ಗದಗ

ಗ್ರಾಮಕ್ಕೆ ಕೆರೆ ನೀರು ನುಗ್ಗಿ 26 ಮನೆ ಜಖಂ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 7
ಸತತ ಎರಡು ದಿನಗಳಿಂದ ಶಿರಹಟ್ಟಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಭಾರಿ ಮಳೆಯಾಗಿದ್ದು, ತಾಲೂಕಿನ ಮಜ್ಜೂರ ಕೆರೆಗೆ 6 ಮೀಟರ್‌ಗೂ ಹೆಚ್ಚು ನೀರು ಹರಿದು ಬಂದಿದೆ. ಕೆರೆ ಕೋಡಿಬಿದ್ದು, ಕಾಲುವೆ ಮುಖಾಂತರ ಮಳೆ ನೀರು ಗ್ರಾಮಕ್ಕೆ ನುಗ್ಗಿದ್ದು, 26ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ.
ಸೋಮವಾರ ಶಾಸಕ ರಾಮಕೃಷ್ಣ ದೊಡ್ಡಮನಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ಕೆರೆ ಹಾಗೂ ಕಾಲುವೆ ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿಗಳು ಬೇಜವಾಬ್ದಾರಿ ತೋರಿದ ಹಿನ್ನೆಲೆಯಲ್ಲಿ ಈ ಪರಿ ಹಾವಳಿಯಾಗಿದೆ. ಸಣ್ಣ ನೀರಾವರಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರ ಗಮನಕ್ಕೆ ಈ ವಿಚಾರ ತರಲಾಗಿದೆ. ರು. 50 ಲಕ್ಷ ಮಂಜೂರ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
26ಕ್ಕೂ ಹೆಚ್ಚು ಮನೆ ಜಖಂ
ಗ್ರಾಮದಲ್ಲಿ 26ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿದ್ದು, ರೈತರು ಸಂಗ್ರಹಿಸಿದ್ದ ಆಹಾರ ಧಾನ್ಯ ಹಾಳಾಗಿವೆ. ದನಕರುಗಳ ಹೊಟ್ಟು, ಸೊಪ್ಪಿ ನೀರಿನಲ್ಲಿ ತೇಲಿ ಹೋಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ತಹಸೀಲ್ದಾರ್ ಗಾಳಿ ಕೊಟ್ರೇಶ್ವರ ಭೇಟಿ ನೀಡಿ, ಹಾನಿ ಪ್ರಮಾಣ ಅಂದಾಜಿಸಿದ್ದು, ಎರಡು ದಿನಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಶಾಸಕರು ತಿಳಿಸಿದರು.
ಶಿವನಗೌಡ ಪಾಟೀಲ, ದೇವು ಲಮಾಣಿ, ಶಿವು ಲಮಾಣಿ, ಬಸಣ್ಣ ಮುಂಡವಾಡ, ಎ.ಪಿ. ದಂಡಿನ, ಭಾಷಾಸಾಬ ಜಂಗಳಿ, ಹನುಮಂತಪ್ಪ ಕಿಳ್ಳಿಕ್ಯಾತರ, ಅಬ್ದುರ ಖುರೇಸಿ, ವೀರಣ್ಣ ಅಣ್ಣಿಗೇರಿ, ಶೇಖರ ಲಮಾಣಿ ಉಪಸ್ಥಿತರಿದ್ದರು.
ಯಳವತ್ತಿಯಲ್ಲಿ ಭಾರಿ ಮಳೆ
ಶಿರಹಟ್ಟಿ:  ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಸೋಮವಾರ ಸಂಜೆ ಭಾರಿ ಮಳೆ ಸುರಿದು, ಗುಂಡೇಶ್ವರ ಕೆರೆ ತುಂಬಿದೆ. ಉಕ್ಕಿದ ನೀರು ಹರಿಜನಕೇರಿ, ಇಂದಿರಾ ನಗರದ ಮನೆಗಳಿಗೆ ನುಗ್ಗಿದೆ. ಜನತಾ ಪ್ಲಾಟ್, ಎಸ್ಸಿ ಕಾಲನಿಯಲ್ಲೂ ಹತ್ತಾರು ಮನೆಗಳು ನೆಲಕ್ಕುರುಳಿವೆ.
ಯಳವತ್ತಿ, ಯತ್ತಿನಹಳ್ಳಿ, ಮಾಡಳ್ಳಿ ಗ್ರಾಮದಿಂದ ಲಕ್ಷ್ಮೇಶ್ವರ, ಮಾಗಡಿಗೆ ಹೋಗಿದ್ದ ವಿದ್ಯಾರ್ಥಿಗಳು ಹಳ್ಳ ತುಂಬಿದ್ದರಿಂದ ಎರಡು ತಾಸು ಕಾಯಬೇಕಾಯಿತು. ರೈತರ ಹೊಲಗಳ ಬದುಗಳೂ ಮಳೆ ರಭಸಕ್ಕೆ ಒಡೆದು ಹೋಗಿದ್ದು, ಬಿಟಿ ಹತ್ತಿ ಬೆಳೆ ನಾಶವಾಗಿದೆ.
ತಹಸೀಲ್ದಾರ್ ಕೊಟ್ರೇಶಪ್ಪ ಗಾಳಿ ಗ್ರಾಮಕ್ಕೆ ಭೇಟಿ ನೀಡಿ, ಹಾನಿಗೀಡಾದ ಜನರಿಗೆ ಗ್ರಾಮದ ಶಾಲೆ ಹಾಗೂ ಪಂಚಾಯತ್ ಕಟ್ಟಡದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ತುರ್ತು ಪರಿಹಾರ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ತಾಪಂ ಸದಸ್ಯ ನಿಂಬಣ್ಣ ಮಡಿವಾಳರ ಆಗ್ರಹಿಸಿದ್ದು, ಹಳ್ಳಕ್ಕೆ ಸೇತುವೆ ಕಟ್ಟಿಸುವಂತೆ ಶಾಸಕರಲ್ಲಿ ಮನವಿ ಮಾಡಿದ್ದಾರೆ.
ಲಕ್ಷ್ಮೇಶ್ವರ: ಉತ್ತಮ ಮಳೆ
ಲಕ್ಷ್ಮೇಶ್ವರ: ಸೋಮವಾರ ಪಟ್ಟಣದ ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿ ಉತ್ತಮವಾದ ಮಳೆಯು ಸುರಿಯುವ ಮೂಲಕ  ಸೂರಣಗಿ ಮುಸ್ಲಿಂ ಬಾಂಧವರ ಪ್ರಾರ್ಥನೆ ಸಾರ್ಥಕತೆ ಮೂಡಿಸಿದಂತಾಗಿದೆ.  ಹಳ್ಳದಕೇರಿಯ ಓಣಿಯ ಸಾರ್ವಜನಿಕರು ಸೋಮವಾರ ಭಜನೆ, ಜಾಂಜ್, ಡೊಳ್ಳುಗಳನ್ನು ಬಾರಿಸುತ ಮೆರವಣಿಗೆ ಮಾಡುವ ಮೂಲಕ ಪಟ್ಟಣದ ಹೊರವಲಯದಲ್ಲಿರುವ ಧರ್ಮಾಪುರ ಬಸವಣ್ಣನಿಗೆ ಪೂಜೆ ಸಲ್ಲಿಸಿ ಮಳೆಗಾಗಿ ಅನ್ನ ಸಂತರ್ಪಣೆ ಮಾಡಿದರು. ದೇಸಾಯಿ ಬಣದಲ್ಲಿನ ಈಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಅನ್ನಸಂತರ್ಪಣೆ ಮಾಡಿದ ಕೆಲವೆ ಹೊತ್ತಿನಲ್ಲಿ ಮಳೆ ಸುರಿಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.