ಗದಗ

ಮಠದ ಸಾಧನೆಗೆ ಭಕ್ತರ ಸಹಕಾರ ಕಾರಣ

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 12
ಜಾತ್ಯತೀತ ಮನೋಭಾವದ ಕಾಯಕನಿಷ್ಠ ಭಕ್ತರ ಸಹಕಾರದಿಂದಲೇ ತೋಂಟದಾರ್ಯ ಮಠ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ರಂಗದಲ್ಲಿ ಸಾಧನೆ ಮಾಡುವಂತಾಗಿದೆ ಎಂದು ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ 2014ನೇ ವರ್ಷದ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಭಾನುವಾರ ಆಶೀರ್ವದಿಸಿ ಅವರು ಮಾತನಾಡಿದರು. ಭಕ್ತರ ಸಾಮೂಹಿಕ ನಾಯಕತ್ವದಿಂದ ಪ್ರತಿವರ್ಷ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.
2013ರ ಜಾತ್ರಾ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎಸ್. ಚೆಟ್ಟಿ ಸಂಗಡಿಗರ ಕಾರ್ಯ ಅಭಿನಂದನೀಯ. ಬಸವತತ್ವ ಎನ್ನುವುದು ನಾವು ಲಿಂಗಾಯತ ಧರ್ಮದ ಸ್ವಾಮೀಜಿ ಎಂದು ಹೇಳುವ ತತ್ವವಲ್ಲ, ಅದು ಎಲ್ಲ ಧರ್ಮ, ಜಾತಿ ಮೀರಿದ ಇಂದಿನ ಕಾಲದ ಬೇಡಿಕೆ. ಅದರ ಅನುಸರಣೆ ಹಾಗೂ ಪ್ರಸಾರ ಪ್ರಾಮುಖ್ಯವನ್ನು ಯಾರೂ ತಡೆಯಲಾಗದು. ವೈಜ್ಞಾನಿಕ, ವೈಚಾರಿಕ ತತ್ವಗಳ ಸಂಗಮ, ಅವುಗಳ ಆಚರಣೆಯಿಂದ ವ್ಯಕ್ತಿ ಸೇರಿದಂತೆ ಸಮಾಜ-ದೇಶ-ವಿಶ್ವ ಶಾಂತಿ ಸಮೃದ್ಧಿಯ ಬೆಳವಣಿಗೆ ಸಾಧಿಸಲು ಸಾಧ್ಯವಾಗುವುದು. ಲಿಂಗಾಯತ ಸಮುದಾಯದ ಜನತೆ ಬಸವತತ್ವಗಳಿಗೆ ಬದ್ಧವಾದ ಜೀವನ ಸಾಗಿಸಿದರೆ ಸಾಕು, ಎಲ್ಲ ಮೌಢ್ಯ-ಶೋಷಣೆಯಿಂದ ಮುಕ್ತವಾಗಲು ಸಾಧ್ಯ. ಜಂಗಮತತ್ವ ಎನ್ನುವುದು ಹುಟ್ಟಿನಿಂದ ಬರುವಂಥದ್ದಲ್ಲ, ಅದು ತದನಂತರ ನಾವು ಸಾಧಿಸುವಂಥದ್ದು, ಅಂತಹ ನಡಾವಳಿಯಿಂದ ಬರಲು ಸಾಧ್ಯ ಎಂದರು. ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಗದುಗಿನ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ನಾಡಿನ ಇತರೆ ಮಠಗಳಿಗೆಲ್ಲ ಮಾದರಿ ಎಂದರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿದರು. 2014ರ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ವಿರೂಪಣ್ಣ ಬಳ್ಳೊಳ್ಳಿ, ಉಪಾಧ್ಯಕ್ಷರಾಗಿ ಅಶೋಕ ಲಕ್ಕುಂಡಿ, ದಾನಯ್ಯ ಗಣಾಚಾರಿ, ಪ್ರೊ. ಕೆ.ಎಚ್. ಬೇಲೂರು, ಕಾರ್ಯದರ್ಶಿಗಳಾಗಿ ಮಲ್ಲಿಕಾರ್ಜುನ ಐಲಿ, ಸಹಕಾರ್ಯದರ್ಶಿಯಾಗಿ ಶಿವಕುಮಾರ ಪಾಟೀಲ, ಶಿವಯೋಗಿ ತಡಸದ, ಕೋಶಾಧ್ಯಕ್ಷರಾಗಿ ಪ್ರಕಾಶ ಉಗಲಾಟದ, ಸಂಗಣ್ಣ ಲಕ್ಕುಂಡಿ ಆಯ್ಕೆಗೊಂಡರು. 2013ರ ಜಾತ್ರಾ ಸಮಿತಿ ಕಾರ್ಯದರ್ಶಿಯಾಗಿದ್ದ ಮುರುಘರಾಜೇಂದ್ರ ಬಡ್ನಿ ಸ್ವಾಗತಿಸಿದರು. ಎಂ.ಎ. ಹಂಚನಾಳ ಕಾರ್ಯಕ್ರಮ ನಿರೂಪಿಸಿದರು.

--
ನಾಳೆ ಜಲಶಂಕರ ದೇವಸ್ಥಾನ ಜಾತ್ರೆ
ಗದಗ: ತಾಲೂಕಿನ ನಾಗಾವಿ ತಾಂಡಾದ ಜಲಾಶಂಕರ ದೇವಸ್ಥಾನದ ಜಾತ್ರೆಯು ಜ. 14ರ ಸಂಜೆ 5 ಗಂಟೆಗೆ ಜರುಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿ ನಂತರ ಮಹಾಪ್ರಸಾದ ಕಾರ್ಯಕ್ರಮವು ನಡೆಯುತ್ತದೆ. ನಂತರ ಜರುಗುವ ಕಾರ್ಯಕ್ರಮದ ಸಾನ್ನಿಧ್ಯವನ್ನು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹಾಗೂ ಜಲಾಶಂಕರ ದೇವಸ್ಥಾನದ ಶಂಭುಲಿಂಗಯ್ಯ ತಂಗಡಗಿ ಮತ್ತು ಶಂಕರಲಿಂಗ ಶ್ರೀಗಳು ವಹಿಸುವರು. ಅತಿಥಿಗಳಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ, ಶಾಸಕ ಬಿ.ಆರ್. ಯಾವಗಲ್, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಪಂ ಸದಸ್ಯೆ ಶಾರದಾ ತೋಟದ, ತಾಪಂ ಸದಸ್ಯೆ ಕಮಲಾಬಾಯಿ ಪೂಜಾರ, ತಾಪಂ ಮಾಜಿ ಅಧ್ಯಕ್ಷ ಬಿ.ಆರ್. ದೇವರೆಡ್ಡಿ ಮುಂತಾದವರು ಆಗಮಿಸುವರು ಎಂದು ಜಲಾಶಂಕರ ಟ್ರಸ್ಟ್ ಕಮಿಟಿ ಅಧ್ಯಕ್ಷ ದಯಾನಂದ ಪವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.