ಗದಗ

ರೈತರಿಗೆ ಪರಿಹಾರ ಹಣ ನೀಡಿ: ಮನವಿ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜೂ. 12
ತಾಲೂಕಿನಲ್ಲಿ ರೈತರು ಮೈಕೋ ಕಂಪನಿಯ ಬಿಟಿ ಹತ್ತಿ ಬೀಜ ಬಿತ್ತನೆ ಮಾಡಿದ್ದರು. ನಿರೀಕ್ಷಿಸಿದ ಫಸಲು ಬಾರದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಹಾನಿ ಪರಿಹಾರದ ಹಣ ಬಿಡುಗಡೆಯಾಗಿ ತಿಂಗಳಾದರೂ ಅಧಿಕಾರಿಗಳು ರೈತರಿಗೆ ನೀಡದಿರುವ ಕ್ರಮ ಖಂಡಿಸಿ ಬಿಜೆಪಿ ಮುಖಂಡ ವಿಶ್ವನಾಥ ಕಪ್ಪತ್ತನವರ, ರಾಮಣ್ಣ ಡಂಬಳ ನೇತೃತ್ವದಲ್ಲಿ ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 2013-14ನೇ ಸಾಲಿನಲ್ಲಿ ಹಿಂಗಾರು ಮತ್ತು ಮುಂಗಾರು ಬೆಳೆ ಹಾನಿ ಸಂಭವಿಸಿದ ರೈತರಿಗೆ ರು. 4.66 ಕೋಟಿ, ಕನಕ ಬಿಟಿ ಹತ್ತಿ ಬೆಳೆ ಹಾನಿಗೊಳಗಾದ ರೈತರಿಗೆ ರು. 1.73 ಕೋಟಿ ಹಣ ಬಿಡುಗಡೆಯಾಗಿದ್ದು, ಸದ್ಯ ಮುಂಗಾರು ಬಿತ್ತನೆ ಕಾರ್ಯ ಆರಂಭವಾಗಿದ್ದು, ರೈತರಿಗೆ ಬೀಜ-ಗೊಬ್ಬರ ಖರೀದಿಗೆ ಅನುಕೂಲವಾಗುತ್ತಿದ್ದು, ತುರ್ತಾಗಿ ಯಾವುದೇ ಕಾರಣ ಹೇಳದೆ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು. ಕಳೆದ ಸಾಲಿನಲ್ಲಿಯೇ ಬಿಟಿ ಹತ್ತಿ ಬಿತ್ತನೆ ಮಾಡಿದ ರೈತರು ಪ್ರತಿ ಎಕರೆಗೆ ರಸಗೊಬ್ಬರ, ಕ್ರಿಮಿನಾಶಕ, ಕಳೆ ಮತ್ತಿತರ ಕೃಷಿ ಕಾರ್ಯಗಳಿಗೆ ರು. 5 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದು, ವ್ಯಾಪಾರಸ್ಥರು ಪ್ರತಿ ಎಕರೆಗೆ 20 ರಿಂದ 25 ಕ್ವಿಂ.ಇಳುವರಿ ಬಂದೇ ಬರುತ್ತದೆ ಎಂದು ಹೇಳಿದ್ದಕ್ಕೆ ಅವರ ಮಾತು ನಂಬಿ ರೈತರು ಬಿಟಿ ಹತ್ತಿ ಬಿತ್ತಿದ್ದರು. ಬಂದ ಪರಿಹಾರದ ಹಣವನ್ನು ಅಧಿಕಾರಿಗಳು ವಿತರಣೆಗೆ ವಿಳಂಬ ನೀತಿ ಅನುಸರಿಸುತ್ತಿರುವ ಕ್ರಮ ಸರಿಯಲ್ಲ ಎಂದು ದೂರಿದರು.
16ರಂದು ಧರಣಿ: 2-3 ದಿನದಲ್ಲಿ ಬಂದ ಪರಿಹಾರದ ಹಣವನ್ನು ರೈತರಿಗೆ ನೀಡದಿದ್ದಲ್ಲಿ ಜೂ. 16ರಂದು ತಹಸೀಲ್ದಾರ್ ಕಚೇರಿ ಎದುರು ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶಿರಸ್ತೇದಾರ ಎಸ್.ಸಿ. ನದಾಫ್, ಎಲ್.ಜೆ. ಬಾಗಲಕೋಟೆ ಮನವಿ ಸ್ವೀಕರಿಸಿ ಮಾತನಾಡಿ, ಬೆಳೆ ಹಾನಿಯ ಪರಿಹಾರದ ಹಣ ಬಿಡುಗಡೆಯಾಗಿದ್ದು, ಕೃಷಿ ಇಲಾಖೆಯವರು ಗುರುವಾರ ಫಲಾನುಭವಿಗಳ ಯಾದಿ ನೀಡಿದ್ದಾರೆ. ರೈತರಿಗೆ ತುರ್ತಾಗಿ ಪರಿಹಾರದ ಹಣ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮುಖಂಡ ತಿಪ್ಪಣ್ಣ ಕೊಂಚಿಗೇರಿ, ಪಪಂ ಸದಸ್ಯ ಜೆ.ಆರ್. ಕುಲಕರ್ಣಿ, ಗೂಳಪ್ಪ ಕರಿಗಾರ, ಬಸಲಿಂಗಪ್ಪ ಕಪ್ಪತ್ತನವರ, ಬೀರಪ್ಪ ಸ್ವಾಮಿ, ಬಸಣ್ಣ ಹರ್ತಿ, ರಾಮಣ್ಣ ಕಂಬಳಿ, ಮುದಕಪ್ಪ ಬಾನಿ, ಮೋಹನ್ ಗುತ್ತೆಮ್ಮನವರ, ಗುರುರಾಜ ಪಾಟೀಲ, ಕರಿಗೌಡ ಪಾಟೀಲ, ರಾಜು ಹಳ್ಳಿಕೇರಿ, ಉಮೇಶ ತೇಲಿ, ದೇವಪ್ಪ ತಳವಾರ, ಮಾಬುಸಾಬ್ ಬುವಾಜಿ, ಸಿದ್ದರಾಮಯ್ಯ ಹಾವೇರಿಮಠ, ಲಾಡಸಾಬ್ ಮಕಾನದಾರ, ಚಂದ್ರಕಾಂತ ಅಕ್ಕಿ, ರಮೇಶ ಕಪ್ಪತ್ತನವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.