ಕಾಳಸಂತೆಯಲ್ಲಿ ಪಡಿತರ ಮಾರಾಟ: ಆರೋಪ
ರೋಣ: ಸರ್ಕಾರ ಅನ್ನಭಾಗ್ಯ ಯೋಜನೆ ಮೂಲಕ ಬಡವರಿಗೆ ಆಹಾರ ಭದ್ರತೆ ನೀಡಿದ್ದೇವೆ ಎಂದು ಬೀಗುತ್ತಿದೆ. ಆದರೆ, ತಾಲೂಕಿನ ಬೆಳವಣಕಿ ಗ್ರಾಮದ ನ್ಯಾಯ ಬೆಲೆ ಅಂಗಡಿಯಲ್ಲಿ ಬಡವರಿಗೆ ವಿತರಿಸಬೇಕಾದ ಅನ್ನಭಾಗ್ಯಕ್ಕೆ ಕನ್ನ ಬಿದ್ದಿದ್ದು, ಪಡಿತರ ಆಹಾರ ಧಾನ್ಯ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಡಿವೈಎಫ್ಐ ಗದಗ ಜಿಲ್ಲಾ ಸಂಚಾಲಕ, ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಹಾಗುಂಡಪ್ಪ ಅಂಗಡಿ, ಮುಖಂಡ ಮಹೇಶ ಹಿರೇಮಠ ಆರೋಪಿಸಿದರು.
ಈ ಕುರಿತು ಬುಧವಾರ ಪಟ್ಟಣದ ಬಸವೇಶ್ವರ ದೇಗುಲದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಅವರು, ಬೆಳವಣಕಿ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿ ವಿತರಕ ಹಾಗೂ ಗುತ್ತಿಗೆದಾರರಾದ ಎಸ್.ಕೆ. ಕಮ್ಮಾರ ಎಂಬುವರು ಅನೇಕ ತಿಂಗಳಿಂದ ಬಡವರಿಗೆ ವಿತರಿಸಬೇಕಿದ್ದ ಪಡಿತರ ಆಹಾರ ಧಾನ್ಯವನ್ನು ಒಂದಿಲ್ಲೊಂದು ನೆಪ ಹೇಳಿ ಲಪಟಾಯಿಸುತ್ತಾ ಬಂದಿದ್ದಾನೆ.
ಈ ಕುರಿತು ಡಿವೈಎಫ್ಐ ನೇತೃತ್ವದಲ್ಲಿ ನ್ಯಾಯಬೆಲೆ ಅಂಗಡಿ ಮೇಲೆ ನಿಗಾವಹಿಸಿ ಅವ್ಯವಹಾರ ನಡೆದ ಕುರಿತು ಖಾತ್ರಿಪಡಿಸಿಕೊಳ್ಳಲಾಗಿದೆ.
2013ರ ನವೆಂಬರ್ ತಿಂಗಳಲ್ಲಿ 28 ಕ್ವಿಂಟಲ್ ಹಾಗೂ ಡಿಸೆಂಬರ್ ತಿಂಗಳಲ್ಲಿ 79 ಕ್ವಿಂಟಲ್ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದ್ದ ಕುರಿತು ಬೆಳಕಿಗೆ ಬಂದಿದೆ. ಇದರಿಂದಾಗಿ ಡಿಸೆಂಬರ್ ತಿಂಗಳ ಆಹಾರ ವಿತರಣೆಯಲ್ಲಿ 140 ಪಡಿತರ ಫಲಾನುಭಗಳಿಗೆ ಆಹಾರಧಾನ್ಯ ಸಿಗದಂತೆ ಪಡಿತರ ಕಾರ್ಡ್ಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದಾನೆ.
ಈ ಹಿಂದೆ ವಿತರಿಸಲಾದ ಆಹಾರ ಧಾನ್ಯವು ಧೂಳು ಮಿಶ್ರಿತವಾಗಿತ್ತು. ಈ ಕುರಿತು ಕೇಳಿದರೆ ವಿತರಕರು ಬೇಜವಾಬ್ದಾರಿತನದಿಂದ ವರ್ತಿಸುತ್ತಾರೆ.
ಬಡವರ ಅನ್ನಕ್ಕೆ ಕನ್ನ ಹಾಕಿದ ನ್ಯಾಯಬೆಲೆ ಅಂಗಡಿಕಾರ ಎಸ್.ಕೆ. ಕಮ್ಮಾರ ಹಾಗೂ ತಾಲೂಕು ಆಹಾರ ನಿರೀಕ್ಷಕ ಮಾರತಾಂಡಪ್ಪ ಇವರು ನಡೆಸುತ್ತಿರುವ ಅವ್ಯವಹಾರ ಕುರಿತು ರೋಣ ತಹಸೀಲ್ದಾರ್ ಎ.ಜಿ. ಪಂಡಿತ ಅವರ ಗಮನಕ್ಕೆ ತರಲಾಗಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೆ ಹೊರತು ಈವರೆಗೂ ಕ್ರಮಕ್ಕೆ ಮುಂದಾಗಿಲ್ಲ. ಫಲಾನುಭವಿಗಳಿಗೆ ನ್ಯಾಯ ಸಿಗದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಫ್ಐ ಮುಖಂಡ ಮಹೇಶ ಹಿರೇಮಠ, ಸಂಕಪ್ಪ ಕುರಹಟ್ಟಿ, ಜಗದೀಶ ಕುರ್ಲಗೇರಿ, ಶರಣು ಶಿರೋಳ, ಗ್ರಾಪಂ ಸದಸ್ಯ ಕೃಷ್ಣಪ್ಪ ಮಾಡಳ್ಳಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

