ರಣತೂರಲ್ಲಿ ರುದ್ರಭೂಮಿಯೇ ಇಲ್ಲ!
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 20
ತಾಲೂಕಿನ ರಣತೂರ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ರುದ್ರಭೂಮಿಯೇ ಇಲ್ಲ...!
ರಸ್ತೆ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರ ಮಾಡುವ ಅನಿವಾರ್ಯತೆ ಎದುರಾಗಿದೆ.
ಗ್ರಾಮದಲ್ಲಿ 3 ಸಾವಿರ ಜನಸಂಖ್ಯೆ ಇದ್ದು, ಸ್ವಂತ ಜಮೀನು ಇದ್ದವರು ತಮ್ಮ ಹೊಲದಲ್ಲಿ ಶವಸಂಸ್ಕಾರ ಮಾಡಿಕೊಳ್ಳುತ್ತಿದ್ದು, ಹೊಲ ಇಲ್ಲದವರಿಗೆ ಶವ ಹೂಳಲು ಜಾಗವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಕಂದಾಯ ಅಧಿಕಾರಿಗಳಿಗೆ ಗ್ರಾಮಸ್ಥರೆಲ್ಲರೂ ಸೇರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ರುದ್ರಭೂಮಿಗೆ ಜಾಗ ಕೊಡಿಸುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರ ಭೂಮಿಗೆ ಯೋಗ್ಯ ಬೆಲೆ ನೀಡಿದರೆ ಜಮೀನು ದೊರೆಯುವ ಸಾಧ್ಯತೆಯಿದ್ದು, ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಇಂದಿಗೂ ರಸ್ತೆ ಪಕ್ಕದಲ್ಲಿಯೇ ಶವ ಸಂಸ್ಕಾರ ನಡೆಯುತ್ತಿದೆ.
ಸೌಲಭ್ಯದಿಂದ ವಂಚಿತ
ಗ್ರಾಮಕ್ಕೆ ವಿದ್ಯುತ್, ಸಮರ್ಪಕ ರಸ್ತೆಯಿಲ್ಲ. ಗಟಾರ ವ್ಯವಸ್ಥೆ ಇಲ್ಲದ ಕಾರಣ ನೀರು ರಸ್ತೆ ಮೇಲೆ ಹರಿದು ಕೊಳಚೆ ನಿರ್ಮಾಣಗೊಂಡಿದೆ. ಸಾಂಕ್ರಾಮಿಕ ಕಾಯಿಲೆ ಹರಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಜನತೆಗೆ ಸಿಗಬೇಕಾದ ಸೌಲಭ್ಯ ಮರೀಚಿಕೆಯಾಗಿವೆ. ಗ್ರಾಮ ಪಂಚಾಯಿತಿಯಲ್ಲಿ ಸರಿಯಾಗಿ ಗ್ರಾಮಸಭೆ ನಡೆಯುತ್ತಿಲ್ಲ. ಗ್ರಾಮದ ರಸ್ತೆಗಳನ್ನು ತಿಪ್ಪೆಗುಂಡಿಗಳು ಆಕ್ರಮಿಸಿಕೊಂಡಿದ್ದು, ಸಂಚಾರಕ್ಕೆ ಅಡೆತಡೆಯುಂಟಾಗುತ್ತಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಮನೋಭಾವದಿಂದಾಗಿ ಕುಗ್ರಾಮವಾಗಿ ಪರಿವರ್ತನೆಯಾಗಿದೆ.
ಗ್ರಾಮದಿಂದ ಅರಣ್ಯ ಪ್ರದೇಶಕ್ಕೆ ಹೋಗುವ ರಸ್ತೆ ಮೇಲೆಯೇ ಸುಮಾರು ಐದು ದಶಕದಿಂದ ಶವಸಂಸ್ಕಾರ ಮಾಡಲಾಗುತ್ತಿದೆ. ಗ್ರಾಮದ ಅಭಿವೃದ್ಧಿಗೆ ಬಂದ ಕೋಟ್ಯಂತರ ಅನುದಾನ ದುರ್ಬಳಕೆಯಾಗಿದ್ದು, ಕೇವಲ ವ್ಯವಸ್ಥೆಯನ್ನು ದೂರುವುದರ ಹೊರತಾಗಿ ಏನೂ ಮಾಡದಂತಾಗಿದೆ. ನಿರ್ಗತಿಕ, ಬಡವರಿಗೆ ಆಶ್ರಯ ಮನೆಗಳು ತಲುಪಿಲ್ಲ. ರು. 25 ಸಾವಿರ ನೀಡಿದವರಿಗೆ ಹಾಗೂ ಸದಸ್ಯ ಸಂಬಂಧಿಕರ ಪಾಲಾಗಿವೆ ಎಂದು ಗ್ರಾಮಸ್ಥರಾದ ಶರೀಫಸಾಬ ಛಬ್ಬಿ, ಯಲ್ಲನಗೌಡ ಹನಮಗೌಡರ, ಪರಶುರಾಮ ಪ್ಯಾಟಿ, ವಿರೂಪಾಕ್ಷಪ್ಪ ನಿರ್ವಾಣಿಶೆಟ್ಟರ, ಕಾಸಿಂಸಾಬ ಛಬ್ಬಿ, ವೀರಣ್ಣ ಪಟ್ಟಣಶೆಟ್ಟಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

