ಗದಗ

ರೋಡ್‌ಬ್ರೆಕ್ ವಿಳಂಬ: ಕಿರಿಕಿರಿ

Published On :

-ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಜು. 30
ಬೆಟಗೇರಿ ಹೆಲ್ತ್ ಕ್ಯಾಂಪ್ ಬಳಿ ಇರುವ ಲೋಯಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗದಗ- ಬೆಟಗೇರಿ ಸಾವಿರಾರು ಮಕ್ಕಳು ಓದುತ್ತಿದ್ದು, ಬೆಳಗ್ಗೆ ಶಾಲೆ ಪ್ರಾರಂಭವಾಗುವ ವೇಳೆ ಹಾಗೂ ಸಂಜೆ ಶಾಲೆ ಬಿಡುವ ಸಂದರ್ಭದಲ್ಲಿ ವಾಹನ ದಟ್ಟಣೆ ಹೆಚ್ಚಾಗುವುದರಿಂದ ಸಣ್ಣ ಸಣ್ಣ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರೋಡ್ ಬ್ರೇಕ್‌ಗಳನ್ನು ಅಳವಡಿಸಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಮಾತ್ರ ಯಾರೂ ಗಮನ ನೀಡುತ್ತಿಲ್ಲ.
ರಾಜ್ಯ ಹೆದ್ದಾರಿ: ಲೋಯಲಾ ಶಾಲೆಯಿಂದ ಮಕ್ಕಳು ಮುಖ್ಯ ರಸ್ತೆಗೆ ಬಂದು ಸೇರಬೇಕಾದಲ್ಲಿ ಅವರು ರಾಜ್ಯ ಹೆದ್ದಾರಿ ಪಾಲಾ ಬದಾಮಿ ರಸ್ತೆಯನ್ನು ದಾಟಬೇಕು. ಬೆಳಗ್ಗೆ ಮತ್ತು ಸಂಜೆ ಇಲ್ಲಿ ಅತಿಯಾದ ವಾಹನ ಸಂಚಾರವಿರುತ್ತದೆ. ಇದೇ ಸಂದರ್ಭದಲ್ಲಿ ಶಾಲೆಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ರಿಕ್ಷಾಗಳು, ಟಂಟಂಗಳು ಒಮ್ಮೆಯೇ ಜಮಾವಣೆಗೊಳ್ಳುವುದರಿಂದ ಅತಿಯಾದ ವಾಹನ ದಟ್ಟಣೆ ನಿರ್ಮಾಣವಾಗುತ್ತದೆ. ಇದು ಹತ್ತಾರು ರೀತಿಯ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿ ರೋಡ್ ಬ್ರೇಕ್‌ಗಳನ್ನು ಅಳವಡಿಸಿದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಭಾರಿ ವಾಹನಗಳ ವೇಗಕ್ಕೆ ಕಡಿವಾಣ ಬೀಳಲಿದೆ. ಅದರಲ್ಲಿಯೂ ಲಾರಿ ಹಾಗೂ ಬೃಹತ್ ಟಿಪ್ಪರ್ ಅತಿಯಾದ ಪ್ರಮಾಣದಲ್ಲಿ ಸಂಚರಿಸುತ್ತಿವೆ. ಶಾಲೆ ಪ್ರಾರಂಭದ ದಿನಗಳಲ್ಲಿ ಕೆಲ ಪೊಲೀಸ್ ಸಿಬ್ಬಂದಿ ಹಾಜರಿದ್ದು, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದರು. ಆದರೆ ದಿನಕಳೆದಂತೆ ಪೊಲೀಸರು ಮಾಯವಾಗಿದ್ದು, ಮಕ್ಕಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಸಚಿವರ ಮಾತಿಗೆ ಬೆಲೆ ಇಲ್ಲವೇ?
ಬೆಟಗೇರಿಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈಚೆಗೆ ತೆರಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ಶಾಲೆಯಲ್ಲಿ ಓದುತ್ತಿರುವ ಕೆಲ ಮಕ್ಕಳು ಮತ್ತು ಪಾಲಕರು, ಸಮಸ್ಯೆಯ ಬಗ್ಗೆ ಮನವಿ ಸಲ್ಲಿಸಿದರು. ಇದನ್ನು ಗಮನಿಸಿದ ಸಚಿವ ಪಾಟೀಲ, ಇದೊಂದು ಉಪಯುಕ್ತ ಸಲಹೆಯಾಗಿದೆ. ಮಕ್ಕಳ ಜೀವ ರಕ್ಷಣೆಯ ವಿಷಯದಲ್ಲಿ ಇದು ಅತ್ಯಂತ ಅವಶ್ಯಕ ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ತಕ್ಷಣವೇ ರೋಡ್ ಬ್ರೆಕ್ ಹಾಕಿಸುವಂತೆ ಸೂಚಿಸಿಯೇ 15 ದಿನ ಕಳೆದಿದೆ. ಇನ್ನುವರೆಗೂ ಕೆಲಸ ಮಾತ್ರ ನಡೆದಿಲ್ಲ. ಜಿಲ್ಲೆಯ ಅಧಿಕಾರಿಗಳು ಸಚಿವರ ಮಾತಿಗೂ ಬೆಲೆ ನೀಡುವುದಿಲ್ಲವೇ? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.