ಗದಗ

ಏಣಗಿ ಅಜ್ಜನಿಗಿಂದು ಸಮ್ಮಾನ-ಸಂಭ್ರಮ

Published On :

ಧಾರವಾಡ: ಶತಮಾನ ದಾಟಿ ಬದುಕಿದವರುಂಟು. ಆದರೆ, ಕಲಾವಿದರಾಗಿ ಶತಮಾನ ದಾಟಿದವರು ತುಂಬಾನೆ ವಿರಳ. ಆ ಶತಮಾನಕ್ಕೆ ಕಲೆಯ ನಂಟನ್ನು ಬಿಗಿಯಾಗಿ ಹೆಣೆದು ಸಾರ್ಥಕತೆ ತಂದುಕೊಟ್ಟವರು ಏಣಗಿ ಬಾಳಪ್ಪನವರು. ವಾಮನ ಮೂರ್ತಿಯಾದರೂ ಕಲೆಯಿಂದ ತ್ರಿವಿಕ್ರಮರು. ಸ್ತ್ರೀ ಹಾಗೂ ಪುರುಷ ಪಾತ್ರಗಳೆರಡರಲ್ಲೂ ರಂಗದ ಮೇಲೆ ಮಿಂಚಿದವರು. ಕಾಯಕವೇ ಕೈಲಾಸವೆಂಬ ಭಾವನೆಯಿಂದ ನಾಟಕ ಕಂಪನಿ ನಡೆಸಿದವರು.
ನಾಟ್ಯ ಭೂಷಣ, ನಾಟ್ಯಗಂಧರ್ವ, ಬಸವಶ್ರೀ, ನಾಡೋಜ, ಗುಬ್ಬಿ ವೀರಣ್ಣ, ಕರ್ನಾಟಕ ವಿದ್ಯಾಲಯದ ಗೌರವ ಡಾಕ್ಟರೇಟ್, ಆಳ್ವಾಸ್ ನುಡಿ ಪ್ರಶಸ್ತಿಗಳಂತಹ ಶ್ರೇಷ್ಠ ಪ್ರಶಸ್ತಿ ಪಡೆದು ಯಶಸ್ಸಿನ ಉತ್ತುಂಗಕ್ಕೇರಿದವರು. ನಿಯಮಿತ ವ್ಯಾಯಾಮ, ಮೈಮುರಿಯುವಷ್ಟು ದುಡಿತವೇ ಇವರ ದಿನಚರಿ. ಇದರಿಂದಲೇ ಇಂದಿವರು ಶತಾಯುಷಿ. ಬಾಳಪ್ಪಜ್ಜ ಸಮಾಜಮುಖಿ ವ್ಯಕ್ತಿತ್ವದವರು. ಜೋಳಿಗೆ ಹಾಕಿಕೊಂಡು ಬಸವನ ಬಾಗೇವಾಡಿಯ ಒಂದು ದೇವಸ್ಥಾನಕ್ಕೆ ಹಣ ಸಂಗ್ರಹಿಸಿದವರು. ಕನ್ನಡ ನಾಡು ನುಡಿಗಾಗಿ ಹೋರಾಡಿ ಜೈಲು ವಾಸ ಅನುಭವಿಸಿದವರು. ಕಂಪನಿ ಬೋರ್ಡಿನಲ್ಲಿ ಕರ್ನಾಟಕವೆಂದು ಬರೆಯಿಸಿ, ಮರಾಠಿಗರ ಕೆಂಗಣ್ಣಿಗೆ ಗುರಿಯಾದ ಹಲವು ಪ್ರಸಂಗ ಅನುಭವಿಸಿದರು. 2006ರಲ್ಲಿ ದಿ. ನಟರಾಜ ಏಣಗಿ ಅವರ ನಿರ್ದೇಶನದ ಕಿನ್ನರಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೆ, ಬಾಳಪ್ಪಜ್ಜನೂ ಬಂದಿರುವುದು ಗೊತ್ತಾಯಿತು. ಕಂಪನಿ ಮಾಲೀಕರೆಂದರೆ ಹಾಗೆ ಹೀಗೆ ಎನ್ನುತ್ತಿರುವುದನ್ನು ಕೇಳಿದ ನನಗೆ ಒಂದು ಕ್ಷಣ ದಂಗಾದೆ. ಕಲ್ಪನೆ ಚಿತ್ರಗಳೆಲ್ಲ ಕರಗಿಹೋದವು. ಕುರ್ಚಿ ಮೇಲೆ ಶಿಲಾಮೂರ್ತಿಯಂತೆ ಕುಳಿತಿದ್ದ, ಮುಖದಲ್ಲಿ ದೈವಿ ತೇಜಸ್ಸು, ನನಗೆ ತಿಳಿಯದಂತೆ ಅವರ ಕಾಲಿಗೆ ಮುಟ್ಟಿ ನಮಸ್ಕರಿಸುವಂತೆ ಸೆಳೆದಿತ್ತು. ಬಾಳಪ್ಪನವರು ರಾಮಾಯಣದಲ್ಲಿ ರಾಮನ ಪಾತ್ರ, ಮಹಾಭಾರತದಲ್ಲಿ ಕೃಷ್ಣನ ಹಾಗೂ ಹರಿಶ್ಚಂದ್ರನ ಪಾತ್ರವನ್ನು ಲೀಲಾಜಾಲ ನಿರ್ವಹಿಸಿದಂತೆ ಸ್ತ್ರೀ ಪಾತ್ರಗಳಾದ ಸೀತೆ, ದ್ರೌಪದಿ, ತಾರಾಮತಿಯಾಗಿಯೂ ವಿಜೃಂಭಿಸುತ್ತಿದ್ದರು. ಸಾವಿರಾರು ರಂಗ ಪ್ರಯೋಗ ಮಾಡಿದ್ದ ಬಾಳಪ್ಪನವರಿಗೆ ಡಾ. ರಾಜಕುಮಾರ ಆದಿಯಾಗಿ ಅನೇಕರು ಸಿನಿಮಾಗಳಲ್ಲಿ ನಟಿಸಲು ಮನವಿ ಮಾಡಿದ್ದರು. ಒತ್ತಡದಿಂದ ಜನುಮದ ಜೋಡಿ ಸೇರಿದಂತೆ ಐದು ಚಿತ್ರಗಳಲ್ಲಿ ಪಾತ್ರವಹಿಸಿದ್ದರೂ ಅವರಿಗೆ ಸಂತೃಪ್ತಿ ತಂದಿರಲಿಲ್ಲ. ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ, ಕರ್ನಾಟಕ ವಿವಿ ಗೌರವ ಡಾಕ್ಟರೇಟ್ ಬಾಳಪ್ಪನವರಿಗೆ ದೊರೆತವು ಎನ್ನುವುದಕ್ಕಿಂತ ತಮ್ಮ ಮೌಲ್ಯ ಹೆಚ್ಚಿಸಿಕೊಂಡವು. ಇದು ಬಾಳಪ್ಪನವರ ಜನ್ಮ ಶತಮಾನೋತ್ಸವ ವರ್ಷ. ಬಾಳಪ್ಪನವರ ಆಶಯದಂತೆ ಪರಿಪೂರ್ಣ ಹಾಗೂ ಪರಿಶುದ್ಧ ರಂಗಭೂಮಿ ಮರುಸ್ಥಾಪನೆಯಾಗಬೇಕು. ರಂಗಕರ್ಮಿಗಳೂ ಸಮಾಜದ ದಿಕ್ಕು ತಪ್ಪಿಸುವ ದಾರಿ ಹಿಡಿಯದೇ ತಮ್ಮ ಚಟುವಟಿಕೆಗಳ ಮೂಲಕ ಉತ್ಕೃಷ್ಟ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು. ಆಗ ಏಣಗಿ ಬಾಳಪ್ಪನವರ ಜನ್ಮಶತಮಾನೋತ್ಸವಕ್ಕೆ ಅರ್ಥ ಬರುತ್ತದೆ.
- ಲೇಖನ - ಪ್ರೇಮಾ ಬದಾಮಿ (ರಂಗ ಕಲಾವಿದರು)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.