ಸಿಬ್ಬಂದಿ ಇಲ್ಲದ ಕೃಷಿ ಇಲಾಖೆ ಕಚೇರಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜ. 12
ಸರ್ಕಾರ ಮುಂಡರಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದರಿಂದ ಒಂದೆಡೆ ರೈತರು ಆಕ್ರೋಶಗೊಂಡು ಪ್ರತಿಭಟನೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ರೈತರು ಕೃಷಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ತಾಲೂಕು ಕೃಷಿ ಇಲಾಖೆ ಕಚೇರಿಗೆ ತೆರಳಿದರೆ ಅಲ್ಲಿ ಸಹಾಯಕ ನಿರ್ದೇಶಕರಾದಿಯಾಗಿ ಅನೇಕ ಹುದ್ದೆ ಖಾಲಿ ಇದ್ದು, ಇದು ರೈತರನ್ನು ಮತ್ತಷ್ಟು ಕಂಗೆಡಿಸಿದೆ.
ತಾಲೂಕು ಕೃಷಿ ಸಹಾಯಕ ನಿರ್ದೇಶಕರ ಕಚೇರಿ, ಡಂಬಳ ಆರ್.ಎಸ್.ಕೆ. ಹಾಗೂ ಮುಂಡರಗಿ ಆರ್.ಎಸ್.ಕೆ. ಸೇರಿ ಒಟ್ಟು 33 ಹುದ್ದೆಗಳಿವೆ. ಅದರಲ್ಲಿ ಈಗ ಕೇವಲ 8 ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ಸಹಾಯಕ ಕೃಷಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಂಗಸ್ವಾಮಿಯವರ ವರ್ಗಾವಣೆಯಿಂದಾಗಿ ಇದೀಗ ಸಹಾಯಕ ಕೃಷಿ ನಿರ್ದೇಶಕರ ಹುದ್ದೆ, 4 ಕೃಷಿ ಅಧಿಕಾರಿಗಳ ಹುದ್ದೆ, 1 ರೈತ ಮಹಿಳಾ ಅಧಿಕಾರಿ ಹುದ್ದೆ, 11 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ, 5 ಕೃಷಿ ಸಹಾಯಕ ಅಧಿಕಾರಿ ಹುದ್ದೆಗಳು ಸೇರಿದಂತೆ ಅನೇಕ ಹುದ್ದೆ ಖಾಲಿ ಇವೆ.
ರೈತರಿಗೆ ಸಮಸ್ಯೆ: ಮುಂಡರಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ವರ್ಗಾವಣೆಯಿಂದ ಖಾಲಿಯಾಗಿದ್ದ ಹುದ್ದೆಗೆ ಗದಗ ಕೃಷಿ ಜಂಟಿ ನಿರ್ದೇಶಕರ ಕಚೇರಿಯ ವಿಷಯ ತಜ್ಞ ಪ್ರಹ್ಲಾದ ಅವರನ್ನು ಪ್ರಭಾವಿ ಸಹಾಯಕ ಕೃಷಿ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದು, ಅವರಿಗೆ ಶಿರಹಟ್ಟಿ ತಾಲೂಕಿನ ಜವಾಬ್ದಾರಿಯನ್ನೂ ನೀಡಿರುವುದರಿಂದ ಒಂದೆಡೆ ಸರಿಯಾಗಿ ಕಾರ್ಯನಿರ್ವಹಿಸಲು ಆಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಮಾತು. ಇದರಿಂದಾಗಿ ನಿತ್ಯ ಕಚೇರಿಗೆ ಬಂದು ಹೋಗುವ ರೈತರಿಗೆ ಸಿಬ್ಬಂದಿಯ ಕೊರತೆ ತಲೆನೋವಾಗಿ ಪರಿಣಮಿಸಿದೆ.
ರೈತ ಸಂಪರ್ಕ ಕೇಂದ್ರಗಳಿಗೆ ಬೀಗ: ತಾಲೂಕಿನಲ್ಲಿರುವ ಕೃಷಿ ಇಲಾಖೆ ಕಚೇರಿಯಲ್ಲಿ ಒಂದು ರೀತಿ ಸಮಸ್ಯೆಯಾದರೆ, ಡಂಬಳ ಹಾಗೂ ಮುಂಡರಗಿ ರೈತ ಸಂಪರ್ಕ ಕೇಂದ್ರದಲ್ಲಿಯೂ ಸಿಬ್ಬಂದಿ ಕೊರತೆಯಿಂದಾಗಿ ಈಚೆಗೆ ನಾಲ್ಕಾರು ದಿನ ಅವುಗಳಿಗೆ ಬೀಗ ಹಾಕಲಾಗಿತ್ತು. ಇದರಿಂದಾಗಿ ನಿತ್ಯ ರೈತ ಸಂಪರ್ಕ ಕೇಂದ್ರಕ್ಕೆ ಬರುವ ರೈತರು ಬೀಗ ಹಾಕಿದ ಕಚೇರಿಯನ್ನು ನೋಡಿ ಬೇಸರದಿಂದ ಮರಳಿ ಹೋಗುತ್ತಿದ್ದರು. ಇದೀಗ ರೈತರ ಒತ್ತಾಯದ ಮೇರೆಗೆ ಜಿಲ್ಲಾಮಟ್ಟದ ಅಧಿಕಾರಿಗಳು ಪ್ರಭಾರಿ ಸಿಬ್ಬಂದಿ ನೇಮಿಸುವ ಭರವಸೆ ನೀಡುತ್ತಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿವೆ. ಡಂಬಳ ಹೋಬಳಿಯ 22 ಗ್ರಾಮಗಳಿಗೆ ಡಂಬಳದಲ್ಲಿರುವ ರೈತ ಸಂಪರ್ಕ ಕೇಂದ್ರ ಅನುಕೂಲವಾಗಿದ್ದು, ಅಧಿಕಾರಿಗಳ ಕೊರತೆಯಿಂದಾಗಿ ಈ ಎಲ್ಲ 22 ಗ್ರಾಮಗಳ ರೈತರ ಸಮಸ್ಯೆ ಹೇಳತೀರದಾಗಿದೆ.
ಸರ್ಕಾರ ಮುಂಡರಗಿ ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡದೇ ಇಲ್ಲಿನ ರೈತರಿಗೆ ಅನ್ಯಾಯ ಮಾಡಿದೆ. ಇದೀಗ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಡಂಬಳ ಹಾಗೂ ಮುಂಡರಗಿ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿದ್ದು, ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಈ ಕೂಡಲೇ ಶಿರಹಟ್ಟಿ ಹಾಗೂ ರೋಣ ಕ್ಷೇತ್ರದ ಶಾಸಕರು ಮುತುವರ್ಜಿವಹಿಸಿ ಕೃಷಿ ಇಲಾಖೆಗೆ ಸಿಬ್ಬಂದಿ ನೇಮಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು.
-ರುದ್ರಪ್ಪ ಲದ್ದಿ
ಮುಂಡರಗಿ ರೈತ
ಸರ್ಕಾರ ಕಳೆದ ಅನೇಕ ತಿಂಗಳಿನಿಂದ ರೈತನಿಗೆ ಅತಿ ಅವಶ್ಯವಿರುವ ಕೃಷಿ ಇಲಾಖೆಯ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಜಾಣ ಕುರುಡುತನ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಸಿಬ್ಬಂದಿ ಕೊರತೆಯಿಂದಾಗಿ ಈಚೆಗೆ ಡಂಬಳ ರೈತ ಸಂಪರ್ಕ ಕೇಂದ್ರಕ್ಕೆ ಬೀಗಹಾಕಲಾಗಿತ್ತು. ಅದನ್ನು ಕೇಳಬೇಕೆಂದರೆ ತಾಲೂಕು ಮಟ್ಟದಲ್ಲಿ ಜವಾಬ್ದಾರಿಯುತ ಹಿರಿಯ ಅಧಿಕಾರಿಗಳಿಲ್ಲ. ಆದ್ದರಿಂದ ಜಿಲ್ಲಾಮಟ್ಟದ ಅಧಿಕಾರಿಗಳು ಖಾಲಿ ಇರುವ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಹುದ್ದೆಯನ್ನು ಹಾಗೂ ಇತರೆ ಹುದ್ದೆಗಳನ್ನು ಈ ಕೂಡಲೇ ಭರ್ತಿಮಾಡಿ, ಇಲ್ಲಿನ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕು.
-ನಿಂಗಬಸಪ್ಪ ಪ್ಯಾಟಿ
ತಾಪಂ ಸದಸ್ಯ
- ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

