ಬರದ ಮಧ್ಯೆಯೂ ಸಂಭ್ರಮ
ಪಿ.ಎಸ್. ಪಾಟೀಲ
ರೋಣ: 4 ವರ್ಷಗಳಿಂದ ಸತತ ಮಳೆಯ ಕೊರತೆಯ ಮಧ್ಯೆ ತತ್ತರಿಸಿ, ಬರ ತಾಲೂಕು ಎಂಬ ಹಣೆಪಟ್ಟಿ ಹೊಂದಿದ ರೋಣ ತಾಲೂಕಿನಲ್ಲಿ ಬರದ ಮದ್ಯೆಯೂ ಗುರುವಾರ ನಾಗಪಂಚಮಿಯನ್ನು ನಾಗ ಮೂರ್ತಿಗೆ ಹಾಲು ಎರೆಯುವುದರ ಮೂಲಕ ಮಹಿಳೆಯರು, ಮಕ್ಕಳು, ರೈತರು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಮಹಿಳೆಯರಿಗೆ ಪ್ರಿಯವಾದ ಹಬ್ಬ ಇದಾಗಿದ್ದು, ಹಬ್ಬದ ಆಚರಣೆ ನಿಮಿತ್ತವಾಗಿ ಮಹಿಳೆಯರು ಬೆಳಗ್ಗೆಯಿಂದಲೇ ಸಿದ್ಧತೆಯಲ್ಲಿ ತೋಡಗಿದ್ದರು. ಹಾಲು ಎರೆಯುವುದಕ್ಕಾಗಿ ಹೊಸ ಉಡುಗೆ ತೊಟ್ಟು, ಪೂಜಾ ಕೈಂಕರ್ಯಕ್ಕಾಗಿ ಹಾಲು, ಉರಿದ ಅಳ್ಳು, ಎಳ್ಳು ಹುಂಡಿ, ಅಳ್ಳಿಟ್ಟು ಹುಂಡೆ, ನೆನೆಸಿದ ಕಡಲೆ(ಹುಸುಳಿ), ಕೊಕ್ಕಾಬತ್ತಿ, ಹಂಗನೂಲು, ಕಾಯಿ, ಕರ್ಪೂರ, ಸಸಿಗಳನ್ನು ಸಸಿ, ಹೂಮಾಲೆ ಹಾಗೂ ನಾನಾ ರೀತಿ ಪೂಜಾ ಸಾಮಗ್ರಿಗಳನ್ನು ಸಿದ್ಧತೆ ಮಾಡಿಕೊಂಡು, ಮನೆ ಮತ್ತು ಓಣಿಯ ಸದಸ್ಯರೊಂದಿಗೆ ಪಟ್ಟಣ ಹಾಗೂ ಗ್ರಾಮದಲ್ಲಿರುವ ನಾಗರ ಮೂರ್ತಿ ಇರುವ ಕಟ್ಟೆ ಮತ್ತು ದೇವಸ್ಥಾನಕ್ಕೆ ತೆರಳಿ ಹಾಲು ಎರೆದರು ಸಂಭ್ರಮಿಸಿದರು.
ಎಲ್ಲರ ಪಾಲು ನಿನಗಿರಲಿ ನಾಗದೇವ: ಹಾಲು ಎರೆಯುವಾಗ ಪ್ರತಿಯೊಂದು ಸುತ್ತಿಗೂ ಇದು ಅಣ್ಣನ ಪಾಲು, ತಮ್ಮನ ಪಾಲು, ತಂದೆಯ ಪಾಲು, ಅಮ್ಮನ ಪಾಲು ಅಜ್ಜನ ಪಾಲು, ಅಜ್ಜಿಯ ಪಾಲು, ಚಿಕ್ಕಪ್ಪನ ಪಾಲು, ಚಿಕ್ಕಮ್ಮನ್ನ ಪಾಲು, ತಂಗಿಯ ಪಾಲು, ಅಕ್ಕನ ಪಾಲು, ನನ್ನ ಪಾಲು, ಎಲ್ಲರ ಪಾಲು ನಿನಗಿರಲಿ ನಾಗಪ್ಪ( ನಾಗದೇವ) ಎಂದು ಮಹಿಳೆ, ಮಕ್ಕಳೊಡಗೂಡಿ ವಿಶಿಷ್ಟ ರೀತಿಯಲ್ಲಿ ನಾಗರ ಮೂರ್ತಿಗೆ ಹಾಲು ಎರೆದು, ಬಳಿಕ ಪ್ರದಕ್ಷಿಣೆ ಹಾಕಿ ಭಕ್ತಿಯ ಧನ್ಯತೆ ಅರ್ಪಿಸಿ, ಪ್ರಾರ್ಥಿಸಿದರು. ತವರು ಮನೆಯವರೊಂದಿಗೆ ಜೊತೆಗೂಡಿ ಆಚರಿಸುವ ಏಕೈಕ ಹಬ್ಬ ಈ ನಾಗ ಪಂಚಮಿಯಾಗಿದೆ.
ಭೀಮನ ಅಮಾವಾಸ್ಯೆಯ ಮಾರನೇ ದಿನದಿಂದ ಪ್ರಾರಂಭವಾಗುವ ಈ ಹಬ್ಬವನ್ನು ಸಹೋದರ-ಸಹೋದರಿಯರ ಹಬ್ಬ ಎಂತಲೂ ಕರೆಯುತ್ತಾರೆ. ಈ ಹಬ್ಬದಲ್ಲಿ ಜೋಕಾಲಿ ಆಟ, ಹಗ್ಗ ಜಗ್ಗಾಟ, ಮರ ಕೋತಿಯಾಟ, ಚಿನ್ನಿದಾಂಡು ಆಟ ಸೇರಿದಂತೆ ಅನೇಕ ರೀತಿಯ ಆಟಗಳನ್ನು ಆಡಲಾಗುತ್ತಿದೆ. ಈ ಹಬ್ಬ ಬಂತೆಂದರೆ ಎಲ್ಲಿಲ್ಲದ ಖುಷಿ ನಮಗೆ ಎನ್ನುತ್ತಾರೆ ಪಟ್ಟಣದ ಗಿರಿಜಾ ಹೊಸಮನಿ, ಪವಿತ್ರಾ ಪಾಟೀಲ, ಸೌಜನ್ಯ ಹೊಸಮನಿ, ಸುದೀಪ ಹೊಸಮನಿ, ಲಲಿತಾ ಪ್ರಧಾನಿ, ರತ್ನವ್ವ ಹಳ್ಳಿಯವರ.
ಮಳೆಗಾಗಿ ನಾಗ ದೇವನ ಮೋರೆ: ಸತತ ಮಳೆಯ ಕೊರತೆಯಿಂದ ತತ್ತರಿಸಿದ ತಾಲೂಕಿನ ಅರಹುಮಸಿ, ಸಂದಿಗವಾಡ, ಹಿರೇಮಣ್ಣೂರು, ಬಾಸಲಾಪುರ, ಕೈಡಗೇರಿ, ಮಲ್ಲಾಪುರ, ಚಿಕ್ಕಮಣ್ಣೂರು, ಕೊತಬಾಳ, ಹಿರೇಹಾಳ, ಮುಗಳಿ, ಹೊಸಳ್ಳಿ, ಜಿಗಳೂರ, ಸವಡಿ, ಹೊನ್ನಾಪುರ, ಹುಲ್ಲೂರ, ಮುದೇನಗುಡಿ, ಸೋಮನಕಟ್ಟಿ, ಅಸೂಟಿ, ಮೇಲ್ಮಠ, ಹುನಗುಂಡಿ, ಬೆನಾಳ, ಅಮರಗೋಳ, ಹೊಳೆಮಣ್ಣೂರ, ಗಾಡಗೋಳಿ ಸೇರಿದಂತೆ ಬಹುತೇಕ ಗ್ರಾಮಗಳ ರೈತ ಮಹಿಳೆಯರು ಈ ಬಾರಿ ನಾಗ ಪಂಚಮಿಯ ಪೂಜೆಯನ್ನು ವರುಣ ದೇವನ ಕೃಪೆಗಾಗಿ ಮೀಸಲಿಟ್ಟು ಪ್ರಾರ್ಥಿಸಿದ್ದು ಕಂಡು ಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

