ಗದಗ

ಟಿಇಟಿ ಕೆಲ ಅಂಶಗಳು ಅವೈಜ್ಞಾನಿಕ

Published On :

ಕನ್ನಡಪ್ರಭ ವಾರ್ತೆ, ಗದಗ, ಜೂ. 3
ಕರ್ನಾಟಕ ಸರ್ಕಾರ ಈಚೆಗೆ ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಜಾರಿ ಮಾಡಿರುವುದು ಸ್ವಾಗತಾರ್ಹ. ಆದರೆ, ಅದರಲ್ಲಿನ ಕೆಲ ಅಂಶಗಳು ಅವೈಜ್ಞಾನಿಕವಾಗಿರುತ್ತವೆ. ಅದರಿಂದ ಸದ್ಯ ಅನುದಾನ ರಹಿತವಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಡಿಇಡಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಕಾಲೇಜುಗಳು ಬಂದಾಗುವ ಸ್ಥಿತಿ ಬಂದೊದಗಿದೆ. ಅದರಿಂದ ಶಿಕ್ಷಕರ ಕೊರತೆ ಹೆಚ್ಚಾಗುತ್ತಿದೆ. ಸರ್ಕಾರಿ ಸೇವೆ ಸಿಗದ ಖಾಸಗಿ ಸಂಸ್ಥೆಗಳಲ್ಲಿ ಅರೆಕಾಲಿಕ ಸೇವೆ ಸಲ್ಲಿಸಿ ತಮ್ಮ ಬದುಕು ನಡೆಸುತ್ತಿರುವ ಶಿಕ್ಷಕರಿಗೆ ಇದರಿಂದ ಕಷ್ಟವಾಗುವುದು. ಈಗಾಗಲೇ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ನೀಡುವ ಕಾಯ್ದೆ ಜಾರಿಯಲ್ಲಿರುವುದರಿಂದ ಅನುದಾನ ರಹಿತ ಶಿಕ್ಷಕರಿಗೆ ಆ ಸೌಲಭ್ಯ ಜತೆಗೆ ಅವರ ಸೇವಾ ಪುಸ್ತಕಗಳ ನಿರ್ವಹಣೆ ಅದಲ್ಲದೆ ಪಿಎಫ್ (ಭವಿಷ್ಯ ನಿಧಿ) ಸೌಲಭ್ಯಕ್ಕೆ ಶಿಕ್ಷಕರು ಅರ್ಹರಾಗಿರುತ್ತಾರೆ.
ಇಂಥ ಸಂದರ್ಭ ಹಿರಿಯ ಶಿಕ್ಷಕರು ಟಿಇಟಿ ಪರೀಕ್ಷೆಯಲ್ಲಿ ಶೇ. 60ರಷ್ಟು ಅಂಕಗಳು ಪಡೆಯದಿದ್ದರೆ ಅನಿವಾರ್ಯವಾಗಿ ಸೇವೆಯಿಂದ ವಜಾಗೊಳಿಸಬೇಕಾಗುವುದು. ವಜಾಗೊಳಿಸುವಿಕೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ತೊಂದರೆ ಜತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ತೊಂದರೆಯಾಗುವುದು. ಕಾರಣ ಕೂಡಲೇ ಸರ್ಕಾರ ಆದೇಶ ಮಾರ್ಪಡಿಸಿ ಹೊಸದಾಗಿ ನೇಮಕಗೊಳ್ಳುವ ಶಿಕ್ಷಕರಿಗೆ ಮಾತ್ರ ಟಿಇಟಿ ಕಡ್ಡಾಯಗೊಳಿಸಬೇಕು.
ಸದ್ಯ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಕಡ್ಡಾಯ ಮಾಡಬಾರದು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ದ್ವಿತೀಯ ಪಿಯು ಪಠ್ಯಕ್ರಮ ಬದಲಾಗಿದ್ದು, ಈಗಾಗಲೇ ಕಾಲೇಜುಗಳು ಪುನರಾರಂಭಗೊಂಡಿದ್ದರೂ ನೂತನ ಪಠ್ಯಕ್ರಮ ಪುಸ್ತಕಗಳು ಬಂದಿಲ್ಲ. 2 ವಾರಗಳವರೆಗೆ ಸೇತುಬಂಧು (ಬ್ರಿಜ್ ಕೋರ್ಸ್) ಮಾಡಬೇಕು. ಇದರಲ್ಲಿ ಹೊಸ ಪಠ್ಯಕ್ರಮ ಅಳವಡಿಕೆಗೊಂಡಿರುತ್ತದೆ. ಹೊಸ ಪಠ್ಯಕ್ರಮ ಪ್ರಕಟಗೊಳ್ಳದಿರುವುದರಿಂದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಸರ್ಕಾರ ಕಾಲೇಜು ಪುನರಾರಂಭಕ್ಕಿಂತ ಮುಂಚೆ ಈ ಕಾರ್ಯ ಮಾಡಬೇಕಿತ್ತು. ಈಗಲಾದರೂ ಒಂದೆರಡು ದಿನಗಳಲ್ಲಿ ದ್ವಿತೀಯ ಪಿಯುಸಿ ಹೊಸ ಪಠ್ಯಕ್ರಮ ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಿಕೊಡಬೇಕೆಂದು ಸರ್ಕಾರಕ್ಕೆ ಬ್ಯಾಳಿ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವಿಶ್ರಾಂತ ಉಪನ್ಯಾಸಕ ಕೆ.ವಿ. ಕುಂದಗೋಳ, ಈರಣ್ಣ ಮುಳ್ಳಾಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.