ಕಲಾ ಭವನವೋ? ಕಸದ ತೊಟ್ಟಿಯೋ...?
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜ. 10
ಗ್ರಾಮೀಣ ಪ್ರದೇಶದಲ್ಲಿ ಕಲೆ ಹಾಗೂ ಸಂಸ್ಕೃತಿ ಬೆಳೆಯಬೇಕು ಹಾಗೂ ಅವುಗಳನ್ನು ಪ್ರದರ್ಶಿಸಲು ಸೂಕ್ತ ಸ್ಥಳ ಬೇಕು ಎನ್ನುವ ಉದ್ದೇಶದಿಂದ ನಿರ್ಮಾಣವಾಗಿರುವ ಕಲಾಭವನ ಈಗ ಇಸ್ಪೀಟ್ ಆಟ ಆಡುವ, ಅನೈತಿಕತೆಯ ಚಟುವಟಿಕೆ, ಮಲ-ಮೂತ್ರ ವಿಸರ್ಜಿಸುವ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.
ಇಲ್ಲಿಗೆ ಸಮೀಪದ ಶಿಗ್ಲಿ ಕಲೆ, ನಾಟಕ, ಸಂಸ್ಕೃತಿ, ಶಿಕ್ಷಣ ಮತ್ತು ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದೆ. ಇಂತಹ ಗ್ರಾಮಾಂತರ ಪ್ರದೇಶದಲ್ಲಿನ ಕಲೆಗಳು ನಶಿಸಿ ಹೋಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹಾಗೂ ಜನರ ಸಹಕಾರದಿಂದ ಸರ್ಕಾರ ಗ್ರಾಮದಲ್ಲಿ ಕಲಾಭವನ ನಿರ್ಮಿಸಿದೆ.
ಶಿಗ್ಲಿ ಗ್ರಾಮದಲ್ಲಿ ಸರ್ಕಾರ 1996-97ನೇ ಸಾಲಿನಲ್ಲಿ ಧಾರವಾಡ ದಕ್ಷಿಣ ಲೋಕಸಭಾ ಸದಸ್ಯ ಐ.ಜಿ. ಸನದಿಯವರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಗದಗ ಜಿಲ್ಲಾ ಪಂಚಾಯತಿಯು ಸುಂದರವಾದ ಕಲಾಭವನವನ್ನು ನಿರ್ಮಿಸಿದ್ದು ಸ್ವಾಗತಾರ್ಹ ಸಂಗತಿಯಾಗಿದೆ. ಆದರೆ, ಈ ಕಲಾಭವನವೀಗ ದನದ ಕೊಟ್ಟಿಗೆಗಿಂತ ಕಡೆಯಾಗಿರುವುದು ಕಲಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ವಿಪರ್ಯಾಸವೆಂದರೆ ಈ ಕಲಾಭವನದಲ್ಲಿ ಹಗಲು ಹೊತ್ತಿನಲ್ಲೆ ಇಸ್ಪೀಟ್ ಆಟ ನಡೆಯುತ್ತಿದೆ. ರಾತ್ರಿಯಾಗುತ್ತಲೆ ಅನೈತಿಕತೆಯ ತಾಣವಾಗುತ್ತಿರುವುದು ಆಶ್ಚರ್ಯದ ಸಂಗತಿಯಾಗಿದೆ. ಶಿಗ್ಲಿಯ ಹೃದಯ ಭಾಗದಂತಿರುವ ಬಸ್ ನಿಲ್ದಾಣದ ಪಕ್ಕದಲ್ಲೇ ಈ ಕಲಾಭವನವಿದ್ದರೂ ಜೂಜುಕೋರರಿಗೆ ಯಾರದೇ ಹೆದರಿಕೆ ಇಲ್ಲವಾಗಿದೆ. ಇದಕ್ಕೆ ನಿದರ್ಶನವಾಗಿ ಕಲಾಭವನದ ತುಂಬ ಬರೀ ಇಸ್ಪೀಟ್ ಎಲೆ ಕಾಣುತ್ತಿವೆ.
ಇನ್ನು ಕಲಾಭವನದ ಒಳಗಡೆ ಇರುವ ಎರಡು ಕೊಠಡಿಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದರಿಂದ ಗಬ್ಬೆದ್ದು ನಾರುತ್ತಿದೆ. ಕಲಾ ದೇವತೆಯ ಆರಾಧನೆ ನಡೆಯಬೇಕಾದ ತಾಣ ಅಕ್ಷರಶಃ ಕಸದ ತೊಟ್ಟಿಯಾಗಿ ಮಾರ್ಪಟ್ಟಿರುವುದು ನೋವಿನ ಸಂಗತಿಯಾಗಿದೆ. ಕಲಾಭವನದ ಅಕ್ಕ ಪಕ್ಕದಲ್ಲಿನ ನಿವಾಸಿಗಳು ಇಲ್ಲಿನ ಗಬ್ಬುನಾತಕ್ಕೆ ನರಕ ಯಾತನೆ ಅನುಭವಿಸಬೇಕಾಗಿದೆ.
ಅಲ್ಲದೆ ಗ್ರಾಮ ಪಂಚಾಯಿತಿಗೆ ಕಲಾಭವನದಲ್ಲಿ ನಡೆಯುವ ಅನೈತಿಕ ಚಟುವಟಿಕೆ ಬಗ್ಗೆ ಹಲವಾರು ಬಾರಿ ತಿಳಿಸಿದ್ದರೂ ಇದುವರೆಗೂ ಕ್ರಮತೆಗೆದುಕೊಂಡಿಲ್ಲ ಎಂದು ರವಿ ಕಬಾಡೆ, ಪರಶುರಾಮ ಲೊಂಡೆ, ಬಸವರಾಜ ಅಬ್ಬಿಗೇರಿ ನೊಂದು ನುಡಿಯುತ್ತಾರೆ.
ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯತಿಯು ಇದರ ಉಸ್ತುವಾರಿಯನ್ನು ವಹಿಸಿಕೊಳ್ಳದಿರುವುದರಿಂದ ಕಲಾಭವನ ಅಧೋಗತಿಗೆ ತಲುಪಿದೆ. ಈಗಲಾದರೂ ಗ್ರಾಮ ಪಂಚಾಯತಿಯು ಅದರ ಸ್ವಚ್ಛತೆಗೆ ಗಮನ ಹರಿಸಬೇಕಾಗಿದೆ.
ಅಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕಾಗಿದೆ. ಕಲಾಭವನದ ಮುಂದೆ ಇರುವ ಮುಳ್ಳು, ಕಂಟಿ, ಕಸ ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಬೇಕಾಗಿದೆ. ಇಲ್ಲದಿದ್ದರೆ ಸರ್ಕಾರದ ಹಣದಿಂದ ಕಲಾಭವನ ನಿರ್ಮಿಸಿದ್ದು ವ್ಯರ್ಥವೆನ್ನುವಂತಾಗುತ್ತದೆ.
ಅಶೋಕ ಸೊರಟೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

