ಗದಗ

ಕೃಷಿಯತ್ತ ರೈತರನ್ನು ತರುವುದೇ ಕೃಷಿಮೇಳ ಉದ್ದೇಶ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 31
ತಂತ್ರಜ್ಞಾನದ ತಿಳಿವಳಿಕೆ ನೀಡುವ ಮೂಲಕ ಇತ್ತೀಚೆಗೆ ಕೃಷಿಯಿಂದ ವಿಮುಖವಾಗುತ್ತಿರುವ ರೈತರನ್ನು ಮತ್ತೆ ಮುಖ್ಯವಾಹಿನಿಗೆ ತರುವುದು ಕೃಷಿಮೇಳದ ಉದ್ದೇಶವಾಗಿದೆ ಎಂದು ತಹಸೀಲ್ದಾರ್ ಶಿವಶಂಕರ ನಾಯಕ್ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸರ್ಕಾರದ ವಿವಿಧ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಫೆ. 3ರಂದು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಕೃಷಿಮೇಳವನ್ನು ಆಯೋಜಿಸುವ ಕುರಿತು ಸ್ಥಳೀಯ ತಾಲೂಕು ಪಂಚಾಯಿತಿ ಸುವಣಸೌಧದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಯಾವುದೇ ಹಂತದಲ್ಲಿಯೂ ವೈಫಲ್ಯತೆಯಿಂದ ಕೃಷಿಕ ಮುಕ್ತನಾಗಬೇಕಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಸಂಕಿರಣ ನಡೆಸುವ ಮೂಲಕ ಸರ್ಕಾರ ಹಾಗೂ ರೈತರಿಗೆ ತಂತ್ರಜ್ಞಾನ ವರ್ಗಾವಣೆ ಮಾಡುವ ಉದ್ದೇಶವನ್ನು ಕೃಷಿ ಉತ್ಸವ ಹೊಂದಿದೆ.
ಈ ಹಿನ್ನೆಲೆಯಲ್ಲಿ ಕೃಷಿ ಸಂಬಂಧಿತ ಮೇಳಗಳು ಹೆಚ್ಚು ಆಯೋಜನೆಗೊಳ್ಳಬೇಕಿದೆ. ಅಭಿವೃದ್ಧಿ ಹಂತಗಳು ಕೃಷಿಯನ್ನೇ ಅವಲಂಬಿಸಿದ್ದು, ಅದಕ್ಕೆ ಪೂರಕವಾದ ನೂತನ ತಂತ್ರಜ್ಞಾನದ ಅವಶ್ಯಕತೆಯಿದೆ ಎಂದರು.
ಸಚಿವರಿಂದ ಉದ್ಘಾಟನೆ: ಕೃಷಿಮೇಳವನ್ನು ಕೃಷಿ ಸಚಿವ ಕೃಷ್ಣ ಭೈರೇಗೌಡ ಉದ್ಘಾಟಿಸಲಿದ್ದು, ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಅವರನ್ನೂ ಆಹ್ವಾನಿಸಲಾಗಿದೆ. ಸಚಿವದ್ವಯರಿಂದ ಉದ್ಘಾಟನೆ ಕಾರ್ಯಕ್ರಮಗಳು ನೆರವೇರಲಿವೆ. ಉತ್ಸವದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ರೈತರು ಸೇರುವ ನಿರೀಕ್ಷೆಯಿದ್ದು, ಊಟ ಹಾಗೂ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
4 ಗೋಷ್ಠಿಗಳು: ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಆರ್. ಪಾಟೀಲ ಮಾತನಾಡಿ, ಉತ್ಸವದಲ್ಲಿ ಕೃಷಿ ಪಂಡಿತರು, ಚಿಂತಕರು ಮತ್ತು ಸಾಧಕರನ್ನು ಆಹ್ವಾನಿಸುವ ಮೂಲಕ ಮೇಳದಲ್ಲಿ 4 ಕೃಷಿ ಗೋಷ್ಠಿಗಳು, ಮಾರಾಟ ಮಳಿಗೆ, ಜಾನುವಾರು ಪ್ರದರ್ಶನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವದಲ್ಲಿ ಬೀಜ, ಗೊಬ್ಬರ ಇನ್ನಿತರ ಮಾರಾಟ ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಸನ್ಮಾನ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಚ್. ನಟರಾಜ ಮಾತನಾಡಿ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಹೇಮಣ್ಣ ಬಾರಂಗಿ ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.
ಜಾನುವಾರು ಪ್ರದರ್ಶನ: ಪಶು ವೈದ್ಯಾಧಿಕಾರಿ ಡಾ. ನಾಗರಾಜ ಮಾತನಾಡಿ, ಮೇಳದಲ್ಲಿ ಮಿಶ್ರತಳಿ, ಜೋಡಿ ಎತ್ತು, ನಾಟಿ ತಳಿ ಸಂರಕ್ಷಣೆ ದೃಷ್ಟಿಯಿಂದ ಜಾನುವಾರು ಪ್ರದರ್ಶನ ನಡೆಸಲಾಗುವುದು ಎಂದರು. ಜರ್ಸಿ, ಎಚ್‌ಎಫ್, ಕರುಗಳ ಸ್ಫರ್ಧೆಗಳನ್ನು ಏರ್ಪಡಿಸಿದ್ದು, ಉತ್ತಮ ಜಾನುವಾರುಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ರವೀಂದ್ರ ಪಟ್ಟಣಶೆಟ್ಟಿ, ಸದಸ್ಯ ರಮೇಶ ಸುತ್ತಕೋಟಿ, ಪುರಸಭೆ ಸದಸ್ಯರಾದ ಮುರಿಗೆಪ್ಪ ಶೆಟ್ಟರ್, ಪ್ರಶಾಂತ್ ಯಾದವಾಡ, ಶಿವಣ್ಣ ಕುಮ್ಮೂರು, ವೀರಭದ್ರಗೌಡ ಹೊಂಬರಡಿ ಇನ್ನಿತರರು ಉಪಸ್ಥಿತರಿದ್ದರು. ಕೆ. ನಾರಾಯಣ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.