ಗದಗ

ರೈಲು ಮಾರ್ಗ: ಹೋರಾಟ ಫಲ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 9
ಅಭಿವೃದ್ಧಿ ಯೋಜನೆ, ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೂ ಹೋರಾಟ ಮಾಡುವ ಮೂಲಕವೇ ಪಡೆದುಕೊಳ್ಳುವುದು ಮುಂಡರಗಿ ತಾಲೂಕಿನ ವಿಶೇಷ.
ಅದಕ್ಕೆ ತಾಜಾ ಉದಾಹರಣೆ ಗದಗ, ಮುಂಡರಗಿ, ಹೂವಿನಹಡಗಲಿ ಮತ್ತು ಹರಪ್ಪನಹಳ್ಳಿ ಮಾರ್ಗವಾಗಿ ಹರಿಹರಕ್ಕೆ ನೂತನ ರೈಲ್ವೆ ಮಾರ್ಗವನ್ನು ಪ್ರಾರಂಭಿಸುವಂತೆ ಹೋರಾಟ ಮಾಡುತ್ತಾ ಬಂದಿರುವುದು. ಇದೀಗ ಕೇಂದ್ರ ಸರ್ಕಾರ ರೈಲ್ವೆ ಬಜೆಟ್‌ನಲ್ಲಿ ಗದಗ-ಹರಪ್ಪನಹಳ್ಳಿ ರೈಲು ಮಾರ್ಗದ ಸರ್ವೆ ಕಾರ್ಯಕ್ಕೆ ಮಂಜೂರಾತಿ ಘೋಷಣೆಯಾಗಿದೆ.
ಇಲ್ಲಿನ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಹಾಗೂ ರೈಲ್ವೆ ಹೋರಾಟ ವೇದಿಕೆಯ ಕಾರ್ಯಕರ್ತರು ಮೊದಲು ತಾಲೂಕು ಮಟ್ಟದಲ್ಲಿರುವ ಕೇಂದ್ರ ಸರ್ಕಾರದ ಅಂಚೆ ಕಚೇರಿ ದೂರವಾಣಿ ಕಚೇರಿ ಎದುರಿನಲ್ಲಿ ಪ್ರತಿಭಟನೆ, ನಂತರದ ದಿನಗಳಲ್ಲಿ ಗದಗ ರೈಲ್ವೆ ನಿಲ್ದಾಣಕ್ಕೆ ತೆರಳಿ ರೈಲು ತಡೆಯುವ ಮೂಲಕ ಪ್ರತಿಭಟಿಸಿದ್ದಾರೆ.
ರೈಲು ಮಾರ್ಗಕ್ಕಾಗಿ ಅನೇಕ ಬಾರಿ ಪಾದಯಾತ್ರೆ ನಡೆಸಿದ್ದಾರೆ. 2 ರಿಂದ 3 ಬಾರಿ ನವದೆಹಲಿಗೆ ತೆರಳಿ ಅಲ್ಲಿನ ಜಂತರ್-ಮಂತರ್‌ನಲ್ಲಿ ಪ್ರತಿಭಟನೆಗೆ ಕುಳಿತಿದ್ದಾರೆ. ಇಷ್ಟೆಲ್ಲ ಹೋರಾಟ ಮಾಡಿದರೂ ಸಹ ತಮ್ಮ 7-8 ವರ್ಷಗಳ ಹೋರಾಟಕ್ಕೆ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳಿಂದ, ಜನಪ್ರತಿನಿಧಿಗಳಿಂದ ಯಾವುದೇ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎನ್ನುವ ಉದ್ದೇಶದಿಂದ ಜನವರಿಯಲ್ಲಿ, ಹೋರಾಟ ಪ್ರಾರಂಭ ಆದಾಗಿನಿಂದ ಅಂದಿನವರೆಗೂ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನೀಡಿದ ಎಲ್ಲ ಮನವಿಗಳನ್ನು ಶವಯಾತ್ರೆಯ ಮೂಲಕ ಪಟ್ಟಣದಲ್ಲಿ ಮೆರವಣಿಗೆ ಮಾಡಿ ನಂತರ ತಹಸೀಲ್ದಾರ್ ಕಚೇರಿಯಲ್ಲಿ ಅದಕ್ಕೆ ಬೆಂಕಿ ಹಚ್ಚಿ ಸುಡುವ ಮೂಲಕ ಅಂತ್ಯಕ್ರಿಯೆಯನ್ನು ಮಾಡಿದರು. ನಂತರ ಅವುಗಳ ತಿಥಿ ಮಾಡಿ ಊಟವನ್ನು ಹಾಕಿದರು. ಇಷ್ಟೇ ಅಲ್ಲದೇ ಸುಟ್ಟ ಶವಗಳ ಬೂದಿಯನ್ನು ಯಮುನಾ ನದಿಗೆ ತೆರಳಿ ಅಲ್ಲಿ ಬಿಟ್ಟು ಬಂದರು.
ಲೋಕಸಭಾ ಸದಸ್ಯ ಶಿವಕುಮಾರ ಉದಾಸಿಯವರಿಗೆ ಜ. ಅನ್ನದಾನೀಶ್ವರ ಮಠದಲ್ಲಿ ಮನವಿ ಪತ್ರನೀಡಿ ಒತ್ತಾಯಿಸಿದರು. ಅದಕ್ಕೆ ಪ್ರತಿಯಾಗಿ ಮಂಗಳವಾರದ ಬಜೆಟ್‌ನಲ್ಲಿ ಗದಗ-ಹರಪ್ಪನಹಳ್ಳಿ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿರುವುದು ಇಲ್ಲಿನ ಹೋರಾಟಗಾರರಿಗೆ ಸಂದ ಫಲವಾಗಿದೆ.  
ವಿಜಯೋತ್ಸವ
ಮುಂಡರಗಿ ಸಾರ್ವಜನಿಕ ಹೋರಾಟ ವೇದಿಕೆ ಹಾಗೂ ರೈಲ್ವೆ ಹೋರಾಟ ವೇದಿಕೆ ಮತ್ತು ಹೂವಿನ ಹಡಗಲಿ ರೈಲ್ವೆ ಹೋರಾಟ ವೇದಿಕೆ ಹಾಗೂ ಅಲ್ಲಿನ ಪತ್ರಿಕಾ ಮಿತ್ರರು ಸದಾ ರೈಲ್ವೆ ಹೋರಾಟದಲ್ಲಿದ್ದು, ಇದೀಗ ತಮ್ಮ ಹೋರಾಟಕ್ಕೆ ಜಯ ದೊರೆತಿದೆ ಎಂದು ಬುಧವಾರ ಮುಂಡರಗಿ ಪಟ್ಟಣದ ತೋಂಟದಾರ್ಯ ಮಠದಲ್ಲಿ  ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.
ಮುಂಡರಗಿ-ಹರಪ್ಪನಹಳ್ಳಿ ರೈಲ್ವೆ ಮಾರ್ಗದ ಸರ್ವೆ ಕಾರ್ಯಕ್ಕೆ ಆದೇಶ ದೊರೆತಿರುವು ಮುಂಡರಗಿ ಹೋರಾಟಗಾರರ ಹಾಗೂ ಮಾಧ್ಯಮದ ಎಲ್ಲ ಪ್ರತಿನಿಧಿಗಳ ಗೆಲವಾಗಿದೆ. ಇದರಲ್ಲಿ ಯಾವುದೇ ರಾಜಕಾಣಿಗಳ ಪಾತ್ರವಿಲ್ಲ. ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಗೆಳೆಯರು ನಡೆಸಿಕೊಂಡು ಬಂದಿರುವ ಹೋರಾಟ ಫಲವೇ ಇಂದಿನ ಸರ್ವೆ ಕಾರ್ಯ ಪ್ರಾರಂಭವಾಗಲು ಕಾರಣವಾಗಿದೆ.
                   - ವೈ.ಎನ್. ಗೌಡರ,
        ತಾಲೂಕು ಹೋರಾಟ ವೇದಿಕೆ ಅಧ್ಯಕ್ಷ

 ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.