ಗದಗ

ಸುದ್ದಿ ಸಂಕ್ಷೇಪ

Published On :

ದೇವಾಂಗ ಜ್ಯೋತಿ ಪ್ರಶಸ್ತಿಗೆ ಆಯ್ಕೆ
ಲಕ್ಷ್ಮೇಶ್ವರ: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮೂಲತ-ಶಿಗ್ಲಿ ಗ್ರಾಮದವರಾದ ಈಗ ರಾಣೆಬೆನ್ನೂರಿನಲ್ಲಿ ನೆಲೆಸಿರುವ ಲಕ್ಮೀಕಾಂತ ಹುಲಗೂರ ಅವರಿಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೂಟಿಹಾಳ ಗ್ರಾಮದ ದಯಾನಂದಪುರಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಾಗೂ ಹಂಪಿಯ ನುಡಿ ಪತ್ರಿಕಾ ಬಳಗ ಬೆಂಗಳೂರ ಮತ್ತು ನೇಕಾರ ಸಂಘದ ಪತ್ರಿಕೆ ಕಮತಗಿ ಆಶ್ರಯದಲ್ಲಿ ಲಕ್ಷ್ಮೀಕಾಂತ್ ಹುಲಗೂರ ಅವರಿಗೆ 2013-14ನೇ ಸಾಲಿನ ದೇವಾಂಗ ಜ್ಯೋತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜ. 29ರಂದು ದೂಟಿಹಾಳ ಗ್ರಾಮದಲ್ಲಿ ಜರುಗಲಿರುವ ಸಂಘದ 21ನೇ ವಾರ್ಷಿಕೋತ್ಸವ ಹಾಗೂ ದೇವರ ದಾಸಿಮಯ್ಯ ವಿಚಾರ ಸಂಕಿರಣ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೇವಾಂಗ ಜ್ಯೋತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಲಕ್ಷ್ಮಿಕಾಂತ್ ಹುಲಗೂರ ಅವರನ್ನು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಎಲ್.ಸಿ. ಲಿಂಬಯ್ಯಸ್ವಾಮಿಮಠ, ರಾಮಣ್ಣ ಲಮಾಣಿ (ಶಿಗ್ಲಿ), ಎಸ್.ಪಿ. ಬಳಿಗಾರ, ವೀರಣ್ಣ ಪವಾಡದ, ವೀರಣ್ಣ ಅಂಗಡಿ, ರಾಜು ಕುಂಬಿ, ಬಸವರಾಜ ಓದುನವರ, ಭರತ್ ಬಳಿಗಾರ ಮುಂತಾದವರು ಅಭಿನಂದಿಸಿದ್ದಾರೆ.
ವಿದ್ಯುತ್ ಮಾಪಕ ಉದ್ಘಾಟನೆ
ಗಜೇಂದ್ರಗಡ: ನೂತನ ತಂತ್ರಜ್ಞಾನದ ಸಿಂಗಲ್ ಮತ್ತು ತ್ರಿಫೇಸ್ ವಿದ್ಯುತ್ ಮಾಪಕ ಬಳಕೆ ಗ್ರಾಹಕರ ಹಿತ ಕಾಯಲಿದೆ ಎಂದು ಹೆಸ್ಕಾ ಸ್ಥಳೀಯ ಉಪವಿಭಾಗೀಯ ಕಚೇರಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ವೀರೇಶ ರಾಜೂರ ಹೇಳಿದರು.
ಸ್ಥಳೀಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ವಿದ್ಯುತ್ ಮಾಪಕ (ಮೀಟರ್) ಉದ್ಘಾಟಿಸಿ ಮಾತನಾಡಿದರು.
ಇಲಾಖೆ ಗ್ರಾಹಕರಿಗೆ ತ್ವರಿತ ಸೇವೆ ನೀಡುವ ಗುರಿ ಹೊಂದಿದೆ. ವಿದ್ಯುತ್ ಕಳ್ಳತನಕ್ಕೆ ಈಗ ಕಠಿಣ ಶಿಕ್ಷೆ ಇದೆ. ವಿದ್ಯುತ್ ಮಿತವಾಗಿ ಬಳಸಲು ಮುಂದಾಗಬೇಕು.
ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಕಾರ್ಯ ಚಟುವಟಿಕೆ ಹಾಗೂ ಮಾಪಕಗಳು ಇನ್ನು ಮುಂದೆ ಸರಳೀಕರಣವಾಗಿದೆ. ಇದು ಗ್ರಾಹಕರಿಗೆ ಅನಕೂಲ ಆಗಲಿದೆ ಎಂದರು.
ರೋಣ ತಾಲೂಕು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಜಗದೀಶ ಪಲ್ಲೇದ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎಚ್. ಪ್ರಕಾಶ, ರಾಜಶೇಖರ ಮೆಣಸಗಿ, ಕೆ.ಎಸ್. ಸಾಲಿಮಠ, ಶಿವು ಅರಳಿ, ಪಿ.ಎಸ್. ಅಪರಂಜಿ, ಎಂ.ಎಸ್. ಪಟ್ಟೇದ, ಹುಸೇನಸಾಬ ನರೇಗಲ್, ಖಾದಿರಸಾಬ ಹಿರೇಮನಿ, ಮಾರುತೇಶ ದೊಡ್ಮನಿ, ಶರಣಪ್ಪ ಜಿನ್ನೂರ, ಬಸವರಾಜ ಹಾಳಕೇರಿ, ನಾರಾಯಣಸಾ ರಂಗ್ರೇಜಿ ಉಪಸ್ಥಿತರಿದ್ದರು.
ನಾಳೆ ಸಮಾಲೋಚನಾ ಕಾರ್ಯಕ್ರಮ
ಮುಳಗುಂದ: ಕರ್ನಾಟಕ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಗದಗ ಇವರ ಆಶ್ರಯದಲ್ಲಿ ಸ್ತ್ರೀ ಸುರಕ್ಷಾ ಯೋಜನೆ ಅಡಿ ಹದಿಹರೆಯದ ಹೆಣ್ಣುಮಕ್ಕಳ ದೈಹಿಕ ಸಮಸ್ಯೆಗಳು ಹಾಗೂ ಅವುಗಳಿಂದುಂಟಾಗುವ ಭಾವನಾತ್ಮಕ ವಿಚಾರಗಳ ಬಗ್ಗೆ ತಿಳಿವಳಿಕೆ ನೀಡುವ ಸಮಾಲೋಚನಾ ಕಾರ್ಯಕ್ರಮವನ್ನು ಜ. 11ರಂದು ಬಾಲಲೀಲಾ ಮಹಾಂತ ಶಿವಯೋಗಿಗಳ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಶ್ವ ಕಂಪ್ಯೂಟರ್ ಅಕಾಡೆಮಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮ ಕುರಿತು ವಿವರ ನೀಡಿದ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಸುಣಗಾರ, ನಮ್ಮ ಸಂಸ್ಥೆ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ನೋವು ನಲಿವುಗಳಲ್ಲಿ ಭಾಗಿಯಾಗಿದ್ದು, ಅದರಂತೆ ಈ ಸ್ತ್ರೀ ಸುರಕ್ಷಾ ಯೋಜನೆಯನ್ನು ರೂಪಿಸಿ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಕಂಡುಬರುವ ದೈಹಿಕ, ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸಲು ನುರಿತ ತಜ್ಞ ವೈದ್ಯರೊಂದಿಗೆ ನೇರ ಮುಖಾ ಮಖಿ ಸಂದರ್ಶನವನ್ನು ಏರ್ಪಡಿಸಲಾಗಿದೆ.
ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದರು. ಅಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಸಹ ಭಾಗವಹಿಸಬಹುದಾಗಿದ್ದು, ತಜ್ಞರೊಂದಿಗೆ ಬಿಚ್ಚು ಮನಸ್ಸಿನಿಂದ ಮಾತಾಡಬಹುದಾಗಿದೆ. ಸಭೆಯಲ್ಲಿ ಅಕಾಡೆಮಿ ಅಧ್ಯಕ್ಷ ಬಿ.ಎಸ್. ಸಂಗಪ್ಪಶೆಟ್ಟರ, ಯೋಗ ಶಿಕ್ಷಕ ಪ್ರಕಾಶ ಮದ್ದಿನ, ಅಶೋಕ ಸರ್ವದೆ, ಪ್ರಭು ಬಳಿಗೇರ, ದಾಹುದ ಜಮಾಲಸಾಬನವರ, ಶಿಕ್ಷಕಿ ಪಿ.ಡಿ. ಹಜೆರಿ, ಟಿ.ಎಂ.ಪವಾರ ಮತ್ತಿತರರು ಇದ್ದರು.
ಆರ್ಥಿಕ ಅಭಿವೃದ್ಧಿಗೆ ಶಿಕ್ಷಣ ಸಹಕಾರಿ: ಜಿ.ಎಸ್. ಪಾಟೀಲ
ರೋಣ: ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಕ್ಷೇತ್ರಗಳು ಸೇರಿದಂತೆ ವಿವಿಧ ಕ್ಷೇತ್ರಗಳು ಅಭಿವೃದ್ಧಿ ಹೊಂದಲು ಶಿಕ್ಷಣ ಅತ್ಯಂತ ಸಹಕಾರಿಯಾಗಿದೆ. ಆ ದಿಶೆಯಲ್ಲಿ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಸೋಮವಾರ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪ್ರೌಢಶಾಲೆ ಹಿರೇಹಾಳ ಆಶ್ರಯದಲ್ಲಿ ಜರುಗಿದ ಸೈಕಲ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಗುಣಮಟ್ಟ ಕಾಪಾಡಲು ಹಾಗೂ ಪ್ರತಿಯೊಬ್ಬರಿಗೂ ಶಿಕ್ಷಣ ತಲುಪುವ ದಿಶೆಯಲ್ಲಿ ಸರ್ಕಾರ ಅನೇಕ ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೊಳಿಸಿದೆ. ಪಂಚ ಸೌಕರ್ಯ ಯೋಜನೆಯಲ್ಲಿ ಶಾಲಾ ಆಟದ ಮೈದಾನ, ಶೌಚಾಲಯ, ಕುಡಿಯುವ ನೀರು, ಶಾಲಾ ಕೊಠಡಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಪ್ರತಿ 5 ಕಿ.ಮೀ ಒಂದರಂತೆ ಪ್ರೌಢಶಾಲೆ, 13 ಕಿ.ಮೀಗೆ ಒಂದರಂತೆ ಪಿಯುಸಿ ಕಾಲೇಜ್‌ಗಳನ್ನು ತೆರೆಯಲಾಗುವುದು. ಈಗಾಗಲೇ ಕ್ಷೇತ್ರದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ರು. 37 ಕೋಟಿ ಬಿಡುಗಡೆ ಮಾಡಲಾಗಿದ್ದು, ಈ ಅನುದಾನದಲ್ಲಿ ಅಲ್ಲಲ್ಲಿ ಪ್ರೌಢಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ವಿ.ಎನ್. ಅಮಾತಿಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಬಿ. ಅಳಗವಾಡಿ, ವಿ.ಆರ್. ಗುಡಿಸಾಗರ, ಗ್ರಾಪಂ ಉಪಾಧ್ಯಕ್ಷ ಹೂವನಗೌಡ ಗೌಡರ, ವಿ.ಬಿ. ಸೋಮನಕಟ್ಟಿ, ಡಾ. ಶಶಿಧರ ಹಟ್ಟಿ, ಬಿ.ಎಸ್. ಕರಿಗೌಡ್ರ, ಪ್ರಕಾಶ ಕಣವಿ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.