ಸೇವಾಲಾಲ ಮಹಾರಾಜರ ಜಯಂತ್ಯುತ್ಸವ ನಾಳೆ
ಗಜೇಂದ್ರಗಡ: ರೋಣ ತಾಲೂಕು ಸೇವಾಲಾಲ ಜಯಂತ್ಯುತ್ಸವ ಸಮಿತಿ ವತಿಯಿಂದ ಸಂತ ಸೇವಾಲಾಲ ಮಹಾರಾಜರ 275ನೇ ಜಯಂತ್ಯುತ್ಸವ ಸಮಾರಂಭ ಮಾ. 3ರಂದು ಮಧ್ಯಾಹ್ನ 2ಕ್ಕೆ ಪಟ್ಟಣದ ಸೇವಾಲಾಲ ದೇಗುಲ ಆವರಣದಲ್ಲಿ ನಡೆಯಲಿದೆ. ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತ ಸ್ವಾಮೀಜಿ, ವಿಜಯಮಹಾಂತ ಶಾಖಾಮಠ ಲಿಂಗಸ್ಗೂರದ ಸಿದ್ಧಲಿಂಗಶ್ರೀಗಳು, ಶಿರೂರ ಬಂಜಾರ ಶಕ್ತಿ ಪೀಠದ ಕುಮಾರ ಮಹಾರಾಜರು, ಹೇಮಗಿರಿ ಗೋಸಾವಿ ಬಾವಾನವರು, ಅರ್ಚಕ ಕೃಷ್ಣಾ ಭಗತ್, ದೇವಾ ಭಗತ್ ಸಾನ್ನಿಧ್ಯ ವಹಿಸುವರು. ಬಳ್ಳಾರಿ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ಪ್ರತಾಪಸಿಂಹ ಘೋರ್ಪಡೆ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್.ಪಾಟೀಲ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ಮಾಜಿ ಸಚಿವ ಕೆ.ಜಿ .ಬಂಡಿ, ಅಶೋಕ ಬಾಗಮಾರ, ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಪುರಸಭೆ ಸದಸ್ಯೆ ಶಾರದಾ ರಾಠೋಡ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಕಾರ್ಮಿಕರು ಕಾನೂನು
ತಿಳಿದುಕೊಳ್ಳುವುದು ಅಗತ್ಯ
ಮುಂಡರಗಿ: ಕಾರ್ಮಿಕರು ತಮಗಾಗಿ ಸ್ಥಾಪಿತವಾದ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮುಂಡರಗಿ ಜೆಎಂಎಫ್ಸಿ ದಿವಾಣಿ ನ್ಯಾಯಾಧೀಶ ವಿಜಯಕುಮಾರ ಕನ್ನೂರ ಹೇಳಿದರು. ಶುಕ್ರವಾರ ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ತಾಲೂಕು ಕಾರ್ಮಿಕ ನಿರೀಕ್ಷಕ ಇಲಾಖೆಗಳ ಆಶ್ರಯದಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಹಾಗೂ ಜನಸಾಮಾನ್ಯರಿಗಾಗಿ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ, ಕಾರ್ಮಿಕರ ಕಾನೂನು, ಸರ್ಕಾರಿ ಸೌಲಭ್ಯ ಕುರಿತು ತಿಳಿದುಕೊಂಡು ಇತರೆ ಕಾರ್ಮಿಕರಿಗೆ ತಿಳಿಸಬೇಕು ಎಂದರು. ನ್ಯಾಯವಾದಿ ಸವಿತಾ ಶಿಗ್ಲಿ, ನ್ಯಾಯವಾದಿಗಳಾದ ಎ.ಸಿ. ಉಳ್ಳಾಗಡ್ಡಿ, ನಾಗಭೂಷಣ ಹಿರೇಮಠ-ಕಾರ್ಮಿಕ ಇಲಾಖೆ ಅಧಿಕಾರಿ ಎಸ್.ಎ. ಹಿರಿಯಾಲ, ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಗ್ಯಾಣಪ್ಪ ಶೀರಿ ಮಾತನಾಡಿದರು. ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಕೆ. ಜೈನ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಎನ್.ವಿ. ಅರಳಿ ನಿರೂಪಿಸಿದರು. ರಚನಾ ಗದಗ ವಂದಿಸಿದರು.
ಸಿ.ವಿ. ರಾಮನ್ ಶ್ರೇಷ್ಠ ವಿಜ್ಞಾನಿ
ಗದಗ: ಸರ್ ಸಿ.ವಿ. ರಾಮನ್ ವಿಜ್ಞಾನದಲ್ಲಿ ಸಂಶೋಧಿಸಿ ಸತತ ಅಧ್ಯಯನಗೈದು ನಾಡಿಗೆ ಅಪೂರ್ವ ಕೊಡುಗೆ ನೀಡಿದ ಶ್ರೇಷ್ಠ ವಿಜ್ಞಾನಿ ಎಂದು ಗದಗ-ಬೆಟಗೇರಿ ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಹೇಳಿದರು. ಶುಕ್ರವಾರ ತಾಲೂಕಿನ ಹೊಸಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಗದಗ-ಬೆಟಗೇರಿ ಇನ್ನರ್ವ್ಹೀಲ್ ಕ್ಲಬ್ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿ, ಮಕ್ಕಳಿಗೆ ವಿಜ್ಞಾನದ ಮಹತ್ವ ತಿಳಿಸಬೇಕು ಎಂದರು. ಗದಗ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಸ್. ತಳವಾರ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಸಂಘ ಸಂಸ್ಥೆಗಳು ಶಾಲೆಯೊಂದಿಗೆ ಕೈಜೋಡಿಸಬೇಕು ಎಂದರು. ಮುಖ್ಯೋಪಾಧ್ಯಾಯ ಎಸ್.ಎಂ. ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಉಮೇಶ ತಳವಾರ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ನಡೆಸಿದರು. ಇನ್ನರ್ವ್ಹೀಲ್ ಕ್ಲಬ್ದಿಂದ ಬಹುಮಾನ ವಿತರಿಸಲಾಯಿತು. ಶಿಕ್ಷಕ ಎಸ್.ಟಿ. ಹೊಸಮನಿ, ಎಸ್.ಎನ್. ಆದಿ, ಎನ್.ಆರ್. ಕಮತ್ ಇದ್ದರು. ಸವಿತಾ ಪಾಟೀಲ ಪ್ರಾರ್ಥಿಸಿದರು. ಕೆ.ವೈ. ಕಣಕಿಕೊಪ್ಪ ಸ್ವಾಗತಿಸಿದರು. ಸುಲೋಚನಾ ಐಹೊಳಿ ನಿರೂಪಿಸಿದರು. ಶಾಂತಾ ಮುಂದಿನಮನಿ ವಂದಿಸಿದರು.
ಗ್ರಾಮ ಸ್ವಚ್ಛ, ಸುಂದರಗೊಳಿಸಲು ಶ್ರಮಿಸಬೇಕಿದೆ: ರೇವಣ್ಣ
ಗದಗ: ಯೋಧ ಸೈನ್ಯದೊಂದಿಗೆ ದೇಶ ರಕ್ಷಿಸಿದರೆ ನಾವಿಂದು ಗ್ರಾಮಗಳಲ್ಲಿ ಮನೆಗೊಂದು ಶೌಚಾಲಯ ನಿರ್ಮಿಸಿ ಗ್ರಾಮಗಳನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಯುಕ್ತವಾಗಿ ಮಾಡಲು ಶ್ರಮಿಸಬೇಕಿದೆ ಎಂದು ಗದಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ರೇವಣ್ಣ ಹೇಳಿದರು. ಗದಗ ತಾಪಂ ಸಭಾಂಗಣದಲ್ಲಿ ಗದಗ-ಬೆಟಗೇರಿ ಇನ್ನರ್ವ್ಹೀಲ್ ಕ್ಲಬ್ ಹಾಗೂ ತಾಪಂ ಸಹಯೋಗದಲ್ಲಿ ಗ್ರಾಪಂ ಸದಸ್ಯರಿಗೆ ಗ್ರಾಮ ನೈರ್ಮಲ್ಯ ಹಾಗೂ ಶೌಚಾಲಯದ ಅವಶ್ಯಕತೆ ಕುರಿತು ಶುಕ್ರವಾರ ಏರ್ಪಡಿಸಿದ್ದ ತಿಳಿವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ವಹಿಸಿ ಮಾತನಾಡಿ, ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು. ಗ್ರಾಪಂ ಸದಸ್ಯರು ಜಾಗೃತಿ ಮೂಡಿಸಬೇಕು ಎಂದರು. ಎಲ್.ಎಚ್. ಹಣಸಿ, ಸಿಜಿಬಿ ಹಿರೇಮಠ, ವಿದ್ಯಾ ಸೂಡಿಶೆಟ್ಟರ್, ಶಾಂತಾ ಮುಂದಿನಮನಿ, ಸವಿತಾ ಪಾಟೀಲ, ಹೇಮಾ ಪೊಂಗಾಲಿಯಾ, ವಿಜಯಲಕ್ಷ್ಮಿ ಮಾನ್ವಿ ಮುಂತಾದವರು ಇದ್ದರು. ಉಮಾ ಹಳ್ಳಿಕೇರಿ ಸ್ವಾಗತಿಸಿದರು. ಕವಿತಾ ದಂಡಿನ ನಿರೂಪಿಸಿದರು.
ಇಂದು ಉಚಿತ ಸಿಇಟಿ ಕಾರ್ಯಾಗಾರ
ಮುಂಡರಗಿ: ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕ, ಎಂ.ಎಸ್. ಹುಲ್ಲೂರ ಫೌಂಡೇಶನ್ ಹಾಗೂ ಎಕ್ಷಲೆಂಟ್ ಸಿಇಟಿ ಕೋಚಿಂಗ್ ಸೆಂಟರ್ ಗದಗ ಇವುಗಳ ಸಹಯೋಗದಲ್ಲಿ ಮಾ. 2ರಂದು ಮುಂಡರಗಿ ಸರ್ಕಾರಿ ಹಿರಿಯ ಪ್ರಾಥಮಿಕ ಕೋಟೆ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಾಗ ಬಯಸುವವರಿಗೆ ಹಾಗೂ ಪೊಲೀಸ್ ಇಲಾಖೆಗೆ ಸೇರಬಯಸುವವರಿಗೆ ಒಂದು ದಿನದ ಉಚಿತ ಸಿಇಟಿ ಮಾರ್ಗದರ್ಶನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಮಾ. 2ರಂದು ಬೆಳಗ್ಗೆ 9.30ಕ್ಕೆ ತಮ್ಮ ಹೆಸರನ್ನು ನೋಂದಾಯಿಸಿ ಹಾಜರಾಗಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವನಾಥ ಉಳ್ಳಾಗಡ್ಡಿ ಕಾರ್ಯದರ್ಶಿಗಳು ಭಾರತ ಜ್ಞಾನ-ವಿಜ್ಞಾನ ಸಮಿತಿ ಕಾರ್ಯದರ್ಶಿ 8904034502ಕ್ಕೆ ಅಥವಾ ಜೆ.ಎನ್. ಮಕಾಂದಾರ 9481735220 ಅವರನ್ನು ಸಂಪರ್ಕಿಸಬೇಕೆಂದು ಭಾರತ ಜ್ಞಾನ-ವಿಜ್ಞಾನ ಸಮಿತಿ ಸದಸ್ಯ ಶರಣು ಸೊಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೇತುವೆಗೆ ಲಾರಿ ಡಿಕ್ಕಿ: ಸಂಚಾರ ಸ್ಥಗಿತ
ಮುಂಡರಗಿ: ಮುಂಡರಗಿ-ಗದಗ ರಸ್ತೆಯ ಎಸ್.ಎಸ್. ಪಾಟೀಲ ನಗರದ ಹತ್ತಿರ ಲಾರಿಯೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಶುಕ್ರವಾರ ರಾತ್ರಿ 8ರಿಂದ ಶನಿವಾರ ಬೆಳಗ್ಗೆ 12ರ ವರೆಗೆ ರಸ್ತೆಯಲ್ಲಿಯೇ ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ನಿರ್ಮಾಣದ ಹಂತದಲ್ಲಿರುವ ಚಿಕ್ಕ ಸೇತುವೆಗೆ ಲಾರಿ ಡಿಕ್ಕಿಹೊಡೆದು ರಸ್ತೆಯಲ್ಲಿ ಸಿಲುಕಿದ್ದರಿಂದ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು. ಕಾರು, ಬೈಕ್ಗಳು ಮಾತ್ರ ಸಂಚರಿಸುತ್ತಿದ್ದವು. ಗದಗ, ಡಂಬಳ, ಮೇವುಂಡಿ, ಬರದೂರ ಕಡೆಗೆ ಹೋಗುವವರು ಸುಮಾರು 2 ಕಿ.ಮೀ. ನಡೆದುಕೊಂಡು ಪ್ರಯಾಣ ಮಾಡಿದ್ದು ಕಂಡು ಬಂದಿತು. ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಅದು ನಮಗೆ ಸಂಬಂಧಿಸಿದ್ದಲ್ಲ, ಅಲ್ಲಿ ಕಾಮಗಾರಿ ನಡೆಸುತ್ತಿರುವವರಿಗೆ ಸಂಬಂಧಿಸಿದ್ದು ಎಂದು ಹೇಳಿದರು. ನಂತರ ಸಿಪಿಐ ಶ್ರೀಪಾದ ಜೆಲ್ದೆ ತಮ್ಮ ಸಿಬ್ಬಂದಿ ಕಳುಹಿಸಿ ಲಾರಿ ಮೇಲೆತ್ತಿ ತೆರವುಗೊಳಿಸಿದರು.
ವಿಜ್ಞಾನ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಕೊರತೆ
ಗದಗ: ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಡಿಡಿಪಿಐ ರಾಜೇಂದ್ರ ಪ್ರಸಾದ ಹೇಳಿದರು. ಬೆಟಗೇರಿಯ ಸೆಂಟ್ ಜಾನ್ ಪ್ರೌಢಶಾಲೆಯಲ್ಲಿ ಈಚೆಗೆ ಜರುಗಿದ ಗದಗ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯ ವಿಜ್ಞಾನ ಪರಿಷತ್ನ ಅಧ್ಯಕ್ಷ ಪ್ರಾ. ಎಸ್.ವಿ. ಸಂಕನೂರ ಮಾತನಾಡಿದರು. ವಿಷಯ ಪರಿವೀಕ್ಷಕ ಜಿ.ಡಿ. ದಾಸರ ಇದ್ದರು. ರಸಪ್ರಶ್ನೆಯಲ್ಲಿ ಶಹರ ವಿಭಾಗ ಸೆಂಟಜಾನ್ ಪ್ರೌಢಶಾಲೆ ಗದಗ ಪ್ರಥಮ ಸ್ಥಾನ, ಎಸ್.ಎ.ವಿ. ಪ್ರೌಢಶಾಲೆ ನರೇಗಲ್ಲ ದ್ವಿತೀಯ ಸ್ಥಾನ, ಗ್ರಾಮೀಣ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಅಬ್ಬಿಗೇರಿ ಪ್ರಥಮ ಸ್ಥಾನ, ಕೆ.ಜಿ.ಎಂ. ಪ್ರೌಢಶಾಲೆ ಶಿಗ್ಲಿ ದ್ವಿತೀಯ ಸ್ಥಾನ ಪಡೆದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅನ್ನದಾನಿ ಹಿರೇಮಠ ಸ್ವಾಗತಿಸಿದರು. ಎನ್.ವಿ. ಜೋಷಿ ನಿರೂಪಿಸಿದರು. ಶಿಕ್ಷಕಿ ಮಾರ್ಗರೇಟ್ ಕಿತ್ತೂರ ವಂದಿಸಿದರು.
ದೇಶದ ಪ್ರಗತಿಗೆ ವಿದ್ಯುತ್
ಶಕ್ತಿ ಅತ್ಯವಶ್ಯ
ಲಕ್ಷ್ಮೇಶ್ವರ: ಹಳ್ಳಿಗಳು ದೇಶದ ಪ್ರಗತಿಯಲ್ಲಿ ಪಾಲುದಾರರಾಗಲು ವಿದ್ಯುತ್ ಶಕ್ತಿಯು ಅವಶ್ಯ ಸಾಧನವಾಗಿದೆ ಎಂದು ಪಟ್ಟಣದ ಹೆಸ್ಕಾಂನ ಸಹಾಯಕ ಅಭಿಯಂತ ಆಂಜನೇಯಪ್ಪ ಹೇಳಿದರು. ಸಮೀಪದ ಗೋವನಾಳ ಗ್ರಾಮದಲ್ಲಿ ಈಚೆಗೆ ನಿರಂತರ ವಿದ್ಯುತ್ ಜ್ಯೋತಿ ಯೋಜನೆಯ ಅಡಿಯಲ್ಲಿ ವಿದ್ಯುತ್ ನೀಡುವ ಕಾರ್ಯಕ್ರಮ ಅನುಷ್ಠಾನಗೊಳಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳು ಇನ್ನು ಮುಂದೆ ನಿರಂತರ ವಿದ್ಯುತ್ ಯೋಜನೆ ಅಡಿಯಲ್ಲಿ ಹಗಲು-ರಾತ್ರಿ ನಿರಂತರ ವಿದ್ಯುತ್ ಪಡೆಯಬಹುದಾಗಿದೆ ಎಂದರು. ರಾಮಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಬಸಣ್ಣ ಬೆಟಗೇರಿ, ಸೋಮಣ್ಣ ಬೆಟಗೇರಿ ಮಾತನಾಡಿದರು. ರಾಮಗೇರಿ ಗ್ರಾಪಂ ಅಧ್ಯಕ್ಷ ನಿಂಗನಗೌಡ ಪಾಟೀಲ, ಹೆಸ್ಕಾಂನ ಕಿರಿಯ ಅಭಿಯಂತ ಎಸ್.ಎಂ. ಕುರಿ, ಗ್ರಾಪಂ ಸದಸ್ಯ ನಾಗರಾಜ ಮಡಿವಾಳರ, ನೀಲೇಶಪ್ಪ ಕಾಳೆ, ಗಿರಿಜವ್ವ ದೊಡ್ಡಗೌಡರ, ಚಂದ್ರು ತಳವಾರ, ದುಂಡಪ್ಪ ತೇಲಿ, ಬಸವರಾಜ ಶೆಟ್ಟರ, ನೀಲಪ್ಪ ಬಡಿಗೇರ ಮುಂತಾದವರು ಇದ್ದರು.
ಪ್ರಾಚೀನ ಭಾರತ ಎಲ್ಲ
ಕ್ಷೇತ್ರದಲ್ಲಿ ಕೊಡುಗೆ ನೀಡಿದೆ
ಗದಗ: ನಮ್ಮ ಪ್ರಾಚೀನ ಭಾರತವು ಎಲ್ಲ ಕ್ಷೇತ್ರಗಳಲ್ಲಿ ವಿಜ್ಞಾನಕ್ಕೆ ಕೊಡುಗೆ ನೀಡಿದೆ ಎಂದು ಗದಗ ಗ್ರಾಮೀಣ ಬಿಇಒ ಎಸ್.ಆರ್. ಹೂಗಾರ ಹೇಳಿದರು. ಅವರು ಈಚೆಗೆ ತಾಲೂಕಿನ ಅಂತೂರ-ಬೆಂತೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1 ರಲ್ಲಿ ರಾಷ್ಟ್ರಿಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದರು. ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರ ಜತೆ ಪಾಲಕರ ಜವಾಬ್ದಾರಿಯಾಗಿದೆ. ಮಕ್ಕಳನ್ನು ಪ್ರತಿದಿನ ಶಾಲೆಗೆ ತಪ್ಪದೇ ಕಳಿಸಿಕೊಡಬೇಕು ಹಾಗೂ ವಿಜ್ಞಾನ ಬೋಧಿಸುವ ಶಿಕ್ಷಕರು ಪ್ರಯೋಗವನ್ನು ಬಹಳ ಜಾಗೃತಿಯಿಂದ ಮಾಡಬೇಕು. ಜಗತ್ತಿನ ಅಭಿವೃದ್ಧಿಗೆ ಆಯಾಮ ನೀಡುವ ವಿಜ್ಞಾನವನ್ನು ನಿರ್ಲಕ್ಷಿಸಬೇಡಿ, ಆಲೋಚನಾಶಕ್ತಿಯ ಮೂಲಕ ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಹೇಳಿದರು. ಶಿಕ್ಷಕ ಪ್ರಕಾಶ ಗಿಡ್ಡಣ್ಣವರ, ಕ್ಲಸ್ಟರಿನ ಸಿಆರ್ಪಿ ನರೇಗಲ್ಲಮಠ ಮಾತನಾಡಿದರು. ಎಂ.ಪಿ. ಬಂಕದ ಅಧ್ಯಕ್ಷತೆ ವಹಿಸಿದ್ದರು. ಶಿವರಾಯಪ್ಪ ಸೊರಟೂರ ಮುಂತಾದವರು ಹಾಜರಿದ್ದರು. ಎಸ್.ವಿ. ಕೊತಬಾಳ ಸ್ವಾಗತಿಸಿ, ವಂದಿಸಿದರು.
ಇಂದು ಭೋವಿ ಸಮಾಜ
ಬಾಂಧವರ ಸಂಘದ ಸಭೆ
ಗದಗ: ನಗರದ ಕೃಷ್ಣಾ ಕಾಲನಿಯಲ್ಲಿಯ ಭೋವಿ ಸಮಾಜದ ಕಟ್ಟಡದಲ್ಲಿ ಮಾ. 2ರಂದು ಬೆಳಗ್ಗೆ 10.30ಕ್ಕೆ ಗದಗ ಜಿಲ್ಲಾ ಭೋವಿ ಸಂಘದ ಎಲ್ಲ ಸರ್ಕಾರಿ ನೌಕರರು, ನಿವೃತ್ತ ನೌಕರರು ಹಾಗೂ ಭೋವಿ ಸಮಾಜ ಬಾಂಧವರ ಸಭೆ ಕರೆಯಲಾಗಿದೆ. ಅಂದು ಸಂಘದ ಸಂಘಟನೆ ಹಾಗೂ ನೌಕರರ ಜಿಲ್ಲಾ ಸಂಘದ ಪದಾಧಿಕಾರಿಗಳು ಆಯ್ಕೆ ಮತ್ತು ಭೋವಿ ಸಮಾಜದ ಕಟ್ಟಡ ಉದ್ಘಾಟನೆ ಕುರಿತು ಚರ್ಚಿಸಲಾಗುವುದು. ಈ ಸಭೆಯಲ್ಲಿ ಸರ್ಕಾರಿ ನೌಕರರು, ನಿವೃತ್ತ ನೌಕರರು ಹಾಗೂ ಭೋವಿ ಸಮಾಜ ಬಾಂಧವರು ಈ ಸಭೆಯಲ್ಲಿ ತಪ್ಪದೇ ಹಾಜರಿರಬೇಕೆಂದು ಗದಗ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಎಚ್.ವೈ. ಸಂದಕದ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಡಿ.ಕೆ. ಕಲ್ಲೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9663991379 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಗದಗ: ಶಿಕ್ಷಣ, ಕಲೆ, ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂತಹ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ ನೀಡುವ ಯೋಜನೆ ಭಾರತ ಸರ್ಕಾರ ಜಾರಿಗೆ ತಂದಿದೆ. ಈ ಮೇಲ್ಕಂಡ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 4 ರಿಂದ 15 ವರ್ಷದೊಳಗಿನ ಅಂದರೆ 1-8-1999 ಹಾಗೂ ನಂತರ ಹುಟ್ಟಿದ ಮಕ್ಕಳನ್ನು 2014ನೇ ವರ್ಷಕ್ಕೆ ಆಯ್ಕೆ ಮಾಡಲಾಗುವುದು. ಈ ಪ್ರಶಸ್ತಿ ಒಂದು ಚಿನ್ನದ ಪಕದ, ರು. 20 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ 35 ಬೆಳ್ಳಿ ಪದಕ (ಪ್ರತಿ ರಾಜ್ಯ ಕೇಂದ್ರಾಡಳಿತ ಪ್ರದೇಶಕ್ಕೆ 1 ಬೆಳ್ಳಿ ಪದಕ) ರು. 10 ಸಾವಿರ ನಗದು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಶಿಕ್ಷಣ, ಕಲೆ, ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಅಸಾಧಾರಣವೆಂದು ಗುರುತಿಸಲು ಅವರ ಸಾಧನೆಯ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಯಾಗಿರಬೇಕು. ಅಥವಾ ಸಂಬಂಧಪಟ್ಟ ಕ್ಷೇತ್ರ ತಜ್ಞರಿಂದ ಪರೀಕ್ಷಿಸಿರಬೇಕು. ಮಕ್ಕಳ ವಯಸ್ಸಿನ ಪ್ರಮಾಣಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಅರ್ಜಿಗಳನ್ನು ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗ ಇಲ್ಲಿಂದ ಪಡೆದು ಆಂಗ್ಲ ಭಾಷೆಯಲ್ಲಿ ದ್ವಿಪ್ರತಿಯಲ್ಲಿ ಅರ್ಜಿಗಳನ್ನು ಮಾ. 15ರೊಳಗೆ ತಲುಪುವಂತೆ ಜಿಲ್ಲಾ ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗದಗ ಇವರಿಗೆ ಕಳಿಸಬೇಕು.
ಬಿ.ಇಡಿ. ಕೋರ್ಸ್ಗೆ 5ರಿಂದ ಕೌನ್ಸೆಲಿಂಗ್
ಗದಗ: 2013-14ನೇ ಸಾಲಿನ ಬಿ.ಇಡಿ. ಕೋರ್ಸ್ಗೆ 2ನೇ ಹಂತದ ಕೌನ್ಸೆಲಿಂಗ್ ಪ್ರಕ್ರಿಯೆ ಮಾ. 5ರಿಂದ 9ರ ವರೆಗೆ ಬೆಂಗಳೂರಿನ ಕೇಂದ್ರೀಕೃತ ದಾಖಲಾತಿ ಘಟಕದಲ್ಲಿ ನಡೆಯಲಿದೆ. ಈಗಾಗಲೇ ಮಾ. 1ರಂದು ಇಲಾಖಾ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳು ಮಾತ್ರ ಕೌನ್ಸೆಲಿಂಗ್ನಲ್ಲಿ ಭಾಗವಹಿಸಬೇಕು. ಕೌನ್ಸೆಲಿಂಗ್ಗೆ ವಿವಿಧ ಜಿಲ್ಲೆಯ ಕಾಲೇಜುಗಳಲ್ಲಿ ಲಭ್ಯವಿರುವ ಪ್ರವರ್ಗವಾರು ಸೀಟುಗಳ ಸಂಖ್ಯೆಯನ್ನು ನಮೂದಿಸಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಪ್ರತಿನಿತ್ಯ ಕೌನ್ಸೆಲಿಂಗ್ ಮುಗಿದ ನಂತರ ಉಳಿಕೆ ಸೀಟುಗಳ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಕೌನ್ಸೆಲಿಂಗ್ನಲ್ಲಿ ಭಾಗವಹಿಸುವ ಪೂರ್ವದಲ್ಲಿ ಪ್ರವರ್ಗವಾರು ಸೀಟುಗಳು ಲಭ್ಯವಿರುವ ಜಿಲ್ಲೆ ಮತ್ತು ಕಾಲೇಜುಗಳನ್ನು ಪರಿಶೀಲಿಸಿ ಹಾಜರಾಗಬೇಕು ಎಂದು ಗದಗ ಜಿಲ್ಲಾ ಡಯಟ್ ಪ್ರಾಚಾರ್ಯ ಬಿ.ಎಸ್. ರಘುವೀರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೈಬ್ಸೈಟ್ ಪರೀಕ್ಷಿಸಬಹುದು ಎಂದು ವಿನಂತಿಸಿದ್ದಾರೆ.
ಕೋಟ್ಪಾ ಕಟ್ಟುನಿಟ್ಟು ಜಾರಿ: ಗದಗ
ಎಸ್ಪಿ ಕಾರ್ಯಕ್ಕೆ ಕೇಂದ್ರದ ಶ್ಲಾಘನೆ
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ನಿಷೇಧ ಕಾಯ್ದೆ (ಕೋಟ್ಪಾ) ಕಟ್ಟು ನಿಟ್ಟಾಗಿ ಜಾರಿಗೆ ತಂದಿರುವ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶ್ಲಾಘಿಸಿದೆ. ಈ ಸಂಬಂಧ ರಾಜ್ಯದ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿ ಎನ್.ಎಸ್. ಮೇಘರಿಕ್ ಅವರಿಗೆ ಶ್ಲಾಘನೆಯ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಇಲಾಖೆ ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕ ಡಾ.ಜಗದೀಶ್ ಪ್ರಸಾದ್, ಪೊಲೀಸ್ ಇಲಾಖೆ ಸಹಕಾರ ಮತ್ತು ಬದ್ಧತೆಯಿಂದ ಕೋಟ್ಪಾ ಕಾಯ್ದೆ ಯಶಸ್ವಿಯಾಗಿ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದಿದ್ದಾರೆ. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಭಾಗವಾಗಿರುವ ಕೋಟ್ಪಾ ಕಾಯ್ದೆ ಕಟ್ಟು ನಿಟ್ಟಾಗಿ ಜಾರಿಗೆ ತಂದಿರುವ ದೇಶದ ಮೊದಲ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಗದಗ ಪಾತ್ರವಾಗಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆ ಉತ್ತಮ ಸಾಧನೆ ಮಾಡಿದೆ ಎಂದು ಡಾ.ಜಗದೀಶ್ ಪ್ರಸಾದ್ ಶ್ಲಾಘಿಸಿದ್ದಾರೆ.
ನಕಲಿ ಅಂಗವಿಕಲರ ಪಾಸ್ ರದ್ದು ಮಾಡಲು ಆಗ್ರಹ
ನರಗುಂದ: ತಾಲೂಕಿನಲ್ಲಿ 150ಕ್ಕಿಂತ ಹೆಚ್ಚು ನಕಲಿ ಅಂಗವಿಕಲರ ಬಸ್ ಪಾಸ್ಗಳಿದ್ದು, ಅವುಗಳನ್ನು ಈ ಸದ್ಯ 2014-15ನೇ ಸಾಲಿಗೆ ಮರು ನವೀಕರಣಕ್ಕೆ ಬಂದಾಗ ಸಂಬಂಧಪಟ್ಟ ಕೆಎಸ್ಆರ್ಟಿಸಿ ಅಧಿಕಾರಿಗಳು ಅವುಗಳನ್ನು ರದ್ದು ಮಾಡಬೇಕು. ಈ ನಕಲಿ ಪಾಸ್ಗಳಿಂದ ನಿಜವಾದ ಅಂಗವಿಕಲರು ಮುಜುಗುರಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಪುನಃ ನಕಲಿ ಅಂಗವಿಕಲ ಅಭ್ಯರ್ಥಿಗಳ ಬಸ್ಪಾಸ್ ನವೀಕರಣಗೊಳಿಸಿಕೊಂಡು ಬಸ್ಪಾಸ್ ಪಡೆದಿದ್ದಲ್ಲಿ ಅಂತವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಪುಂಡಿತ ಪುಟ್ಟರಾಜ ಕವಿ ಕವಾಯಿಗಳವರ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಫಕೀರಪ್ಪ ಮೇಗಲಮನಿ, ಕಾರ್ಯದರ್ಶಿ ಇಬ್ರಾಹಿಂಸಾಬ್ ಸವಟಗಿ ಪ್ರಕಟಿಣೆಯಲ್ಲಿ ತಿಳಿಸಿದ್ದಾರೆ.
ಕಲಾ ವಿಕಾಸ ಪ್ರಶಸ್ತಿಗೆ
ಅರ್ಜಿ ಆಹ್ವಾನ
ಗದಗ: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯತೆ ಹೊಂದಿರುವ ಕಲಾ ವಿಕಾಸ ಪರಿಷತ್ ತನ್ನ 17ನೇ ವರ್ಷದ ವಾರ್ಷಿಕ ಪ್ರಶಸ್ತಿಗಾಗಿ ಸಂಗೀತ, ನೃತ್ಯ, ಶಿಕ್ಷಣ ಸಂಸ್ಥೆ, ಸಾಂಸ್ಕೃತಿಕ ಸಂಘಟನೆಗೆ ಹಾಗೂ ಹಿರಿಯ ಕಲಾವಿದ ಗುರುಗಳಿಗೆ ನೀಡಲಾಗುವ ಕಲಾ ವಿಕಾಸ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಕಲಾ ಗುರುಗಳು, ಸಂಗೀತ ನೃತ್ಯ ಕಲಾಶಾಲೆಯ ಮುಖ್ಯಸ್ಥರು ಮತ್ತು ಸಾಂಸ್ಕೃತಿಕ ಸಂಘಟನೆಯ ಮುಖ್ಯಸ್ಥರು ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರಿನಲ್ಲಿ ಹಮ್ಮಿಕೊಳ್ಳುವ ಪರಿಷತ್ನ 18ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆಸಕ್ತರು ತಮ್ಮ ಸಂಪೂರ್ಣ ಪರಿಚಯ ಪತ್ರದೊಂದಿಗೆ ್ಞಛಟಛಢ್ಝ್ಞಛಡಛಣಣಝ್ಟ್ಟ.್ಛ್ಟಟ ಗೆ ಇಮೇಲ್ ಮೂಲಕ ಅಥವಾ ಕಲಾ ವಿಕಾಸ ಪರಿಷತ್, ಪಂಚಾಕ್ಷರಿ ನಗರ 4ನೇ ಅಡ್ಡರಸ್ತೆ ಅಂಚೆ ಪೆಟ್ಟಿಗೆ ಸಂಖೆ 49, ಗದಗ-582101ಗೆ ಅಂಚೆ ಮೂಲಕವೂ ಕಳಿಸಿ ಕೊಡಬಹುದಾಗಿದೆ. ಅರ್ಜಿ ಕಳಿಸಲು ಮಾ. 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ 08372-220432 ಈ ದೂರವಾಣಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಕಲಾವಿಕಾಸ ಪರಿಷತ್ನ ಪ್ರಕಟಣೆ ತಿಳಿಸಿದೆ.
ಇಂದು ಆರೋಗ್ಯ, ನೇತ್ರ ಉಚಿತ ತಪಾಸಣಾ ಶಿಬಿರ
ಗಜೇಂದ್ರಗಡ: ಸಮೀಪದ ಸೂಡಿ ಗ್ರಾಮ ಹಾಲಕರೆ ಅನ್ನದಾನೇಶ್ವರ ಸಾಂಸ್ಕೃತಿಕ ಭವನದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಆರೋಗ್ಯ ಮತ್ತು ನೇತ್ರ ಉಚಿತ ತಪಾಸಣಾ ಶಿಬಿರ ಮಾ. 2ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಐಎಂಎ, ಆಯುಷ್ಯ ಇಲಾಖೆ, ವೀರಭದ್ರೇಶ್ವರ ಸ್ವಯಂ ಉಯೋಗ ತರಬೇತಿ ಹಾಗು ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ, ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಮೆಡಿಕಲ್ ಕಾಲೇಜ ವತಿಯಿಂದ ನಡೆಯಲಿದೆ. ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸುವರು. ಅಭಿನವ ಅನ್ನದಾನ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ವೀರಣ್ಣ ಶೆಟ್ಟರ್ ಅಧ್ಯಕ್ಷತೆ ವಹಿಸುವರು. ಗ್ರಾಪಂ ಅಧ್ಯಕ್ಷೆ ಯಲ್ಲಮ್ಮಾ ಮಾಡಲಗೇರಿ, ಡಾ. ಆರ್.ಎನ್. ಪಾಟೀಲ, ಜಿ.ಕೆ. ಕಾಳೆ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಹರ್ಡೇಕರ
ಮಂಜಪ್ಪನವರ ಜಯಂತ್ಯುತ್ಸವ
ಗದಗ: ನಗರದ ನಂದೀಶ್ವರ ಮಠದಲ್ಲಿ ಮಾ. 2ರಂದು ಬೆಳಗ್ಗೆ 11ಕ್ಕೆ ಬಸವ ಕೇಂದ್ರದ ವತಿಯಿಂದ ಹರ್ಡೇಕರ ಮಂಜಪ್ಪನವರ 128ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ. ಎಂ.ಎ. ಹಂಚಿನಾಳ ಅಧ್ಯಕ್ಷತೆ ವಹಿಸುವರು. ಪ್ರೊ. ಶಿವಾನಂದ ಹೊಂಬಳ ಅವರಿಂದ ಹರ್ಡೇಕರ ಮಂಜಪ್ಪನವರ ಕುರಿತು ಉಪನ್ಯಾಸ ಜರುಗಲಿದೆ. ಅತಿಥಿಗಳಾಗಿ ಹುಬ್ಬಳ್ಳಿ ಬಸವ ಕೇಂದ್ರದ ಉಪಾಧ್ಯಕ್ಷ ಜಿ.ಬಿ. ಹಳ್ಯಾಳ, ಪ್ರಕಾಶ ಕರಿಸೋಮನಗೌಡರ, ಶಿವಕುಮಾರ ಪಾಟೀಲ ಮುಂತಾದವರು ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ಬಸವ ಅಭಿಮಾನಿಗಳು ಹಾಗೂ ಬಸವಕೇಂದ್ರದ ಸದಸ್ಯರು ಆಗಮಿಸಬೇಕೆಂದು ಬಸವ ಕೇಂದ್ರದ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭವನಕ್ಕೆ ಭೂಮಿಪೂಜೆ
ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯ ಅಡಿಯಲ್ಲಿ ನಿರ್ಮಿಸಲಿರುವ ರು. 16 ಲಕ್ಷಗಳ ರಾಜೀವಗಾಂಧಿ ಭವನಕ್ಕೆ ಶಾಸಕ ರಾಮಕೃಷ್ಣ ದೊಡ್ಡಮನಿ ಭೂಮಿಪೂಜೆ ನೆರವೇರಿಸಿದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಕರಬಸಪ್ಪ ಹಂಚಿನಾಳ, ರಾಮಣ್ಣ ಲಮಾಣಿ, ರಾಜಶೇಖರ ಮೇಟಿ, ಅಂದಪ್ಪ ಮೇಟಿ, ವಿರೂಪಾಕ್ಷಪ್ಪ ತಾಮ್ರಗುಂಡಿ, ಶಿವಲಿಂಗಯ್ಯ ಗುರುವಿನ, ಹೇಮಂತಗೌಡ ಪಾಟೀಲ, ರಾಮಣ್ಣ ಹುಳಕಣ್ಣವರ ಇದ್ದರು.
ಅಡುಗೆ ಅನಿಲ ಸಂಪರ್ಕ: ದರ ನಿಗದಿ
ಗದಗ: ಗ್ಯಾಸ್ ಏಜೆನ್ಸಿಗಳು ಅಡುಗೆ ಅನಿಲ ನೀಡಲು ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ಹಲವು ದೂರುಗಳು ಆಹಾರ ಇಲಾಖೆ ಗಮನಕ್ಕೆ ಬಂದಿವೆ. ಹೊಸದಾಗಿ ಅಡುಗೆ ಅನಿಲ (14.2 ಕೆಜಿ) ಸಂಪರ್ಕ ಪಡೆಯಲು ನೀಡಬೇಕಾದ ದರ ಇಂತಿದೆ. ಒಂದು ಅಡುಗೆ ಅನಿಲ (14.2 ಕೆಜಿ) ಭದ್ರತಾ ಠೇವಣಿ, 1450 ರು. ರೆಗ್ಯುಲೇಟರ್ ಭದ್ರತಾ ಠೇವಣಿ 150, ಗ್ಯಾಸ್ ಬಳಕೆ ಪ್ರಾತ್ಯಕ್ಷಿಕೆ ನೀಡಲು ರು. 50, ಅಡುಗೆ ಅನಿಲದ ಸಂಪರ್ಕ ಜೋಡಣಾ ವೆಚ್ಚ ರು. 50, ರಬ್ಬರ್ ಟ್ಯೂಬ್ ರು. 170. ಇದಿಷ್ಟನ್ನೂ ಪಾವತಿಸುವ ಅಗತ್ಯವಿದೆ. ಅಡುಗೆ ಅನಿಲದ ಒಲೆಯ ಬೆಲೆ ಗರಿಷ್ಠ ರು. 900 ನಿಗದಿಯಾಗಿದ್ದು ಇದನ್ನು ಕಡ್ಡಾಯವಾಗಿ ಖರೀದಿಸಬೇಕಿಲ್ಲ. ಹೆಚ್ಚಿನ ಮಾಹಿತಿ ಹಾಗೂ ದೂರುಗಳಿದ್ದಲ್ಲಿ ಆಹಾರ ಇಲಾಖೆ ದೂ. 08372-239443 ಅಥವಾ ತಾಲೂಕಿನ ತಹಸೀಲ್ದಾರ್ ಕಾರ್ಯಾಲಯದ ಆಹಾರ ವಿಭಾಗವನ್ನು ಸಂಪರ್ಕಿಸಲು ಆಹಾರ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ನೀರು ಪೂರೈಕೆಯಲ್ಲಿ ವ್ಯತ್ಯಯ
ಗದಗ: ಗದಗ ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಕೆ ಮಾಡುವ ಮುಖ್ಯ ಕೊಳವೆ ಮಾರ್ಗವು ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ಒಡೆದು ಹೋಗಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ದುರಸ್ತಿ ಕಾರ್ಯವು ಭಾನುವಾರ ಸಂಜೆವರೆಗೆ ಮುಗಿಯಲಿದ್ದು, ಸೋಮವಾರದಿಂದ ಯಥಾಪ್ರಕಾರ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಗದಗ: 2014ನೇ ಸಾಲಿಗೆ ಕೇಂದ್ರ ಸರ್ಕಾರದಿಂದ ಅರ್ಜುನ ಪ್ರಶಸ್ತಿ, ಧ್ಯಾನ್ಚಂದ್ರ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರಾಷ್ಟ್ರೀಯ ಅಂತರ್ ರಾಷ್ಟ್ರೀಯ, ಜೀವನ ಪರ್ಯಂತ ಸಾಧನೆ ಮಾಡಿದ ಹಾಗೂ ಅತ್ಯುತ್ತಮ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಪ್ರಶಸ್ತಿಗಳನ್ನು ನೀಡುವ ಸಲುವಾಗಿ ಅಂತಹ ಕ್ರೀಡಾಪಟುಗಳು, ತರಬೇತುದಾರರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಢಿಢಿಢಿ.ಣಛಡ.ಟ್ಝ್ಛಿ.್ಝಟಿ ನಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತವಾದ ದೃಢೀಕೃತ ದಾಖಲೆಗಳೊಂದಿಗೆ ಏಪ್ರಿಲ್ 8ರೊಳಗಾಗಿ ಸಲ್ಲಿಸಬೇಕು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

