ಪ್ರಸನ್ನರ ಪಾದಯಾತ್ರೆಗೆ ಖಂಡನೆ
ಗಜೇಂದ್ರಗಡ: ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪಿತವಾದ ಸ್ಥಳೀಯ ನೇಕಾರರ ಸಹಕಾರಿ ಉತ್ಪಾದಕರ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಳದೇ ಕೈಮಗ್ಗ ನೇಕಾರಿಕೆ ರಕ್ಷಣೆಗಾಗಿ ಬದಾಮಿ ತಾಲೂಕು ಬನಶಂಕರಿ ವರೆಗೆ ಪಾದಯಾತ್ರೆ ಕೈಗೊಳ್ಳಲಿರುವ ಹೆಗ್ಗೂಡಿನ ಹಿರಿಯ ರಂಗಕರ್ಮಿ, ಚರಕ ಮತ್ತು ದೇಶಿ ಸಂಸ್ಥೆ ಸಂಸ್ಥಾಪಕ ಪ್ರಸನ್ನ ಅವರ ಕ್ರಮ ಖಂಡನೀಯ ಎಂದು ಸಂಘದ ಅಧ್ಯಕ್ಷ ಅಶೋಕ ವನ್ನಾಲ ಹೇಳಿದರು. ಅವರು ಶನಿವಾರ ಸಂಜೆ ಸಂಘದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1944 ರಲ್ಲಿಯೇ ಸ್ಥಾಪನೆಗೊಂಡ ಜತೆಗೆ ರಾಜ್ಯದ 2ನೇ ದೊಡ್ಡ ಕೈಮಗ್ಗ ನೇಕಾರಿಕಾ ಕೇಂದ್ರವಾದ ದಿ. ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘವನ್ನು ಕಡೆಗಣಿಸುವ ಮೂಲಕ ರಂಗಕರ್ಮಿ ಪ್ರಸನ್ನರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು. 18ನೇ ಶತಮಾನದವರೆಗೂ ಸಾರ್ವಭೌಮತ್ವ ಮೆರೆದಿದ್ದ ಭಾರತೀಯ ಕೈಮಗ್ಗ ಉದ್ಯಮಕ್ಕೆ ಮರು ಚೇತನ ದೊರೆಯಬೇಕಾದರೆ ಆಧುನಿಕ ಕೈಗಾರಿಕೆಗಳು ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡಬೇಕು. ದೇಶದ ಮಹಾನ್ ಗ್ರಾಮೀಣ ಉದ್ದಿಮೆಯಾದ ನೇಕಾರಿಕೆಯನ್ನು ಉಳಿಸುವ ಜತೆಗೆ ಕೈಮಗ್ಗ ನೇಕಾರರಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯವನ್ನು ಒದಗಿಸುವುದು ಸಂಘದ ಕರ್ತವ್ಯ. ಆದರೆ, ಚರಕ ಸಂಸ್ಥೆ ನೇಕಾರರಿಗೆ ಯಾವ ಸೌಲತ್ತನ್ನೂ ನೀಡದೆ ಸಂಸ್ಥೆಯ ಲಾಭ ಗಳಿಕೆಯ ಕಡೆಗೆ ಗಮನ ನೀಡಿ ದುಡಿಯುವ ನೇಕಾರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಗದಗ ಜಿಲ್ಲೆಯಲ್ಲಿ 17 ಸಹಕಾರಿ ನೇಕಾರಿಕಾ ಸಂಘಗಳಿದ್ದು, ಯಾವುದೇ ಸಂಘವನ್ನು ವಿಶ್ವಾಸಕ್ಕೆ ತೆಗೆದೊಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜ. 15 ರಿಂದ ಗಜೇಂದ್ರಗಡದಿಂದ ಬದಾಮಿ ತಾಲೂಕು ಬನಶಂಕರಿ ವರೆಗೆ ತೆರಳುವ ಬನಶಂಕರಿ ಪಾದಯಾತ್ರೆಯಲ್ಲಿ ನಮ್ಮ ಸಂಘದ ಯಾವ ಸದಸ್ಯರೂ ಪಾಲ್ಗೊಳ್ಳುವುದಿಲ್ಲ ಎಂದರು. ಕೊಟ್ರೇಶ ಚಿಲಕಾ, ಬಸವರಾಜ ಸೂಡಿ, ಗೋಪಾಲ ಲಾಳಿ, ಕಮಲಮ್ಮ ಕರಾಬದಿನ್ನಿ, ಯಂಕಪ್ಪ ಪುಲಗಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸಂಘಕ್ಕೆ ಆಯ್ಕೆ
ಶಿರಹಟ್ಟಿ: ಶಿರಹಟ್ಟಿಯ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘಕ್ಕೆ ಜಿಲ್ಲಾ ಅಧ್ಯಕ್ಷರಾಗಿ ಸುನಂದಾ ಬಿ. ತಾರಿಕೊಪ್ಪ ಹಾಗೂ ಉಪಾಧ್ಯಕ್ಷರಾಗಿ ರಮಾ ಧರ್ಮಾಧಿಕಾರಿ ಇವರನ್ನು ಸಂಘದ ರಾಜ್ಯಧ್ಯಕ್ಷ ಜಿ.ಆರ್. ಶಿವಶಂಕರ ನೇಮಕ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

