ಯುವ ಮನಗಳ ಕನಸು ರೇಲ್ವೆ ವಿವಿ
ಕನ್ನಡಪ್ರಭ ವಾರ್ತೆ, ಶಿರಸಿ, ಜೂ. 17
ಹುಬ್ಬಳ್ಳಿಯಲ್ಲಿ ರೇಲ್ವೆ ವಿಶ್ವವಿದ್ಯಾಲಯ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕ ಕಾರಿಡಾರ್ ಯೋಜನೆ ಅನುಷ್ಠಾನ- ಇದು ಪದವೀಧರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ವಸಂತ ಹೊರಟ್ಟಿ ಯೋಚನೆ.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಮತ್ತು ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ರೇಲ್ವೆ ವಿವಿ ಸ್ಥಾಪನೆಯಾಗಬೇಕು ಎನ್ನುವ ಯೋಚನೆ ಪದವೀಧರರ ಆಶಾಕಿರಣವಾಗಲಿದೆ. ಹುಬ್ಬಳ್ಳಿಯಲ್ಲಿ ಸ್ಥಾಪನೆಯಾದರೆ ಅದರ ಫಲ ಗದಗ, ಹಾವೇರಿ ಸೇರಿದಂತೆ ಇಡೀ ಉತ್ತರ ಕರ್ನಾಟಕಕ್ಕೆ ಸಿಗುತ್ತದೆ. ಅಭಿವೃದ್ಧಿಗೆ ಸೀಮಿತವಾಗದೆ ಉದ್ಯೋಗ ಸೃಷ್ಟಿಯಲ್ಲೂ ಇದು ಪ್ರಮುಖ ಪಾತ್ರ ವಹಿಸಲಿದೆ. ಪದವೀಧರರ ಹಾಗೂ ಕೌಶಲ್ಯ ತರಬೇತಿ ಪಡೆಯವರ ಹೊಸ ಆಶಾಕಿರಣವಾಗಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಗೊಂಡಲ್ಲಿ ಅದು ರಾಜ್ಯಕ್ಕೆ ಮುಕುಟಮಣಿ ಆಗಲಿದೆ ಎನ್ನುವುದು ಪರಿಣಿತರ ಅಂಬೋಣ. ಬಾಗಲಕೋಟೆಯಲ್ಲಿ ತೋಟಗಾರಿಕಾ ವಿವಿ ಸ್ಥಾಪನೆಯಾಗಿದೆ. ಶಿರಸಿಯಲ್ಲಿ ಅದರ ಕಾಲೇಜು ಪ್ರಾರಂಭಗೊಂಡಿದೆ. ತೋಟಗಾರಿಕೆಯಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಇದರ ಲಾಭ ಪಡೆಯುವ ಜತೆಗೆ ರೈತರ ಸಮಸ್ಯೆಗಳಿಗೂ ಪರಿಹಾರ ಸಿಗುತ್ತಿದೆ. ಇದೇ ಮಾದರಿಯಲ್ಲಿ ರೇಲ್ವೆ ವಿವಿ ಆಗಬೇಕು, ಕಾಲೇಜುಗಳು ತೆರೆದುಕೊಳ್ಳಬೇಕು. ಆಗ ಉದ್ಯೋಗಿಗಳ ಸಂಖ್ಯೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ ರೇಲ್ವೆ ಸೇವೆಯ ಗುಣಮಟ್ಟ ಸುಧಾರಿಸಬಹುದು.
ರೇಲ್ವೆ ವಿವಿ ಪರಿಕಲ್ಪನೆಯೇ ಅದ್ಭುತ. ನಿರುದ್ಯೋಗ ಸಮಸ್ಯೆಗೆ ಗಣನೀಯ ಪರಿಹಾರ ಲಭಿಸುತ್ತದೆ. ವಿವಿಗೆ ಸಂಬಂಧಪಟ್ಟ ಎಲ್ಲ ಜಿಲ್ಲೆಗಳಲ್ಲೂ ಹೇರಳ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿದೆ. ರೇಲ್ವೆ ಅಪಘಾತಗಳ ಸಂಖ್ಯೆ ಕಮ್ಮಿಯಾಗಿ, ಸುರಕ್ಷತೆಗೆ ಆದ್ಯತೆ ದೊರೆಯಲಿದೆ. ಸ್ವಚ್ಛ, ಅಚ್ಚುಕಟ್ಟಾದ ಸೇವೆಗೂ ಇದು ದಾರಿದೀಪವಾಗಲಿದೆ. ರೈಲ್ವೆ ವಿವಿ ಪರಿಕಲ್ಪನೆ, ಪದವೀಧರರ ಮತ್ತು ಭವಿಷ್ಯತ್ತಿನ ಪದವೀಧರರ ಕಣ್ಮಣಿಯಾಗುವುದರಲ್ಲಿ ಸಂಶಯವಿಲ್ಲ. ಈಗ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ವಸಂತ ಹೊರಟ್ಟಿ ಮಾತ್ರ ಒಂದಿಷ್ಟು ಭರವಸೆ ಮೂಡಿಸಬಲ್ಲ ಮಾತನ್ನಾಡಿದ್ದಾರೆ. ತಮ್ಮ ಕನಸನ್ನು ಹೊರಗೆಡವಿದ್ದಾರೆ. ಭವಿಷ್ಯತ್ತಿನ ಪೀಳಿಗೆಗೂ ಆಸರೆ ನೀಡುವಂತಹ ಯೋಜನೆಗಳನ್ನು ಹರಿಬಿಟ್ಟಿದ್ದಾರೆ.
ಶಿಕ್ಷಣ ಕಾರಿಡಾರ್: ಉತ್ತರ ಕನ್ನಡ ಜಿಲ್ಲೆಯನ್ನು ಶಿಕ್ಷಣ ಕಾರಿಡಾರ್ ಯೋಜನೆಯಲ್ಲಿ ಅಳವಡಿಸುವ ಚಿಂತನೆ ಹೊರಬಿದ್ದದ್ದು ಯುವ ಧುರೀಣ ಶಶಿಭೂಷಣ ಹೆಗಡೆಯವರ ಮೂಸೆಯಿಂದ. ಅದನ್ನು ಜಾರಿಗೆ ತರಲು ಕಟಿಬದ್ಧ ಎನ್ನುವ ಅಭಿಪ್ರಾಯವನ್ನು ವಸಂತ್ ವ್ಯಕ್ತಪಡಿಸಿದ್ದಾರೆ. ಯುವಕರಲ್ಲಿ ಹೊಸ ಹೊಸ ಚಿಂತನೆಗಳು ಮೂಡುತ್ತವೆ ಎನ್ನುವುದಕ್ಕೆ ಈ ಎರಡು ಸಂಗತಿಗಳು ನಿದರ್ಶನ. ಜಿಲ್ಲೆಯಲ್ಲಿ ಶಿಕ್ಷಣ ಕಾರಿಡಾರ್ ಅನುಷ್ಠಾನಗೊಂಡರೆ ಜಿಲ್ಲೆಯ 11 ತಾಲೂಕುಗಳೂ ಸಮಸ್ಯೆಯಿಂದ ಹೊರಬಂದು ಸಮೃದ್ಧಗೊಳ್ಳಲಿದೆ.
ಬೃಹತ್ ಯೋಜನೆಗಳಿಂದ ಹೈರಾಣಾಗಿರುವ ಜಿಲ್ಲೆಯ ಜನ ಇದನ್ನು ಅಪ್ಪಿಕೊಳ್ಳುವುದರಲ್ಲಿ ಸಂಶಯವಿಲ್ಲ. ಜೋಯಿಡಾ ಮತ್ತು ಯಲ್ಲಾಪುರ ಪಶ್ಚಿಮ ಭಾಗದಲ್ಲಿ ಹಲವಾರು ರೋಗ-ರುಜಿನಗಳು ಕಾಣಿಸಿಕೊಂಡು ಜನಜೀವನವನ್ನೇ ಕಿತ್ತು ತಿನ್ನುತ್ತಿವೆ. ಶಿಕ್ಷಣ ಕಾರಿಡಾರ್ ಯೋಜನೆಯಲ್ಲಿ ಇವಕ್ಕೂ ಸುಲಭದಲ್ಲಿ ಪರಿಹಾರ ಸಾಧ್ಯ. ವೈದ್ಯಕೀಯ ಮತ್ತಿತರ ಶೈಕ್ಷಣಿಕ ಸೌಲಭ್ಯ ಒದಗಲಿದ್ದು, ವಿದ್ಯಾರ್ಥಿಗಳೇ ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕಬಲ್ಲರು. ಅದೇ ತೆರನಾಗಿ ಜಿಲ್ಲೆಯಲ್ಲಿರುವ ನಿರುದ್ಯೋಗಿ ಪದವೀಧರರಿಗೂ ಸುಲಭದಲ್ಲಿ ಉದ್ಯೋಗ ಕೈಗೆಟುಕಲಿದೆ.
ಜಿಲ್ಲೆಯ ಧುರೀಣರು, ಮಂತ್ರಿ ಮಹೋದಯರಲ್ಲಿ ಈ ವಿಚಾರ ಪ್ರಸ್ತಾಪಿಸಲಾಗಿದೆ. ಈ ದನಿಗಟ್ಟಿಯಾಗಬೇಕಾದಲ್ಲಿ ಅಭಿವೃದ್ಧಿಪರ, ಉದ್ಯೋಗ ಕಲ್ಪಿಸಲು ಬದ್ಧತೆ ತೋರುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ಪದವೀಧರ ಮತದಾರರ ಮೇಲಿದೆ.
ಶೈಕ್ಷಣಿಕ ರಂಗದಲ್ಲಿ ಆಗಿರುವ ಅಧ್ವಾನದಿಂದ ಕೆಲಸ ಕಳೆದುಕೊಂಡಿರುವ ಪದವೀಧರರು, ಕಂಪ್ಯೂಟರ್ನಂತಹ ಶಿಕ್ಷಣ ನೀಡಬಲ್ಲ ತಜ್ಞರು, ಕೆಲಸ ಅರಸುತ್ತ ಜಿಲ್ಲೆಯಿಂದ ಹೊರಬಿದ್ದಾಗಿದೆ. ಇಂಥ ಯುವಕ, ಯುವತಿಯರನ್ನು ಮತ್ತೆ ಜಿಲ್ಲೆಗೆ ಕರೆತಂದು ಉದ್ಯೋಗ ನೀಡಬೇಕಾಗಿದೆ. ಈ ಎಲ್ಲ ಕಾರಣಕ್ಕಾಗಿ ಮತ ಚಲಾವಣೆಯಲ್ಲಿ ಯುವಕರ ಆಶೋತ್ತರಗಳನ್ನು ಈಡೇರಿಸುವ ದಾಷ್ಟ್ಯ ಹೊಂದಿರುವ, ಹೊಸ ಚಿಂತನೆಗಳೊಂದಿಗೆ ಯುವಕರನ್ನು ಕೊಂಡೊಯ್ಯುವ ಅಭ್ಯರ್ಥಿಯ ಆಯ್ಕೆಯಾಗಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

