ಗದಗ

ಹೆಸರಿಗೆ ಕೀಟ: ಕೃಷಿ ವಿವಿ ತಂಡ ಪರಿಶೀಲನೆ

Published On :

ಶಿರಹಟ್ಟಿ: ತಾಲೂಕಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಹವಾಮಾನ ವೈಪರೀತ್ಯದಿಂದ ಹೆಸರು ಬೆಳೆಗೆ ರಸ ಹೀರುವ ಕೀಟ ತಗುಲಿ ರೋಗಕ್ಕೆ ತುತ್ತಾಗಿದೆ. ರೈತರು ಮುಂಜಾಗ್ರತಾ ಕ್ರಮವಾಗಿ ಪ್ರಾರಂಭದ ಹಂತ 10ರಿಂದ 15 ದಿನದಲ್ಲಿ ಔಷಧಿ ಸಿಂಪಡಣೆ ಮಾಡಿದ್ದರೆ ರೋಗ ಹತೋಟಿಗೆ ಬರುವ ಸಾಧ್ಯತೆ ಇತ್ತು ಎಂದು ಧಾರವಾಡ ಕೃಷಿ ವಿವಿಯ ತಳಿ ವರ್ಧಕ ಡಾ. ಪಿ.ವೈ. ಕಾಮನ್ನವರ ಹೇಳಿದರು.
ಹೆಸರು ಬೆಳೆಗೆ ರೋಗ ಕಾಣಿಸಿಕೊಂಡ ತಾಲೂಕಿನ ಛಬ್ಬಿ ಗ್ರಾಮದ ರೈತರ ಹೊಲಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು ನಂತರ ಮಾತನಾಡಿದರು. ಕೃಷಿ ಇಲಾಖೆ ದೃಢಪಡಿಸಿದ ಬೀಜವನ್ನೇ ಇಲಾಖೆಯಿಂದ ರೈತರಿಗೆ ವಿತರಣೆ ಮಾಡಲಾಗುತ್ತಿದೆ. ವರುಣ ಕಂಪನಿಯವರು ವಿತರಣೆ ಮಾಡಿದ ಬೀಜ ಬಹುತೇಕ ಕಡೆಗಳಲ್ಲಿ ವಿಫಲವಾಗಿದ್ದು, ಮತ್ತೊಮ್ಮೆ ಪರಿಶೀಲನೆ ಮಾಡಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ರೋಗ ನಿರೋಧಕ ಶಕ್ತಿ ಕಡಿಮೆ ಇರುವ ತಳಿಯೂ ಇದಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳಿಗೆ ರೋಗ ಕಾಣಿಸಿಕೊಂಡಿದೆ. ಬೆಳೆ ಹಾನಿಯಾದ ಬಗ್ಗೆ ರೈತರಿಗೆ ಪರಿಹಾರ ಕೊಡಿಸುವ ಅಧಿಕಾರ ನಮ್ಮ ಹಂತದಲ್ಲಿಲ್ಲ. ಹಾನಿಗೆ ಅಧಿಕಾರಿಗಳನ್ನೇ ರೈತರು ಹೊಣೆಗಾರರನ್ನಾಗಿ ಮಾಡುವುದು ಸರಿಯಾದ ಕ್ರಮವಲ್ಲ. ಸರಿಯಾಗಿ ಪರಿಶೀಲನೆ ಮಾಡಿ ಹಿರಿಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ವರದಿ ಕಳುಹಿಸಿ ಕೊಡಲಾಗುವುದು ಎಂದು ಕೀಟ ತಜ್ಞ ಡಾ. ಆರ್.ಎಂ. ಪಾಟೀಲ, ರೋಗ ಶಾಸ್ತ್ರಜ್ಞ ಶಾಮರಾವ್ ಜಹಗೀರದಾರ, ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ಪಾಟೀಲ ರೈತರಿಗೆ ತಿಳಿಸಿದರು.
ರೈತರ ವಿರೋಧ: ಜಿಲ್ಲಾ ಬಿಜೆಪಿ ಎಸ್ಸಿ ಘಟಕದ ಅಧ್ಯಕ್ಷ ಜಾನು ಲಮಾಣಿ ಮಾತನಾಡಿ, ಇಲಾಖೆಯಲ್ಲಿ ರೈತರು ಖರೀದಿಸಿದ ಬೀಜಕ್ಕೆ ಬಿಲ್ ನೀಡದೇ ಬಿಳಿ ಹಾಳೆ ಮೇಲೆ ಬರೆದುಕೊಟ್ಟು ಮೋಸವೆಸಗಿದ್ದಾರೆ. ಇದಕ್ಕೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದ ಅವರು, ಬೆಳೆ ಹಾನಿ ಬಗ್ಗೆ ಪ್ರಾಮಾಣಿಕವಾಗಿ ವರದಿ ಸಿದ್ದಪಡಿಸಿ ಮೇಲಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಿಕೊಟ್ಟು ಸೂಕ್ತ ಸಮಯದಲ್ಲಿ ರೈತರಿಗೆ ಪರಿಹಾರ ಸಿಗುವಂತೆ ಮಾಡದೇ ಹೋದಲ್ಲಿ ಕಾರ್ಯಾಲಯಕ್ಕೆ ಬೀಗ ಜಡಿದು ರೈತರೊಂದಿಗೆ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.  ಲಿಂಬಣ್ಣ ಪೂಜಾರ, ಮಲ್ಲೇಶ ಲಮಾಣಿ, ವಿ.ಸಿ. ಚಕ್ರಸಾಲಿ, ಕೀರಪ್ಪ ಲಮಾಣಿ, ಷಣ್ಮುಖ ಪೂಜಾರ, ಶೇಖಪ್ಪ ಲಮಾಣಿ, ಪಾಂಡಪ್ಪ ಪೂಜಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.