ರೈತರಿಗೆ ಕಂಟಕವಾಯ್ತು ಅಕಾಲಿಕ ಮಳೆ
ಕನ್ನಡಪ್ರಭ ವಾರ್ತೆ, ಗದಗ, ಮಾ. 2
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮೂರು ದಿನಗಳಿಂದ ಕಾಣಿಸಿಕೊಂಡಿರುವ ಅಕಾಲಿಕ ಮಳೆ ರೈತರ ಪಾಲಿಗೆ ಕಂಟಕವಾಗಿದೆ. ಬಹುತೇಕ ಕಟಾವಿಗೆ ಬಂದಿದ್ದ ಎಲ್ಲ ಬೆಳೆಗಳು ನೆನೆದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಸಣ್ಣ, ಮಧ್ಯಮ, ದೊಡ್ಡ, ವಾಣಿಜ್ಯ ಬೆಳೆ, ತೋಟಗಾರಿಕಾ ಬೆಳೆ, ಪಾರಂಪರಿಕ ಕೃಷಿ ಹೀಗೆ ಎಲ್ಲ ರೀತಿಯ ರೈತಾಪಿ ವರ್ಗವನ್ನು ಈ ಅಕಾಲಿಕ ಮಳೆ ಹಿಂಡಿ ಹಿಪ್ಪೆ ಮಾಡಿದೆ.
2 ದಿನ ಮಳೆ: ಗದಗ, ಧಾರವಾಡ, ಬಾಗಲಕೋಟೆ, ಬಳ್ಳಾರಿ, ಗುಲ್ಬರ್ಗ, ಬಿಜಾಪುರ ಜಿಲ್ಲೆ ಕೆಲ ಭಾಗಗಳಲ್ಲಿ ಬುಧವಾರ ರಾತ್ರಿ ಗುಡುಗು ಸಹಿತ ಕೆಲ ಕಾಲ ಮಳೆಯಾಗಿದ್ದರೆ, ಗುರುವಾರ ಸಂಜೆಯೂ ಈ ಎಲ್ಲ ಜಿಲ್ಲೆಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ತುಂತುರು ಮಳೆಯಾಗಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ರಭಸದಿಂದ ಕೂಡಿದ ಮಳೆಯೇ (ಮಳೆಗಾಲದ)ಆಗಿದೆ. ಇದರಿಂದ ಪ್ರಮುಖ ವಾಣಿಜ್ಯ ಬೆಳೆಗಳು, ಆಹಾರ ಧಾನ್ಯ ಬೆಳೆಗಳು ಮಳೆಗೆ ಸಿಕ್ಕು ಕೆಟ್ಟು ಹೋಗಿವೆ.
ಹಾನಿ: ಗದಗ ಹಾಗೂ ಧಾರವಾಡ ಜಿಲ್ಲೆಗಳಲ್ಲಿನ ರೈತರ ವರ್ಷದ ಗಂಜಿಯಾದ ಜೋಳ, ಗೋದಿ ಹಿಂಗಾರಿ ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆ ಕಟಾವು ಹಂತಕ್ಕೆ ಬಂದಿದ್ದು (ಕೆಲವಡೆ ಕಟಾವು ಮಾಡಲಾಗಿದೆ) ಇದೆಲ್ಲಾ ಮಳೆಯಿಂದ ಹಾನಿಗೊಳಗಾಗಿದೆ. ಇನ್ನು ರೈತನ ಮಿತ್ರ ಎತ್ತು ಮತ್ತು ಎಮ್ಮೆ ಆಕಳಿಗೆ ವರ್ಷಪೂರ್ತಿ ಬೇಕಾಗುವ ಮೇವು, ಹೊಟ್ಟು ಕೂಡಾ ಅಕಾಲಿಕ ಮಳೆಯಲ್ಲಿ ನೆನೆದಿದ್ದು, ಜಾನುವಾರು ತಿನ್ನದಂತಾಗಿದೆ. ಗುರುವಾರ ಸಂಜೆ ಬಾಗಲಕೋಟೆ, ಗುಲ್ಬರ್ಗ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಈ ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆಯಾದ ದ್ರಾಕ್ಷಿ, ದಾಳಿಂಬೆ, ಬಾಳೆ ಬೆಳೆಗೆ ಸಾಕಷ್ಟು ಹಾನಿಯಾಗಿದೆ. ಅದರಲ್ಲಿಯೂ ಕಟಾವಿಗೆ ಬಂದಿದ್ದ ದ್ರಾಕ್ಷಿ ಅಕಾಲಿಕ ಮಳೆಯಿಂದಾಗಿ ತನ್ನ ಗುಣಮಟ್ಟವನ್ನು ಕಳೆದುಕೊಳ್ಳಲಿದೆ. ಈ ಭಾಗದ ರೈತರು ಹೆಚ್ಚಿನ ಪ್ರಮಾಣದ ದ್ರಾಕ್ಷಿಯನ್ನು ಒಣ ದ್ರಾಕ್ಷಿಯನ್ನಾಗಿ ಪರಿವರ್ತಿಸುವ ಮಹದಾಸೆಯಿಂದ ಬಳ್ಳಿಗಳಲ್ಲಿಯೇ ಬಿಟ್ಟಿದ್ದರಿಂದ ಹೆಚ್ಚಿನ ನಷ್ಟವಾಗಿದೆ. ಈ ಜಿಲ್ಲೆಗಳಿಂದ ವಿದೇಶಕ್ಕೆ ರಫ್ತಾಗುತ್ತಿದ್ದ ಒಣದ್ರಾಕ್ಷಿಯಲ್ಲಿ ಈ ಬಾರಿ ಶೇ. 45ರಷ್ಟು ಕಡಿಮೆಯಾಗಲಿದೆ ಎಂದು ರೈತರು ಅಂದಾಜಿಸಿದ್ದಾರೆ.
ಅಂದಾಜು 60 ಸಾವಿರ ಹೆಕ್ಟೇರ್ ಹಾನಿ: ಈ ಅಕಾಲಿಕ ಮಳೆಯಿಂದ ರೈತರಿಗಾಗಿರುವ ಹಾನಿಯ ಕುರಿತು ರಾಜ್ಯ ರೈತ ಸಂಘ ಆಯಾ ಜಿಲ್ಲಾ ರೈತ ಸಂಘದ ಅಧ್ಯಕ್ಷರನ್ನು ಸಂಪರ್ಕಿಸಿ ಹಾನಿಯ ಕುರಿತು ವರದಿ ಸಿದ್ಧಪಡಿಸಿದ್ದು, ಈ ವರದಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ. ಅದರಲ್ಲಿ ದ್ರಾಕ್ಷಿ ಬೆಳೆವ ಜಿಲ್ಲೆಗಳಲ್ಲಿ 1120 ಹೆಕ್ಟೇರ್ ಪ್ರದೇಶದಲ್ಲಿನ ದ್ರಾಕ್ಷಿಗೆ ಶೇ. 32ರಷ್ಟು ಹಾನಿಯಾಗಿದೆ. 1800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ದಾಳಿಂಬೆಗೆ ಶೇ. 50ರಷ್ಟು, 1200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುವ ಚಿಕ್ಕು ಬೆಳೆಗೆ ಶೇ. 42ರಷ್ಟು, 200 ಹೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಅಂಜೂರ ಬೆಳೆಗೆ ಶೇ. 28ರಷ್ಟು, 400 ಹೆ. ಪ್ರದೇಶದಲ್ಲಿ ನಾಟಿ ಮಾಡಿರುವ ಮಾವು ಬೆಳೆಯ ಹೂವು ಉದುರಿ ಶೇ. 45ರಷ್ಟು ಹಾನಿ ಸಂಭವಿಸಿದೆ. 450 ಹೆ. ಪ್ರದೇಶದಲ್ಲಿರುವ ಲಿಂಬೆ ಬೆಳೆಗೆ ಶೇ. 34ರಷ್ಟು, 200 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿರುವ ಪಪ್ಪಾಯಿ ಬೆಳೆಗೆ ಶೇ. 48ರಷ್ಟು, 20 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಜೋಳಕ್ಕೆ ಶೇ. 30ರಷ್ಟು, 30 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದ್ದ ವಿವಿಧ ತಳಿಯ ಹತ್ತಿಗೆ ಶೇ. 60ರಷ್ಟು ಹಾನಿಯಾಗಿದೆ.
ಕಡಲೆ ಬೆಳೆ ಕಟಾವು ಹಂತ ಮುಗಿದ ಹಿನ್ನೆಲೆಯಲ್ಲಿ ಹಾನಿ ಕಡಿಮೆಯಾಗಿದೆ. ಇನ್ನು ಗೋದಿ ಹಾಗೂ ಜಾನುವಾರಿಗೆ ಬೇಕಾಗುವ ಮೇವು ಶೇ. 25ರಷ್ಟು ಹಾನಿಯಾಗಿದೆ. ಒಟ್ಟು ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ 60 ಸಾವಿರ ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಅಕಾಲಿಕ ಮಳೆಯಿಂದ ತೊಂದರೆ ಅನುಭವಿಸಿದ ಜಿಲ್ಲೆಗಳ ನಮ್ಮ ಸಂಘಟನೆಯ ಜಿಲ್ಲಾ ಘಟಕಗಳನ್ನು ಹಾಗೂ ಕೆಲ ಅಧಿಕಾರಿಗಳನ್ನು ಸಂಪರ್ಕಿಸಿ, ಆಯಾ ಜಿಲ್ಲೆಯಲ್ಲಿ ಮಳೆಯಿಂದಾಗಿರುವ ಹಾನಿಯ ಬಗ್ಗೆ ಅಂದಾಜು ವರದಿ ಸಿದ್ಧಪಡಿಸಲಾಗಿದೆ. ಈ ಕುರಿತು ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಸಭೆ ನಡೆಸಿ ಅಕಾಲಿಕ ಮಳೆಯಿಂದ ರೈತರಿಗಾಗಿರುವ ಹಾನಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲದೆ, ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಲಾಗುವುದು.
- ಕೆ.ಜಿ. ಶಾಂತಸ್ವಾಮಿಮಠ, ರೈತ ಸಂಘದ ರಾಜ್ಯ ಉಪಾಧ್ಯಕ್ಷ
ಹವಾಮಾನದಲ್ಲಿ ಆಗಿರುವ ಬದಲಾವಣೆಯಿಂದ ಮಳೆಯಾಗಿದೆ. ವಾತಾವರಣದಲ್ಲಿ ಅತಿಯಾದ ಸೆಖೆ ಕಂಡು ಬರುತ್ತಿದೆ. ಸದ್ಯದ ವಾತಾವರಣ ನೋಡಿದಲ್ಲಿ ಇನ್ನೆರಡು ದಿನ ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾದರೂ ಆಶ್ಚರ್ಯವಿಲ್ಲ.
-ಎಂ.ಎ. ನದಾಫ್, ಹವಾಮಾನ ಇಲಾಖೆ ನಿವೃತ್ತ ಅಧಿಕಾರಿ, ಗದಗ
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

