ಗದಗ

ಜಿಲ್ಲಾದ್ಯಂತ ಈದ್ ಮಿಲಾದ್ ಸಂಭ್ರಮ

Published On :

ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಪ್ರವಾದಿ ಮಹ್ಮದ್ ಪೈಗಂಬರರ ಜಯಂತ್ಯುತ್ಸವ (ಈದ್ ಮಿಲಾದುನ್ನಬಿ)ಯನ್ನು ವಿಜೃಂಭಣೆಯ ಮೂಲಕ ಆಚರಿಸಲಾಯಿತು.
ಎಲ್ಲೆಲ್ಲೂ ಮಹ್ಮದ್ ಪೈಗಂಬರರ ಆದರ್ಶಗಳ ಹಾಗೂ ಅವರ ಜೀವನ ಸಂದೇಶಗಳ ಕುರಿತ ಬಾವುಟಗಳು, ವಿವಿಧ ನೃತ್ಯರೂಪಕಗಳ ಮೆರವಣಿಗೆ, ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಪ್ರಬಂಧ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಭ್ರಮದಿಂದ ಈದ್ ಮಿಲಾದ್ ಆಚರಿಸಲಾಯಿತು.
ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ರೋಣ, ಮುಂಡರಗಿ, ಶಿರಹಟ್ಟಿ, ನರಗುಂದ, ಲಕ್ಷ್ಮೇಶ್ವರ, ನರೇಗಲ್ಲ, ಗಜೇಂದ್ರಗಡ ಅಲ್ಲದೇ ಗ್ರಾಮಗಳಲ್ಲಿ ಮುಸಲ್ಮಾನ ಬಾಂಧವರು ಸೇರಿದಂತೆ ಸರ್ವಧರ್ಮೀಯರೂ ಸೇರಿಕೊಂಡು ಈ ವಿಶೇಷ ಈದ್ ಮಿಲಾದ್ ಹಬ್ಬವನ್ನು ಆಚರಿಸುವ ಮೂಲಕ ಸಂಭ್ರಮಕ್ಕೆ ತೆರೆ ಎಳೆದರು. ನಗರ, ಪಟ್ಟಣ, ಗ್ರಾಮಗಳಲ್ಲಿ ಬೃಹತ್ ಮೆರವಣಿಗೆ (ಜುಲುಸ್) ಜರುಗಿಸಲಾಯಿತು. ಅಲ್ಲದೇ ನಗರದಲ್ಲಿ ತಿರಂಗಾ ಯುವಮೋರ್ಚಾ, ಅಂಜುಮನ್ ಇಸ್ಲಾಂ ಕಮಿಟಿ, ನವಜವಾನ ಕಮಿಟಿ, ಅಲಮಾ ಇಕ್ಬಾಲ್, ಹಜರತ್ ಜಿಂದಾಶಾವಲಿ ಗೆಳೆಯರ ಬಳಗ ಸೇರಿದಂತೆ ಹಲವು ಪ್ರಗತಿಪರ, ಯುವ ಸಂಘಟನೆಗಳ ನೇತೃತ್ವದಲ್ಲಿ ಜಯಂತ್ಯುತ್ಸವ ಆಚರಿಸಲಾಯಿತು.
ಮುಳಗುಂದ: ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ ಈದ್ ಮಿಲಾದ್ ಹಬ್ಬವನ್ನು ಪಟ್ಟಣದ ಮುಸ್ಲಿಂ ಬಾಂಧದವರು ಸಡಗರ-ಸಂಭ್ರಮದಿಂದ ಮಂಗಳವಾರ ಆಚರಿಸಿದರು. ಚಿಂದಿಪೇಟಿ (ಸೈದರಗಲ್ಲಿ)ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹಾಜಿ ಜನಾಬ ಎ.ಎ. ಖಾಜಿ, ಮಹಮ್ಮದ್ ಪೈಗಂಬರರು ಜಗತ್ತು ಕಂಡ ಶ್ರೇಷ್ಠ ಧಾರ್ಮಿಕ ಸಂತರಲ್ಲಿ ಒಬ್ಬರಾಗಿದ್ದು, ಅವರ ತತ್ವಾದರ್ಶಗಳು ಮನುಕುಲಕ್ಕೆ ಆದರ್ಶವಾಗಿದ್ದು, ಇಸ್ಲಾಂ ಸಮಾಜ ಬೆಳವಣಿಗೆಯಲ್ಲಿ ಪೈಗಂಬರರ ಪಾತ್ರ ಬಹುಮುಖ್ಯವಾಗಿದ್ದು, ಅವರ ಜೀವನ, ಜನ್ಮದಿನದ ಮಹತ್ವವನ್ನು ಅರಿಯಬೇಕಿದೆ ಎಂದರು. ಪಟ್ಟಣದ ಮುಸ್ಲಿಂ ಬಾಂಧವರು ಮುಂಜಾನೆ ಅಂಜುಮನ್ ಶಾದಿಮಹಲ್‌ದಿಂದ ಸಂಗನಪೇಟ, ಕೋಟಿಓಣಿ, ಚಿಂದಿಪೇಟಿ, ಮಳಗಿ ಮಸೀದಿ, ನದಾಫಗಲ್ಲಿ, ದಾವಲ ಮಲ್ಲಿಕ್ ಪಹಾಡ, ಶೇಖ ಓಣಿಯ ಮಾರ್ಗವಾಗಿ ವಿವಿಧ ಮಜಲುಗಳು ಹಾಗೂ ಮೆರವಣಿಗೆ (ಜುಲುಸ್) ಮೂಲಕ ಎಲ್ಲ ಮಸೀದಿಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಸಮಾಪ್ತಿಗೊಳಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲ ಮಸೀದಿಯ ಮೌಲಾನರು, ಮುಖಂಡ ಆರ್.ಎಚ್. ದಲೀಲ, ಐ.ಎಂ. ಚವಳಿಕಾಯಿ, ಎಚ್.ಆರ್. ಗಾಡಿ, ಐ.ಎಚ್. ಮುಶೇಖಾನ, ಪಪಂ ಸದಸ್ಯ ಮೌಲಾಸಾಬ ಸದರಬಾವಿ, ಎಚ್.ಎ. ಖಾಜಿ, ಎಚ್.ಎಚ್. ಖಲೀಫನವರ ಮುಂತಾದವರು ಉಪಸ್ಥಿತರಿದ್ದರು.
ಕೋಟುಮಚಗಿ: ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಸಂಕಲ್ಪ ರೂರಲ್ ಡೆವಲಪ್‌ಮೆಂಟ್, ಅಂಜುಮನ್ ಇಸ್ಲಾಂ ಕಮಿಟಿ, ಅಲ್ಲಮಾ ಇಕ್ಬಾಲ್ ಕಮಿಟಿ ಹಾಗೂ ಹಜರತ್ ಜಿಂದಾಶಾವಲಿ ಗೆಳೆಯರ ಬಳಗದ ವತಿಯಿಂದ ಪ್ರವಾದಿ ಮಹ್ಮದ್ ಪೈಗಂಬರರ ಜಯಂತ್ಯುತ್ಸವದ ಅಂಗವಾಗಿ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಮತ್ತು ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಜರುಗಿಸಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ಗ್ರಾಮದಲ್ಲಿ ಮೆರವಣಿಗೆ ನಡೆಯಿತು. ಗ್ರಾಪಂ ಸದಸ್ಯ ಎಂ.ಆರ್.ಬೂದಿಹಾಳ, ಚಮನಸಾಬ ಹಿರೇಹಾಳ, ಅಂಜುಮನ್ ಇಸ್ಲಾಂ ಕಮಿಟಿ ಉಪಾಧ್ಯಕ್ಷ ಜೀವನಸಾಬ ಹಿರೇಹಾಳ, ಶಿಕ್ಷಕ ಜೆ.ಎಚ್. ಮುಲ್ಲಾ, ಕೆ.ಎಫ್. ಮೀರಾನಾಯ್ಕ, ಇಸ್ಮಾಯಿಲ್ ರಾಹುತ್, ಬಸೀರ ಹಿರೇಹಾಳ, ಅಕ್ಬರ ನಾಗರಾಳ, ಇರ್ಷಾದ ಮುಲ್ಲಾ, ದಾದಾಹಯಾತ ಬಳಗಾನೂರ, ಮಹಬೂಬ ಸರಕವಾಸ ಉಪಸ್ಥಿತರಿರುವರು.
ನರಗುಂದ: ಮಾನವೀಯತೆಯ ಮೌಲ್ಯ ಪ್ರತಿಪಾದಿಸಿ ಮುಸ್ಲಿಂ ಧರ್ಮದ ಸಂಸ್ಥಾಪಕ ಮಹ್ಮದ್ ಪೈಗಂಬರ ಜನ್ಮದಿನವನ್ನು  ಮಂಗಳವಾರ ನರಗುಂದ ಪಟ್ಟಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಟಿಪ್ಪುಸುಲ್ತಾನ್ ರಸ್ತೆಯಿಂದ ಪ್ರಾರಂಭವಾದ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರವಾದಿ ಮಹ್ಮದರ ಸಂದೇಶಗಳನ್ನು ಜನರಿಗೆ ತಿಳಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.