ಗದಗ

ಸಮ್ಮೇಳನ ಆತಿಥ್ಯ ಕೈತಪ್ಪುವ ಆತಂಕ

Published On :

ರಾಣಿಬೆನ್ನೂರು: ಸಾಕಷ್ಟು ಹೋರಾಟದ ಬಳಿಕ ಹಾವೇರಿ ಜಿಲ್ಲೆಗೆ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ಸಿಕ್ಕಿದೆ. ಆದರೆ, ಹಾವೇರಿ-ರಾಣಿಬೆನ್ನೂರು ತಾಲೂಕಿನ ಸಾಹಿತಿಗಳ ಹಾಗೂ ಸಂಘಟನೆಗಳ ಮುಖಂಡರ ಹಗ್ಗ ಜಗ್ಗಾಟದ ನಡುವೆ ಅದು ಕೈ ತಪ್ಪಿ ಹೋಗುವ ಆತಂಕ ಈಗ ಮನೆ ಮಾಡಿದೆ.
ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ 81ನೇ ಸಮ್ಮೇಳನವನ್ನು ಹಾವೇರಿ ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ಪುಂಡಲಿಕ ಹಾಲಂಬಿ ಘೋಷಿಸಿದ್ದರು. ಆದರೆ ಜಿಲ್ಲೆಯ ಸಾಹಿತಿಗಳಲ್ಲಿ ಉಂಟಾಗಿರುವ ವೈಮನಸ್ಸು ಸಮ್ಮೇಳನದ ಯಶಸ್ಸಿಗೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ, ಆತಿಥ್ಯದ ಸ್ಥಳವನ್ನೇ ಬದಲಾಯಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಪ್ರತಿಭಟಿಸುವವರು ಅರ್ಥೈಸಿಕೊಳ್ಳಬೇಕು: 18 ವರ್ಷಗಳ ಹಿಂದೆ ಹಾವೇರಿ ಜಿಲ್ಲೆಯಾಗಿ ರೂಪುಗೊಳ್ಳುವಲ್ಲಿ ರಾಣಿಬೆನ್ನೂರಿನ ಜನರ ಶ್ರಮ ಸಾಕಷ್ಟಿದೆ. ಜಿಲ್ಲಾ ಸಮ್ಮೇಳನಗಳ ಯಶಸ್ಸಿನಲ್ಲೂ ಇಲ್ಲಿನ ವರ್ತಕರು, ಉದ್ಯಮಿಗಳು, ನೌಕರರು, ಸಂಘ ಸಂಸ್ಧೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹೇಗೆ ಸಹಕರಿಸಿದ್ದರು ಎಂಬುದನ್ನು ಜಿಲ್ಲಾ ಕೇಂದ್ರದಲ್ಲಿಯೇ 81ನೇ ಸಾಹಿತ್ಯ ಸಮ್ಮೇಳನ ನಡೆಯಬೇಕೆಂದು ಹೋರಾಟ ನಡೆಸುತ್ತಿರುವವರು ಅರಿತಲ್ಲಿ ಮಾತ್ರ ಸಮ್ಮೇಳನದ ಸ್ಥಳ ವಿವಾದಕ್ಕೆ ತೆರೆ ಎಳೆ ಬೀಳುತ್ತದೆ ಎಂಬುದು ಒಂದು ಗುಂಪಿನ ವಾದ. ಹಾವೇರಿಯಾದರೇನು, ರಾಣಿಬೆನ್ನೂರು ಆದರೇನು? ಹಾವೇರಿ ಜಿಲ್ಲೆಯಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತು ಎಂಬ ಕೀರ್ತಿ ಬರುವಂತೆ ಜಿಲ್ಲೆಯ ಜನರು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗಲು ಅವಕಾಶ ಕಲ್ಪಿಸಬಾರದು.
ಗ್ರಾಮ ಘಟಕಗಳ ಹೇಳಿಕೆ: ಜಿಲ್ಲೆಯಿಂದ ಸಮ್ಮೇಳನ ಬೇರೆ ಕಡೆಗೆ ಎತ್ತಂಗಡಿಯಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಯಾವುದೇ ಕಾರಣಕ್ಕೂ ಸಮ್ಮೇಳನ ಬೇರೆಡೆ ಹೋಗಬಾರದು. ರಾಜ್ಯ ಸಮಿತಿ ತೀರ್ಮಾನದಂತೆ ರಾಣಿಬೆನ್ನೂರಿನಲ್ಲೇ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಜಿಲ್ಲೆಯ ಸಮಸ್ತ ಜನತೆ ಸಹಕರಿಸಬೇಕು. ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ರಾಜ್ಯದಲ್ಲಿಯೇ ಮಾದರಿ ಸಮ್ಮೇಳನವಾಗುವಂತೆ ಶ್ರಮಿಸೋಣ ಎಂದು ಕಸಾಪ ಗ್ರಾಮ ಘಟಕಗಳ ಅಧ್ಯಕ್ಷರಾದ ಎಚ್.ಆರ್. ವೆಂಕಣ್ಣನವರ (ತುಮ್ಮಿನಕಟ್ಟಿ), ಎಂ.ಎಫ್. ಕರೆಣ್ಣನವರ (ಹನುಮಾಪುರ), ಆರ್.ಎಚ್. ಬೆನ್ನೂರು (ಕರೂರು), ಕಾಂತೇಶ ಅಂಬಿಗೇರ (ಗ್ರಾಮ ಘಟಕದ ಅಧ್ಯಕ್ಷ) ಮನವಿ ಮಾಡಿದ್ದಾರೆ.
ಹಲವು ವರ್ಷಗಳ ಹೋರಾಟದ ಫಲವಾಗಿ, 81ನೇ ಸಮ್ಮೇಳನದ ಆತಿಥ್ಯ ವಹಿಸುವ ಸೌಭಾಗ್ಯ ನಮಗೆ ದೊರೆತಿದೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಚರ್ಚಿಸಿ ಪರಿಹಾರ ಕಂಡುಕೊಂಡು ಸಮ್ಮೇಳನ ನಡೆಸೋಣ. ಜನಪ್ರತಿನಿಧಿಗಳು, ಸಾಹಿತಿಗಳು ಸಹಕರಿಸಿ ಭಿನ್ನಾಭಿಪ್ರಾಯ ದೂರ ಮಾಡಬೇಕೆಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ವಾಸಣ್ಣ ಕೂಸಗೂರು ಹೇಳಿದ್ದಾರೆ.
ಒಂದಾಗಿ ತೇರನೆಳೆಯೋಣ: ಜಿಲ್ಲಾ ಕಸಾಪ ಹಾಗೂ ಕೇಂದ್ರ ಸಮಿತಿ ಕೈಗೊಂಡಿರುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಕನ್ನಡ ತಾಯಿ ಭುವನೇಶ್ವರಿಯ ತೇರೆಳೆಯೋಣ. ರಾಣಿಬೆನ್ನೂರಿನಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಎಲ್ಲರೂ ಮುಕ್ತ ಮನಸ್ಸಿನಿಂದ ಸಹಕರಿಸಬೇಕೆಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ೤ ಅ.ಸಿ. ಹಿರೇಮಠ, ಡಾ೤ ಕೆ.ಎಚ್. ಮುಕ್ಕಣ್ಣನವರ ಮುಂತಾದವರು ಅಭಿಪ್ರಾಯಪಟ್ಟಿದ್ದಾರೆ.


ಸಾಬ್ಜನ್ ಇಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.