ಗದಗ

ಕಾಮಗಾರಿ ಅಪೂರ್ಣ: ಕುಡಿವ ನೀರಿಲ್ಲ

Published On :

ಶಿರಹಟ್ಟಿ: 130 ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ ಅಡಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ತಾಲೂಕಿನಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಡಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರೇ ಒಪ್ಪಂದ ಪತ್ರ ಮಾಡಿಕೊಂಡು ತಮಗೆ ಬೇಕಾದ ಗುತ್ತಿಗೆದಾರರ ಹೆಸರಿನಲ್ಲಿ ಕಾಮಗಾರಿ ಮಾಡಿದ್ದು, ಕಾಮಗಾರಿ ಅಪೂರ್ಣಗೊಂಡಿರುವ ಬಗ್ಗೆ ಗ್ರಾಮಸ್ಥರಿಂದ ದೂರು ಕೇಳಿ ಬರುತ್ತಿವೆ. ಜಿಪಂ ಇಲಾಖೆ ಅಧಿಕಾರಿಗಳ ಗಮನಕ್ಕೆ ತರದೇ ಚುನಾಯಿತ ಜಿಪಂ, ತಾಪಂನ ಕೆಲ ಸದಸ್ಯರು ತಮ್ಮ ಅಧಿಕಾರದ ದರ್ಪಿನಿಂದ ಅಂಗನವಾಡಿ ಕೇಂದ್ರದ ಎದುರು ಅಥವಾ ಪಕ್ಕದಲ್ಲಿ ಸಣ್ಣ ಗುಂಡಿ ತೋಡಿ ರು. 50 ಸಾವಿರ ವೆಚ್ಚದಲ್ಲಿ 500 ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿದ್ದಾರೆ. ಕೆಲ ಅಂಗನವಾಡಿ ಕೇಂದ್ರಗಳ ಬಳಿ ಗುಂಡಿ ತೋಡಿ ಬಿಟ್ಟಿದ್ದು, ಹನಿ ನೀರು ಪೂರೈಸಿಲ್ಲ. ಚಿಕ್ಕ ಮಕ್ಕಳು ತಗ್ಗು ಗುಂಡಿಯಲ್ಲಿ ಬಿದ್ದು, ಜೀವಕ್ಕೆ ಅಪಾಯ ತಂದುಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಇಂಥ ಅನಾಹುತ ಕೆಲಸಕ್ಕೆ ಕೈ ಹಾಕಿರುವುದು ಚರ್ಚೆ ವಿಷಯವಾಗಿದೆ.
ಕುಡಿಯುವ ನೀರು ಪೂರೈಕೆಗೆ ಬಳಸುತ್ತಿರುವ ಸರ್ಕಾರದ ಕೋಟ್ಯಂತರ ಅನುದಾನ ಸಂಪೂರ್ಣ ದುರ್ಬಳಕೆ ಆಗುತ್ತಿದೆ. ಛಬ್ಬಿ ಗ್ರಾಮದಲ್ಲಿ 4 ತಿಂಗಳ ಹಿಂದೆ ರು. 8 ಲಕ್ಷ ವೆಚ್ಚದಲ್ಲಿ ಕಿರು ನೀರು ಸರಬರಾಜು ಟ್ಯಾಂಕ್ ನಿರ್ಮಿಸಿದ್ದು, ಹನಿ ನೀರು ಜನರಿಗೆ ಮುಟ್ಟಿಲ್ಲ. ಜಿಪಂ ಅಧಿಕಾರಿ, ಎಂಜಿನಿಯರ್ ಕಾಮಗಾರಿ ಪರಿಶೀಲನೆ ಮಾಡದೇ ಬಿಲ್ ನೀಡಿದ್ದಾರೆ. ಅಂಗನವಾಡಿ ಕೇಂದ್ರದ ಮಕ್ಕಳ ಜೀವಕ್ಕೂ ಕುತ್ತು ತರುವ ರೀತಿ ಕೇಂದ್ರದ ಮುಂದೆ ಟ್ಯಾಂಕ್ ನಿರ್ಮಿಸಿದ್ದಾರೆ.
- ಜಾನು ಲಮಾಣಿ, ಜಿಲ್ಲಾ ಬಿಜೆಪಿ ಎಸ್ಸಿ ಘಟಕ ಅಧ್ಯಕ್ಷ

ಕಳೆದ ಫೆಬ್ರವರಿ ತಿಂಗಳಲ್ಲಿಯೇ ಕಾಮಗಾರಿ ಪ್ರಾರಂಭಿಸಿದ್ದಾರೆ. ಮಾಚೇನಹಳ್ಳಿ, ಗುಲಗಂಜಿಕೊಪ್ಪ, ಅಡರಕಟ್ಟಿ ಕೇಂದ್ರಗಳಲ್ಲಿ ನೀರಿನ ಟ್ಯಾಂಕ್ ಸೋರುತ್ತಿವೆ. ಕುಸಲಾಪುರ, ಕಡಕೋಳ, ಛಬ್ಬಿ ಕೇಂದ್ರಗಳಲ್ಲಿ ಟ್ಯಾಂಕ್‌ಗೆ ಮುಚ್ಚಳ ಜೋಡಣೆ ಮಾಡಿಲ್ಲ. ಸುರಕ್ಷಿತ ಸ್ಥಳಗಳಲ್ಲಿ ಮೋಟರ್ ಅಳವಡಿಸಿಲ್ಲ. ಕೆಲ ಕೇಂದ್ರಗಳಲ್ಲಿ ಕಲುಷಿತ ನೀರು ಹರಿದು ಬರುವಲ್ಲಿ ಗುಂಡಿ ತೆರೆಯಲಾಗಿದೆ. ಕಾಮಗಾರಿ ಕೈಗೆತ್ತಿಕೊಂಡಿರುವ ಬಗ್ಗೆ ಇಲ್ಲಿವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಗುಣಮಟ್ಟದ ಕಾಮಗಾರಿ ಮಾಡುವಂತೆ ಲಿಖಿತವಾಗಿ ತಾಪಂ, ಜಿಪಂ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಕ್ರಮಕ್ಕೆ ಮುಂದಾಗಿಲ್ಲ.
- ಸರಸ್ವತಿ ಹೊನ್ನೇಗೌಡರ, ಸಿಡಿಪಿಒ

ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.