ಅಬ್ಬಬ್ಬಾ... ಮರಳು ದರ!
ಕನ್ನಡಪ್ರಭ ವಾರ್ತೆ, ಗದಗ, ಜ. 12
ಸರ್ಕಾರದ ಮರಳು ನೀತಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಕ್ರಮದಿಂದ ಜಿಲ್ಲೆಯಾದ್ಯಂತ ಎಗ್ಗಿಲ್ಲದೆ ನಡೆಯುತ್ತಿದ್ದ ಮರಳು ಮಾರಾಟಕ್ಕೆ ಕಡಿವಾಣ ಬಿದ್ದಿದೆ. ಆದರೆ, ಕೆಲವರು ಇದನ್ನೇ ಲಾಭದಾಯಕ ಉದ್ಯೋಗವನ್ನಾಗಿ ಮಾಡಿಕೊಂಡು, ತಮ್ಮಲ್ಲಿ ಲಭ್ಯವಿರುವ ಮರಳು ಹಾಗೂ ಕಳ್ಳ ಮಾರ್ಗದ ಮೂಲಕ ರವಾನೆ ಮಾಡುತ್ತಿರುವ ಮರಳಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದು ಕೆಳ ಮತ್ತು ಮಧ್ಯಮ ವರ್ಗದವರಿಗೆ ಸಮಸ್ಯೆ ತಂದೊಡ್ಡಿದೆ.
ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ನಗರಗಳು ಮರಳಿಗಾಗಿ ಆಶ್ರಯಿಸಿರುವುದು ತುಂಗಭದ್ರಾ ಮತ್ತು ಮಲಪ್ರಭಾ ನದಿಯನ್ನೇ. ಆದರೆ, ಕಳೆದ ಸಾಲಿನಲ್ಲಿ ಜಿಲ್ಲಾಡಳಿತ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮದಿಂದಾಗಿ ಜಿಲ್ಲೆಯ ಮರಳು ಜಿಲ್ಲೆಯಲ್ಲಿಯೇ ಮಾರಾಟವಾಗಬೇಕು. ಅದನ್ನು ಅಕ್ರಮವಾಗಿ ಸಾಗಾಟ ಮಾಡದಂತೆ ತಡೆಯಲು ಜಿಲ್ಲೆಯಲ್ಲಿರುವ ಎಲ್ಲ ಸ್ಟಾಕ್ ಯಾರ್ಡ್ಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಅಕ್ರಮ ಮರಳು ಸಾಗಾಟಕ್ಕೇನೋ ಕಡಿವಾಣ ಬಿದ್ದಿದೆ. ಆದರೆ, ಕೃತಕ ಅಭಾವ ಸೃಷ್ಟಿಸುವವರಿಗೆ ವರದಾನವಾಗಿ ಪರಿಣಮಿಸಿದೆ. ತಮ್ಮ ಬಳಿ ಇರುವ (ಸಂಗ್ರಹ) ಮರಳನ್ನು ಈಗ ಮಾರಾಟಕ್ಕೆ ಮುಂದಾಗುತ್ತಿದ್ದು, ಅದು ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ. ಇನ್ನು ಜಿಲ್ಲೆಯಲ್ಲಿರುವ 18ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಹಳ್ಳಗಳಲ್ಲಿ ರಾತ್ರೋ ರಾತ್ರಿ ಮರಳು ತೆಗೆದು ಮಾರಾಟ ಮಾಡಲಾಗುತ್ತಿದೆ. ಹಳ್ಳಗಳಿಂದ ತೆಗೆಯುತ್ತಿರುವ ಮರಳೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.
ಈ ಹಿಂದೆ ಪ್ರತಿ ಒಂದು ಲಾರಿ ಮರಳಿಗೆ ರು. 6-7 ಸಾವಿರದವರೆಗೆ ಮಾರಾಟವಾಗುತ್ತಿತ್ತು. ಆದರೆ, ಕೃತಕ ಅಭಾವ ಸೃಷ್ಟಿಯಾದಾಗಿನಿಂದ ಪ್ರತಿ ಲಾರಿ ಮರಳಿಗೆ ರು. 11-13 ಸಾವಿರದವರೆಗೆ ಕದ್ದು ಮುಚ್ಚಿ ಮಾರಾಟ ಮಾಡಲಾಗುತ್ತಿದೆ. ಇಷ್ಟೊಂದು ಬೆಲೆಯಾಕೆ ಎಂದು ಕೇಳಿದರೆ ಮರಳನ್ನೇ ನೀಡುವುದಿಲ್ಲ. ಅನಿವಾರ್ಯವಾಗಿ ಅವರು ಹೇಳಿದಷ್ಟು ಬೆಲೆ ನೀಡಿ ಮರಳು ಪಡೆಯುವಂತಾಗಿದೆ. ಇನ್ನು ಮರಳನ್ನು ಕಡ್ಡಾಯವಾಗಿ ರಾತ್ರಿ ವೇಳೆಯಲ್ಲಿಯೇ ಮಾತ್ರ ಸಾಗಾಟ ಮಾಡಬೇಕು ಎಂದು ಮರಳು ಸಂಗ್ರಹ ಹೊಂದಿರುವವರು ಮಾಡುತ್ತಿದ್ದು ಇದು ಕೂಡಾ ಸಮಸ್ಯೆಯನ್ನು ಮತ್ತಷ್ಟು ಉಲ್ಭಣಗೊಳಿಸಿದೆ.
ಅರ್ಧಕ್ಕೆ ನಿಂತಿರುವ ಕಟ್ಟಡಗಳು: ಜಿಲ್ಲೆಯಾದ್ಯಂತ ಸೃಷ್ಟಿಯಾಗಿರುವ ಕೃತಕ ಮರಳು ಅಭಾವದಿಂದ 5 ಸಾವಿರಕ್ಕೂ ಹೆಚ್ಚಿನ ಕಟ್ಟಡ (ಗದಗ, ಬೆಟಗೇರಿ ಅವಳಿ ನಗರದಲ್ಲಿ ಮಾತ್ರ) ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಜಿಲ್ಲೆಯ ಇನ್ನುಳಿದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿಯೂ ಈ ಸಮಸ್ಯೆ ವ್ಯಾಪಕವಾಗಿದೆ. ಮರಳು ಸ್ಟಾಕ್ ಯಾರ್ಡ್ಗಳ ಮೇಲೆ ದಾಳಿ ಮಾಡಿ, ಅಕ್ರಮವಾಗಿ ಮರಳು ಸಂಗ್ರಹಿಸಿರುವರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಡಳಿತ ಹೇಳಿತ್ತು. ಆದರೆ, ಅದು ಇಂದಿಗೂ ಹೇಳಿಕೆಯಾಗಿಯೇ ಉಳಿದಿದ್ದು, ಅವಳಿ ನಗರದ ಹೃದಯ ಭಾಗಗಳಲ್ಲಿಯೇ ಸಾಕಷ್ಟು ಪ್ರಮಾಣದ ಮರಳನ್ನು ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದಾರೆ.
ಬಡ, ಮಧ್ಯಮ ವರ್ಗಕ್ಕೆ ತೊಂದರೆ: ಉಳ್ಳವರು ಶಿವಾಲಯ ಕಟ್ಟುವರು...ನಾನೇನು ಮಾಡಲಿ ಬಡವನಯ್ಯಾ ಎನ್ನುವ ಹಾಗೆ ಉಳ್ಳವರು ಎಷ್ಟೇ ಹೆಚ್ಚಿನ ಹಣವಾದರೂ ಕೊಟ್ಟು ಮರಳು ತಂದು ತಮ್ಮ ಕಟ್ಟಡ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಆದರೆ, ಬಡ, ಮಧ್ಯಮ ವರ್ಗಕ್ಕೆ ಮಾತ್ರ ಇದು ನುಂಗಲಾರದ ತುತ್ತಾಗಿದ್ದು, ಸ್ವಂತ ಮನೆ ನಿರ್ಮಾಣದ ಕನಸು ಕಾಣುತ್ತಿರುವವರಂತೂ ಮರಳಿನ ವಿಷಯದಿಂದ ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಮರಳು ದಂಧೆ ಒಂದೆಡೆ (ಕೆಲವೇ ಜನರ ಬಳಿ) ಕೇಂದ್ರೀಕೃತವಾಗುತ್ತಿದೆ.
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

