ಅಂಧನಿಗೆ ಆಧಾರವಾಗಿದ್ದಹೆಂಡತಿಗೆ ವಿಧಿಕಾಟ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ ಮಾ. 1
ಆತ ಹುಟ್ಟು ಕುರುಡ ಎಂಬುದು ಗೊತ್ತಿದ್ದರೂ ಆತನ ಕೈಹಿಡಿದು ಸುಂದರ ಸಂಸಾರ ಸಾಗಿಸುತ್ತೇನೆ ಎನ್ನುವ ನಂಬುಗೆಯಿಂದ ಜೀವಕ್ಕೆ ಜೀವವಾಗಿ ಆತನ್ನು ನೋಡಿಕೊಳ್ಳುತ್ತಿದ್ದ ಆಕೆಯ ಸಂಸಾರದಲ್ಲಿ ದೇವರು ಆಟವಾಡಿದ ಪರಿ ನಿಜಕ್ಕೂ ಶೋಚನೀಯವಾಗಿದೆ. ಆಕೆಗೆ ದೇವರು ನೀಡಿದ ಶಿಕ್ಷೆ ಎಂತಹ ಕಟುಕನ ಎದೆಯಲ್ಲೂ ಕರುಣೆ ಉಕ್ಕುವಂತೆ ಮಾಡುತ್ತದೆ, ನೋವು ಮಡುಗಟ್ಟುವಂತೆ ಮಾಡುತ್ತಿದೆ.
ನೋಡಿ ಆಕೆಯ ಸಂಸಾರದ ಕಥೆ: ಮೂಲತಃ ಶಿರಹಟ್ಟಿಯವನಾದ ಹುಟ್ಟು ಕುರುಡನಾದ ರಮೇಶ ಅಡಿವೆಪ್ಪ ಬಕ್ಷದ(35) ಬಾಳಿನಲ್ಲಿ ಅದೃಷ್ಟ ದೇವತೆಯಾಗಿ ಅವನ ಕೈ ಹಿಡಿದಾಕೆ ಪಟ್ಟಣದ ಶಶಿಕಲಾ. ಅಂಧನಾದ ರಮೇಶನ ಬಾಳಿನಲ್ಲಿ ಶಶಿಕಲಾ ಭರವಸೆಯ ಬೆಳಕಾಗಿ ಮೂಡುತ್ತಾಳೆ. ಹುಟ್ಟು ಕುರುಡನಾದ ರಮೇಶನ ಎರಡು ಕಣ್ಣು ಕಾಣದಿದ್ದರೂ ಪಟ್ಟಣದ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತ ತನ್ನ ಸಂಸಾರ ನೌಕೆ ಸಾಗಿಸುತ್ತಿದ್ದಾನೆ.
ಸ್ಟೋವ್ ಸಿಡಿದು ಗಾಯ: ಇಂತಹ ಪರಿಸ್ಥಿತಿಯಲ್ಲಿ ಕಾಲಕಳೆಯುತ್ತಿರುವಾಗ ಕಳೆದ 2013ರ ಅಕ್ಟೋಬರ್ 9ರಂದು ಸ್ಟೋವ್ ಸಿಡಿದು ಶಶಿಕಲಾಳ ಎರಡು ಕಾಲುಗಳು ಹಾಗೂ ತೊಡೆಯ ಭಾಗವು ತೀವ್ರವಾಗಿ ಸುಟ್ಟಿವೆ. ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಮೇಲೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ನಲ್ಲಿ 2-3 ತಿಂಗಳ ಕಾಲ ಚಿಕಿತ್ಸೆ ಕೊಡಿಸಿದ್ದಾನೆ. ಆದರೆ, ಶಶಿಕಲಾಳ ಎರಡು ಕಾಲುಗಳು ಮಾತ್ರ ಮೊದಲಿನಂತೆ ಆಗಲೇ ಇಲ್ಲ. ಏಕೆಂದರೆ ಸುಟ್ಟು ಗಾಯವಾದಾಗ ಕಾಲಿನ ಚರ್ಮ ಹಾಗೂ ಮೊಣಕಾಲಿನ ಮೇಲಿನ ಚರ್ಮವೆಲ್ಲಾ ಒಂದೆಡೆ ಸೇರಿಕೊಂಡು ಗಂಟುಗಳಾಗಿವೆ.
ಹೀಗಾಗಿ ಚರ್ಮವು ಬಿಗಿದುಕೊಂಡು ಎದ್ದು ನಿಲ್ಲಲು ಆಗದೆ ಪರದಾಡುವಂತಾಗಿದೆ. ಇಷ್ಟಾದರೂ ತನ್ನ ಹೆಂಡತಿ ಮೊದಲಿನಂತಾಗಲಿ ಎನ್ನುವ ಆಸೆಯಿಂದ ತನ್ನಲ್ಲಿದ್ದ ಹಣವನ್ನೆಲ್ಲಾ ಸುರಿದು ಚಿಕಿತ್ಸೆ ಕೊಡಿಸಿದ್ದಾನೆ. ಹುಬ್ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ತನ್ನ ಹೆಂಡತಿಯ ಸ್ನಾನ ಮಾಡಿಸಲು ಪ್ರತಿನಿತ್ಯ ರು. 200 ಲಂಚ ನೀಡಿದ್ದಾಗಿ ಕಣ್ಣೀರು ಸುರಿಸುತ್ತಾನೆ. ಬಡವನಾದ ರಮೇಶ ಹೆಂಡತಿಯ ಚಿಕಿತ್ಸೆಗಾಗಿ ಅವಳ ಕೊರಳಲ್ಲಿನ ಮಾಂಗಲ್ಯ ಮಾರಿ ಚಿಕಿತ್ಸೆ ಕೊಡಿಸಿದ್ದಾನೆ. ಆದರೆ, ತನ್ನ ಹೆಂಡತಿ ಎಲ್ಲರಂತೆ ನಡೆದಾಡುತ್ತ ಇರುವುದನ್ನು ಬಯಸುವ ರಮೇಶನು ತನ್ನ ಹೆಂಡತಿಯ ಕಾಲುಗಳ ಮೊದಲಿನಂತಾಗಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾನೆ.
ಇತ್ತ ಸೋಮೇಶ್ವರ ನೂಲಿನ ಗಿರಣಿ ನಡೆಸುತ್ತಿರುವವರು ರಮೇಶನ ಹೆಂಡತಿಯ ಚಿಕಿತ್ಸೆಗೆ ರು. 2 ಸಾವಿರ ನೀಡಿದ್ದರು. ಹೀಗೆ ನೀಡಿದ ಹಣವನ್ನು ಆತನ ಪ್ರತಿ ತಿಂಗಳ ಸಂಬಳದಲ್ಲಿ ರು. 500ರಂತೆ ಕಟ್ ಮಾಡಿಕೊಂಡಿದ್ದಾರೆ. ಈಗ ನೂಲಿನ ಗಿರಣಿಯು ಈಗ ಖಾಸಗಿ ಮಾಲೀಕರ ಕೈಯಲ್ಲಿ ಸಿಕ್ಕು ಸೀರುಂಡೆಯಾಗಿದ್ದು ಇಂತಹದರಲ್ಲಿ ರಮೇಶನ ಕೂಗು ಯಾರು ಕೇಳದಂತಾಗಿದೆ. ಸದ್ಯ ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ ಹೆಂಡತಿಯ ಕಾಲುಗಳ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೆ ರಮೇಶ ಆಕಾಶವೇ ಕಳಚಿ ಮೈಮೇಲೆ ಬಿದ್ದಂತಾಗಿದೆ.
ಇತ್ತ ಚಿಕಿತ್ಸೆಗೆ ಹಣ ನೀಡಿದರೆ ತುತ್ತಿನ ಚೀಲ ತುಂಬಲು ಕಷ್ಟ ಪಡುತ್ತಿದ್ದಾನೆ. ಬಿಪಿಎಲ್ ಕಾರ್ಡ್ ಹೊಂದಿದ್ದರೂ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಯ ವೈದ್ಯರು ಮನಸ್ಸು ಮಾಡುತ್ತಿಲ್ಲ. ಆಸ್ಪತ್ರೆ ಹಾಗೂ ಔಷಧ ಖರ್ಚು ರು. 40-50 ಸಾವಿರದಷ್ಟು ಆಗಬಹುದು ಎನ್ನುತ್ತಾರೆ ಎಂದು ರಮೇಶನ ಹೆಂಡತಿ ಶಶಿಕಲಾ ಹೇಳುತ್ತಾಳೆ.
ಬಡವರಿಗೆ ನೂರೆಂಟು ಕಾಡಾಟಗಳು ಎನ್ನುವಂತೆ ವರಕವಿ ದ.ರಾ. ಬೇಂದ್ರೆಯವರ ಹಾಡು, 'ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು' ಎನ್ನುತ್ತ ಸಂಸಾರ ಸಾಗಿಸುತ್ತಿದ್ದ ಅಂಧ ದಂಪತಿಗಳ ಬಾಳು ಬೆಳಗಲು ಸಹಾಯ ಮಾಡುವವರು ಅಂಧ ರಮೇಶನ ಮೊ: 99806 85190 ಕರೆ ಮಾಡಬಹುದಾಗಿದೆ.
-ಅಶೋಕ ಸೊರಟೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

