ಗದಗ

ಮರಳು ಸಾಗಾಟ: 7 ಲಾರಿ ವಶ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜು. 4
ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 7 ಲಾರಿ ಹಾಗೂ 4 ಟ್ರ್ಯಾಕ್ಟರ್‌ಗಳನ್ನು ಶುಕ್ರವಾರ ಬೆಳಗ್ಗೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಮೂಲಕ ಹಾಯ್ದು ಹುಬ್ಬಳ್ಳಿ ಮತ್ತು ಬೇರೆ ಕಡೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ಸಮೀಪದ ಉಳ್ಳಟ್ಟಿ ಕ್ರಾಸ್ ಹಾಗೂ ಹರದಗಟ್ಟಿ ಕ್ರಾಸ್ ಹತ್ತಿರ ವಶಪಡಿಸಿಕೊಳ್ಳಲಾಗಿದೆ. ಸಮೀಪದ ಹಲ್ಲೂರು, ಅಮರಾಪುರ, ಬೂದಿಹಾಳ, ಪು, ಬಡ್ನಿ, ಬಟ್ಟೂರು, ಕೊಂಚಿಗೇರಿ, ಅಂಕಲಿ, ಕೋಗನೂರು ಮೊದಲಾದ ಗ್ರಾಮಗಳ ಹಳ್ಳದ ದಡದಲ್ಲಿ ಅಕ್ರಮವಾಗಿ ಮರಳನ್ನು ಎತ್ತುವ ದಂಧೆ ನಿರಂತರವಾಗಿ ನಡೆಸಿದ್ದರು. ಕಂದಾಯ ಅಧಿಕಾರಿಗಳು, ಖನಿಜ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.
ಅಕ್ರಮ ಮರಳು ಗಣಿಗಾರಿಕೆಯ ಭೂತ ಹಳ್ಳ ಹಾಗೂ ನದಿ ದಂಡೆಯ ಅಕ್ಕ ಪಕ್ಕದ ಕೃಷಿ ಭೂಮಿಯನ್ನು ಬಿಡದಿರುವುದು ದುರಂತವಾಗಿದೆ. ಹಲ್ಲೂರು ಹಾಗೂ ಸುತ್ತ ಮುತ್ತಲ ಹಲವಾರು ಗ್ರಾಮಗಳಲ್ಲಿ ನೂರಾರು ಎಕರೆ ಕೃಷಿ ಭೂಮಿ ಅಕ್ರಮ ಮರಳು ಗಣಿಗಾರಿಕೆಯಿಂದ ಹಾಳಾಗಿ ಹೋಗಿದೆ. ಕೃಷಿ ಭೂಮಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ಮಟ್ಟ ಹಾಕುವ ಸಲುವಾಗಿ ಕಂದಾಯ ಅಧಿಕಾರಿಗಳು ಮಾಲ್ಕಿ ಜಮೀನನ್ನು ಸರ್ಕಾರದ ಜಮೀನು ಎಂದು ಪರಿವರ್ತಿಸಿ ಆದೇಶ ಹೊರಡಿಸಿದೆ. ಇಷ್ಟಾದರೂ ಇದೇ ಭೂಮಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿರುವುದು ಸೋಜಿಗದ ಸಂಗತಿಯಾಗಿದೆ.
ಶುಕ್ರವಾರ ಬೆಳಗ್ಗೆ ಸಿಪಿಐ ಶ್ರೀನಿವಾಸ ಮೇಟಿ, ಪಿಎಸ್‌ಐ ವಿಕಾಸ ಲಮಾಣಿ, ಕ್ರೈಂ ಪಿಎಸ್‌ಐ ಸೋನೆಮನೆ ಹಾಗೂ ಸಿಬ್ಬಂದಿ ವರ್ಗ ಅಕ್ರಮವಾಗಿ ಮರಳು ಸಾಗಿಸುವ ಲಾರಿ ಹಾಗೂ ಟ್ರ್ಯಾಕ್ಟರ್ ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.