ಕುಸ್ತಿ: ಗೋಪಾಲಗೆ ಬೆಳ್ಳಿ ಕಡಗ
ಗದಗ: ನಗರದ ಗಂಗಾಪುರ ಪೇಟೆಯ ದುರ್ಗಾದೇವಿ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ಮತ್ತು ಬುಧವಾರ ನಡೆದ ಬಯಲು ಕುಸ್ತಿ ಪಂದ್ಯದಲ್ಲಿ ಬಿಜಾಪುರ ಜಿಲ್ಲೆಯ ದ್ಯಾಬೇರಿಯ ಕುಸ್ತಿಪಟು ಗೋಪಾಲ ಸಿದ್ದುಬಾ ಢಗೆ ಚಾಂಪಿಯನ್ ಆಗಿ ಹೊರ ಹೊಮ್ಮಿ ಬೆಳ್ಳಿ ಕಡಗ ಬಹುಮಾನವಾಗಿ ಪಡೆದುಕೊಂಡರು. ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಂದ ಸುಮಾರು 50ಕ್ಕೂ ಹೆಚ್ಚಿನ ಕುಸ್ತಿ ಪಟುಗಳು ಬಯಲು ಕುಸ್ತಿಯಲ್ಲಿ ಪಾಲ್ಗೊಂಡು ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿದರು. ಅಂತಿಮ ಸುತ್ತಿನಲ್ಲಿ ಧಾರವಾಡ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಯ ಲಕ್ಕುಂಡಿಯ ಕುಸ್ತಿಪಟುಗಳನ್ನು ಸೋಲಿಸಿದ ಗೋಪಾಲ ತುರುಸಿನ ಸ್ಪರ್ಧೆ ನಡೆಸಿ ಚಾಂಪಿಯನ್ಶಿಪ್ದೊಂದಿಗೆ ಬೆಳ್ಳಿ ಕಡಗ ಮತ್ತು ನಗದು ಬಹುಮಾನ ಪಡೆದುಕೊಂಡರು. ಹಿರಿಯ ಪೈಲವಾನ್ ಮಕ್ತುಂಸಾಬ ಕದಡಿ ಹಾಗೂ ಸುಭಾಶ ಕಟಗೇರಿ ಮತ್ತು ಬಸವರಾಜ ಬೆಳದಡಿ ಇತರ ಪೈಲವಾನರ ನೇತೃತ್ವದಲ್ಲಿ ಕುಸ್ತಿ ಪಂದ್ಯಗಳು ನಡೆದವು. ಜಾತ್ರಾ ಸಮಿತಿ ಅಧ್ಯಕ್ಷ ವೀರಜಿಬಾಯಿ ಪಟೇಲ, ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಜಾತ್ರಾ ಸಮಿತಿಯ ಪದಾಧಿಕಾರಿಗಳು, ಹಿರಿಯರು ಪಾಲ್ಗೊಂಡಿದ್ದರು. ಬುಧವಾರ ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಜಾತ್ರಾ ಸಮಿತಿ ಪದಾಧಿಕಾರಿ ಶೇಖಣ್ಣ ಕವಳಿಕಾಯಿ, ಬಸವರಾಜ ಬೆಳದಡಿ, ಹನಮಂತಪ್ಪ ಕಕ್ಕೇರಿ, ವೆಂಕಪ್ಪ ರಡ್ಡಿ, ಬಸಪ್ಪ ಶಿರೂರ, ಮೋಹನ ಇಮ್ರಾಪುರ ಹಾಗೂ ಮಹಾಂತೇಶ ಬೆಳದಡಿ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.
ಅರ್ಹ ವಿಕಲಚೇತನರಿಂದ
ಅರ್ಜಿ ಆಹ್ವಾನ
ಗದಗ: 2014-15ನೇ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯ ನಿರುದ್ಯೋಗಿ ಅಂಗವಿಕಲರ ಯುವಕ, ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಆಧಾರ ಯೋಜನೆಯಡಿ ಆಯವ್ಯಯ ಬಿಡುಗಡೆಯಾಗಿದ್ದು ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಮೊದಲು ಆಧಾರ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅರ್ಜಿ ಸಲ್ಲಿಸಲು ಬಯಸುವ ವಿಕಲಚೇತನರು 18ರಿಂದ 45 ವಯೋವುತಿಯವರಿದ್ದು ನಿರುದ್ಯೋಗಿಗಳಾಗಿರಬೇಕು. ಅರ್ಹ ವಿಕಲಚೇತನರು ನಿಗದಿತ ಅರ್ಜಿಯನ್ನು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜುಲೈ 19 ರೊಳಗಾಗಿ ಕಚೇರಿ ಅವಧಿಯಲ್ಲಿ ಜಿಲ್ಲಾ ಅಂಗವಿಕಲರ ಕಾರ್ಯಾಲಯ, ಜಿಲ್ಲಾ ಆಡಳಿತ ಭವನ ಕೊಠಡಿ ಸಂ. 06 ಗದಗ ಇವರಿಗೆ ಸಲ್ಲಿಸಲು ಕೋರಲಾಗಿದೆ. ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಜಿಲ್ಲಾ ಆಡಳಿತ ಭವನ ಸಂ. 06 ಗದಗ ಇವರನ್ನು ಸಂಪರ್ಕಿಸಬಹುದಾಗಿದೆ.
ಪ್ರೋತ್ಸಾಹ ಧನ ಮಂಜೂರಿಗೆ ಅರ್ಜಿ ಆಹ್ವಾನ
ಗದಗ: ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಜೈನ್, ಸಿಖ, ಬೌದ್ಧ, ಕ್ರಿಶ್ಚಿಯನ್, ಪಾರ್ಷಿ ಮತೀಯ ಅಲ್ಪಸಂಖ್ಯಾತರ ಜನಾಂಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2014-15ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಕನಿಷ್ಠ ಶೇ. 50 ರಷ್ಟು ಅಂಕಗಳನ್ನು ಪಡೆದು ಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣರಾಗಿ ಪ್ರಥಮ ಪಿ.ಯು.ಸಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಿ ಪ್ರಥಮ ಪದವಿ ವರ್ಷಗಳೀಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಪದವಿ ತರಗತಿಯಲ್ಲಿ ಓದಿ ಉತ್ತೀರ್ಣರಾಗಿ ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ (ವೃತ್ತಿಪರ ಕೋರ್ಸುಗಳನ್ನು ಹೊರತು ಪಡಿಸಿ) ವಿದ್ಯಾಭ್ಯಾಸವನ್ನು ಮುಂದುವರೆಸಲು ಉತ್ತೇಜನ ನೀಡುವ ಸಲುವಾಗಿ ಪ್ರೋತ್ಸಾಹಧನ ಮಂಜೂರು ಮಾಡಲಾಗುವುದು. ಪ್ರೋತ್ಸಾಹಧನ ಪಡೆಯಲು ಬಯಸುವ ಅರ್ಹ ವಿದ್ಯಾರ್ಥಿಗಳು, ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗದಗ ಇವರಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆಯಾ ಶಾಲಾ ಕಾಲೇಜುಗಳ ಮುಖ್ಯಸ್ಥರ ಮೂಲಕ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ರಿಷಬ್ ಪ್ಲಾಜಾ, 2ನೇ ಮಹಡಿ, ಕೆ.ಇ.ಬಿ. ರೋಡ, ಮುಳಗುಂದ ನಾಕಾ ಗದಗ ಇವರಿಗೆ ಜುಲೈ 20 ರೊಳಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

