದರಿಂದ ಗಾಬರಿಯಾಗಿದ್ದ ಪ್ರಯಾಣಿಕರು ದಿಕ್ಕಾಪಾಲಾಗಿ ಕಲ್ಲು ಮುಳ್ಳು ಎನ್ನದೇ ರೈಲು ಬಿಟ್ಟು ಓಡಿ ಹೋದರು. ಆದರೆ ರೈಲಿನಲ್ಲಿ ಚಹಾ ಮಾರುವ ಹುಡುಗರು, ಕೆಲ ಪ್ರಯಾಣಿಕರು ಹಾಗೂ ರೈಲಿನ ಸಿಬ್ಬಂದಿ ಸೇರಿಕೊಂಡು ತಮ್ಮ ಬಳಿ ಇದ್ದ ಚಹಾವನ್ನು ಸುರಿದು ಬೆಂಕಿಯನ್ನು ನಂದಿಸಿದ್ದಾರೆ. ಚಹಾ ಖಾಲಿಯಾದ ಬಳಿಕ ನೀರನ್ನು ಸುರಿದು ಬೆಂಕಿಯನ್ನು ನಂದಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಚಿಂಚಲಿ ರೇಲ್ವೆ ನಿಲ್ದಾಣದಿಂದ ಕೇವಲ 2 ಕಿ.ಮೀ. ಹಿಂದೆ ಈ ದುರ್ಘಟನೆ ಸಂಭವಿಸಿತು.
25 ನಿಮಿಷ ರೈಲು ನಿಲುಗಡೆ: ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿ ಯಶವಂತಪುರ- ದಾದರ ರೈಲು ಸುಮಾರು 25 ನಿಮಿಷಗಳ ಕಾಲ ನಿಲುಗಡೆಯಾಗಿತ್ತು. ನಂತರ ರೈಲು ಸುರಕ್ಷತಾ ಸಿಬ್ಬಂದಿ ಹಾಗೂ ಗಾರ್ಡ್ ಎಲ್ಲ ಬೋಗಿಗಳನ್ನು ಪರಿಶೀಲಿಸಿದ ಬಳಿಕ ರೈಲಿಗೆ ಹಸಿರು ನಿಶಾನೆ ತೋರಿಸಲಾಯಿತು. ಆದರೆ, ಪ್ರಯಾಣಿಕರು ಭಯಭೀತಿಯಿಂದಲೇ ತಮ್ಮ ಪ್ರಯಾಣ ಮುಂದುವರೆಸಿದರು.
ಬ್ರೇಕ್ ಲೈನರ್‌ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಏರ್‌ಪೈಪ್‌ನಲ್ಲಿ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ರೇಲ್ವೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಬಳಿಕ ರಾಯಬಾಗ, ಚಿಂಚಲಿಯಿಂದ ಸುರಕ್ಷತಾ ಸಿಬ್ಬಂದಿ ಆಗಮಿಸಿ ಏರ್‌ಪೈಪ್ ಹಾಗೂ ಬ್ರೇಕ್ ಲೈನರ್ ಸರಿಪಡಿಸಿದರು. ಬಳಿಕ ಚಾಲುಕ್ಯ ಎಕ್ಸ್‌ಪ್ರೆಸ್ ಸಂಚಾರ ಮುಂದುವರಿಸಿತು ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಂತ್ರಿಕ ದೋಷ: ತಾಂತ್ರಿಕ ಲೋಪದೋಷದಿಂದ ಯಶವಂತಪುರ- ದಾದರ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸಕಾಲಕ್ಕೆ ರೈಲಿನಲ್ಲಿದ್ದ ಪ್ರಯಾಣಿಕರು ಬೆಂಕಿ ನಂದಿಸಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ರೈಲ್ವೆ ಸಿಬ್ಬಂದಿ ತುರ್ತು ದುರಸ್ತಿ ಕಾರ್ಯ ಕೈಗೊಂಡಿದ್ದರಿಂದ ರೈಲು ಪ್ರಯಾಣ ಸುರಕ್ಷಿತವಾಗಿ ತೆರಳಿದೆ ಎಂದು ಜಿಲ್ಲಾಧಿಕಾರಿ ಎನ್. ಜಯರಾಂ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

