ಗದಗ

ಮಾಹಿತಿ ವಿಳಂಬ: ನಾಗಾವಿ ಗ್ರಾಪಂ ಕಾರ್ಯದರ್ಶಿಗೆ ರು. 5 ಸಾವಿರ ದಂಡ

Published On :

ಕನ್ನಡಪ್ರಭ ವಾರ್ತೆ, ಗದಗ, ಜು. 7
ತಾಲೂಕಿನ ನಾಗಾವಿ ಗ್ರಾಪಂನಲ್ಲಿ ಅನುಷ್ಠಾನಗೊಂಡ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮಸ್ಥರು 2012ರಲ್ಲಿಯೇ ಅರ್ಜಿ ಸಲ್ಲಿಸಿದರೂ ಇದುವರೆಗೂ ಮಾಹಿತಿ ನೀಡದ ಗ್ರಾಪಂ ಕಾರ್ಯದರ್ಶಿ ಬಿ.ಎಂ. ಮಣ್ಣೂರ ಅವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ ರು. 5 ಸಾವಿರ ದಂಡ ಭರಿಸುವಂತೆ ಸೂಚಿಸಿದೆ. ಆದರೆ, ಗ್ರಾಪಂ ಕಾರ್ಯದರ್ಶಿ ಮಾತ್ರ ಈ ಆದೇಶಕ್ಕೆ ಬೆಲೆ ನೀಡಿಲ್ಲ.
ನಾಗಾವಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕಳಸಾಪುರ ಗ್ರಾಮದಲ್ಲಿ ಬಡವರಿಗಾಗಿ 2010, 2011, 2012ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಲ್ಲಿ ಆಯ್ಕೆ ಮಾಡಿದ ಫಲಾನುಭವಿಗಳ ಪಟ್ಟಿ, ಗ್ರಾಮಸಭೆಯಲ್ಲಿ ಬರೆದ ಠರಾವು ಪ್ರತಿ, ಸಭೆಯ ನಡಾವಳಿಗಳು, ಗ್ರಾಮಸಭೆ ನಡೆಸಿದ ದಿನದಂದು ಮಾಡಿಸಿದ ವಿಡಿಯೋ ಚಿತ್ರೀಕರಣದ ಸಿಡಿ, ಆಯ್ಕೆ ಮಾಡಿದ ಫಲಾನುಭವಿಗಳ ಪಟ್ಟಿಯ ಮಾಹಿತಿ ನೀಡುವಂತೆ ವಿನಂತಿ ಮಾಡಿದ್ದರು. ಆದರೆ ಗ್ರಾಪಂ ಅಧಿಕಾರಿಗಳು ಮಾತ್ರ ಗಮನ ನೀಡಲೇ ಇಲ್ಲ.
ಮೇಲ್ಮನವಿ
30 ದಿನ ಕಳೆದರೂ ಗ್ರಾಪಂ ಅಧಿಕಾರಿಗಳು ಮಾಹಿತಿ ನೀಡದೇ ಇರುವುದರಿಂದ ಬೇಸತ್ತ ಫಲಾನುಭವಿಗಳು ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದರು. ಅಲ್ಲಿಂದ ಇಲ್ಲಿಯವರೆಗೂ ಮಾಹಿತಿ ಹಕ್ಕು ಆಯೋಗದಲ್ಲಿ 5 ಬಾರಿ ವಿಚಾರಣೆ ನಡೆದಿದ್ದರೂ ಗ್ರಾಪಂ ಕಾರ್ಯದರ್ಶಿ ಒಂದು ಬಾರಿ ಮಾತ್ರ ಹಾಜರಾಗಿದ್ದು, ಹಲವಾರು ಸಂಶಯಕ್ಕೆ ಕಾರಣವಾಗಿದೆ.
ತಕ್ಷಣವೇ ಮಾಹಿತಿ ಕೇಳಿದ ವ್ಯಕ್ತಿಗಳಿಗೆ ಮಾಹಿತಿ ನೀಡಬೇಕು, ಇಲ್ಲಿಯವರೆಗೂ ಮಾಹಿತಿ ನೀಡದೇ ಇರುವುದಕ್ಕೆ ರು. 5 ಸಾವಿರ ದಂಡ ಹಾಗೂ ಮಾಹಿತಿ ನೀಡದ ಹಿನ್ನೆಲೆಯಲ್ಲಿ ರು. 2 ಸಾವಿರ ಅವರಿಗೆ ಖರ್ಚು ವೆಚ್ಚವನ್ನು ನೀಡಬೇಕು ಎಂದು ಹಲವಾರು ಬಾರಿ ಮಾಹಿತಿ ಹಕ್ಕು ಆಯೋಗ ಆದೇಶಿಸಿದ್ದರೂ ಅಧಿಕಾರಿಗಳು ಮಾತ್ರ ಇದರತ್ತ ಗಮನನೀಡುತ್ತಿಲ್ಲ.
ಹಲವು ಸಂಶಯಕ್ಕೆ ದಾರಿ
ಅದೇಕೆ ಅಧಿಕಾರಿಗಳು ಮಾಹಿತಿ ನೀಡಲು ವಿಳಂಬ ಮಾಡುತ್ತಿದ್ದಾರೆ. ಮಾಹಿತಿ ಹಕ್ಕು ಹೋರಾಟಗಾರರ ಆರೋಪದಂತೆ ಅಲ್ಲಿ ಭ್ರಷ್ಟಾಚಾರ ನಡೆದಿದೆಯೇ? ಅದಕ್ಕಾಗಿಯೇ ಅವರು ಮಾಹಿತಿ ನೀಡುತ್ತಿಲ್ಲವೇ? ಅಥವಾ ಅಧಿಕಾರಿಗಳ ಮೇಲೆ ಯಾರಾದರೂ ಒತ್ತಡ ಹೇರುತ್ತಿದ್ದಾರಾ? ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚಿತವಾಗುತ್ತಿದೆ.
ತಾಪಂ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಈ ಬಗ್ಗೆ ಪರಿಶೀಲಿಸಿ ಉತ್ತರ ನೀಡುತ್ತೇನೆ ಎನ್ನುತ್ತಾರೆ. 2010ರಿಂದ ಈ ಪ್ರಕರಣ ನಡೆಯುತ್ತಿದ್ದರೂ ಅದೇಗೆ ಅಧಿಕಾರಿಗಳಿಗೆ ಗೊತ್ತಿಲ್ಲ, ಅಧಿಕಾರಿಗಳ ಬಗ್ಗೆಯೂ ಹಲವಾರು ಸಂಶಯಗಳುವ್ಯಕ್ತವಾಗುತ್ತಿವೆ.
ಸಂಶಯ ವ್ಯಕ್ತವಾಗುತ್ತಿದೆ....
ಹಲವಾರು ವರ್ಷಗಳಿಂದ ಗ್ರಾಪಂ ಮಾಹಿತಿ ಪಡೆಯಲು ಪರದಾಡುತ್ತಿದ್ದು, ಮಾಹಿತಿ ನೀಡಬೇಕಾದ ಅಧಿಕಾರಿ ಮಣ್ಣೂರ ಮಾಹಿತಿ ಹಕ್ಕು ಆಯೋಗಕ್ಕೂ ಹಾಜರಾಗುತ್ತಿಲ್ಲ, ಮಾಹಿತಿಯನ್ನು ನೀಡುತ್ತಿಲ್ಲ. ಈ ಕುರಿತು ಗದಗ ತಾಪಂ ಹಾಗೂ ಜಿಪಂ ಹಿರಿಯ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇದ್ದರೂ ಅಧಿಕಾರಿಗಳು ಮಾತ್ರ ತಮಗೇನು ಗೊತ್ತಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಇದರಿಂದ ಹಲವಾರು ಸಂಶಯಗಳು ವ್ಯಕ್ತವಾಗುತ್ತಿದೆ. ಕೂಡಲೇ ಮಾಹಿತಿ ಪೂರೈಕೆ ಮಾಡಬೇಕು.
        - ಮುತ್ತು ನಾಯ್ಕರ, ಗ್ರಾಮಸ್ಥ


-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.