ಗದಗ

ಖಾತ್ರಿ ದುರ್ಬಳಕೆ: ಗ್ರಾಪಂ ಸದಸ್ಯರ ಆರೋಪ

Published On :

ರೋಣ: 2011-12 ಮತ್ತು 13ನೇ ಸಾಲಿನ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಬಳಕೆಯಾಗದೇ ದುರ್ಬಳಕೆಯಾಗಿದೆ. ಖಾತ್ರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಗ್ರಾಪಂ, ತಾಪಂ ಅಧಿಕಾರಿಗಳು ವಿವರಣೆ ನೀಡಬೇಕು ಎಂದು ಸವಡಿ ಗ್ರಾಪಂ ಸದಸ್ಯರಾದ ರಫೀಕ್ ಸೊಟಕನಾಳ, ಬಸವರಾಜ ಯಲಿಗಾರ, ಮಂಜುನಾಥ ಗದಗ ಆರೋಪಿಸಿದರು.
ತಾಲೂಕಿನ ಸವಡಿ ಗ್ರಾಮದ ಗ್ರಾಪಂ ಕಾರ್ಯಾಲಯದಲ್ಲಿ ಜರುಗಿದ ತಾಲೂಕು ಮಟ್ಟದ ಜನಸ್ಪಂದನಾ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬುದಕ್ಕೆ ಕಳೆದ ಸಾಲಿನಲ್ಲಿ ಗ್ರಾಮದಲ್ಲಿನ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮೈದಾನ ಅಭಿವೃದ್ಧಿ ನೆಪದಲ್ಲಿ ರು. 50 ಸಾವಿರ ಅನಗತ್ಯ ಖರ್ಚು ಹಾಕಲಾಗಿದೆ. ಈ ಕುರಿತು ಗ್ರಾಮ ಪಂಚಾಯ್ತಿ ಸದಸ್ಯರಿಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ. 2012-13ರಲ್ಲಿ ಖಾತ್ರಿ ಯೋಜನೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ತಿಳಿಸಿ ಎಂದು 8 ತಿಂಗಳಿನಿಂದ ದುಂಬಾಲು ಬಿದ್ದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಇಒ ಎಸ್.ಎಂ. ಪಿಡಶೆಟ್ಟಿ ಮಾತನಾಡಿ, ಖಾತ್ರಿ ಯೋಜನೆಯಲ್ಲಿ ರು. 36 ಲಕ್ಷ ಅನುದಾನ ಮಂಜೂರಾಗಿದ್ದು, ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.
ಚಹಾ ಅಂಗಡಿಯಲ್ಲಿ ಸರಾಯಿ ಮಾರಾಟ:ಇಲ್ಲಿನ ಬಹುತೇಕ ಚಹಾ ಅಂಗಡಿಗಳಲ್ಲಿ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾರೆ. ಕುಡಿಯಲು ಗ್ರಾಮದಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆದರೆ, ಸಾರಾಯಿ ಮಾತ್ರ ನಿತ್ಯ ಎಗ್ಗಿಲ್ಲದೆ ಎಲ್ಲೆಂದರಲ್ಲಿ ದೊರೆಯುತ್ತಿದೆ. ಇಲ್ಲಿ ಕುಡಿಯಲು ನೀರು, ಚಹಾದ ಬದಲು ಸಾರಾಯಿಯೇ ಹೆಚ್ಚಾಗಿ ಸಿಗುತ್ತಿದೆ. ಚಹಾ ಅಂಗಡಿಗೆ ಹೋಗುವವರು ಸಾರಾಯಿ ಕುಡಿಯಲು ಹೋಗುತ್ತಿದ್ದಾರೆ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ. ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ನಿಲ್ಲಿಸಿ, ಮಾರಾಟ ಮಾಡುವವರ ಮೇಲೆ ಯೋಗ್ಯ ಕ್ರಮ ಜರುಗಿಸಬೇಕು ಎಂದು ಗ್ರಾಮದ ಶಿವಪ್ಪ ಹುನಗುಂದ, ಪ್ರಕಾಶ ಜೋಗರಡ್ಡಿ, ಶರಣಪ್ಪ ಇಟಗಿ ತಾಲೂಕು ಅಬಕಾರಿ ನಿರೀಕ್ಷಕ ಎ.ಬಿ. ಮಠಪತಿ ಇವರಿಗೆ ಒತ್ತಾಯಿಸಿದರು.
ಗೊಂದಲದ ಗೂಡಾದ ಸಭೆ: ಸಭೆಯಲ್ಲಿ ಕೆಲ ವಿಷಯಗಳ ಕುರಿತು ಚರ್ಚಿಸಲಾಯಿತೇ ಹೊರತು ಕೆಲ ನಿರ್ದಿಷ್ಟ ವಿಷಯಗಳು ಚರ್ಚೆಯಾಗದೇ ಸಭೆಯೂ ಗೊಂದಲದ ಗೂಡಾಗಿ ಮಾರ್ಪಟ್ಟಿತು. ಇನ್ನೂ ಸಭೆಗೆ ಕೆಲ ಇಲಾಖೆಯ ಮುಖ್ಯ ಅಧಿಕಾರಿಗಳು ಬಾರದಿದ್ದರಿಂದ ಸಭೆಯೂ ಕಾಟಾಚಾರಕ್ಕೆ ಎಂಬಂತೆ ನಡೆಯಿತು.
ಸಭೆಯೂ ಕೇವಲ ಗದ್ದಲ, ಗುಂಪು ಚರ್ಚೆಯಲ್ಲಿಯೇ ಗೊಂದಲದ ಗೂಡಾಗಿ ಮಾರ್ಪಾಡಾಗಿ ಅಂತ್ಯಗೊಂಡಿತು. ಉಪ ತಹಸೀಲ್ದಾರ್ ಎನ್.ಎಸ್. ಕೂಡಲ, ಗ್ರಾಪಂ ಅಧ್ಯಕ್ಷ ವಿ.ಎಸ್. ಪರಡ್ಡಿ, ಉಪಾಧ್ಯಕ್ಷೆ ಎಸ್.ಎಸ್. ಜಕ್ಕಲಿ, ಬಿಇಒ ಡಿ.ಐ. ಅಸುಂಡಿ, ಸಿಡಿಪಿಒ ಬಿ.ಎಸ್. ಮೋಕಾಶಿ, ಅಬಕಾರಿ ನಿರೀಕ್ಷಕ ಎ.ಬಿ. ಮಠಪತಿ, ಸಮಾಜ ಕಲ್ಯಾಣ ಅಧಿಕಾರಿ ಮೇಸ್ತಾ, ಆರ್.ಎಸ್. ದೊಡ್ಡಮನಿ, ವಿ.ಎಸ್. ಬಾವಿ ಸೇರಿದಂತೆ ಬೆರಳೆಣಿಕೆ ಅಧಿಕಾರಿಗಳು ಮಾತ್ರ ಸಭೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.