ಗದಗ

ದ್ವಿತೀಯ ಪಿಯುಸಿ ಪರೀಕ್ಷೆ: 12,177 ಪರೀಕ್ಷಾರ್ಥಿಗಳು

Published On :

ಗದಗ: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾ. 12ರಿಂದ 27ರ ವರೆಗೆ 23 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ ಎಂದು ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ತುರಮರಿ ತಿಳಿಸಿದರು.
ಅವರು ಸೋಮವಾರ ಜಿಪಂ ಸಭಾಂಗಣದಲ್ಲಿ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ 6,535 ವಿದ್ಯಾರ್ಥಿಗಳು ಮತ್ತು 5,642 ವಿದ್ಯಾರ್ಥಿನಿಯರು ಸೇರಿ ಒಟ್ಟು 12,177 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ಪರೀಕ್ಷೆಗಳು ಸುಗಮವಾಗಿ ಹಾಗೂ ಯಾವುದೇ ಅವ್ಯವಹಾರಗಳು ನಡೆಯದಂತೆ ಮತ್ತು ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಗದಿತ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿಲಾಗಿದೆ. ಇದರ ವ್ಯಾಪ್ತಿಯ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಹಾಗೂ ಗುಂಪುಗಳ ಪ್ರವೇಶವನ್ನು, ಮೊಬೈಲ್ ಬಳಕೆ ನಿಷೇಧಿಸಲಾಗಿದೆ ಹಾಗೂ ಪರೀಕ್ಷಾ ಅವಧಿಯಲ್ಲಿ ಝರಾಕ್ಸ್ ಅಂಗಡಿ ಮುಚ್ಚಲು ಆದೇಶಿಸಲಾಗಿದೆ ಎಂದರು. ಈ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಸಿಬ್ಬಂದಿ ಹಾಗೂ ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ವ್ಯವಸ್ಥೆಗೆ ಸೂಕ್ತ ಏರ್ಪಾಡು ಮಾಡಿಕೊಳ್ಳಬೇಕು. ಪರೀಕ್ಷಾ ಆಕ್ರಮ ಇತ್ಯಾದಿ ತಡೆಗೆ ನೇಮಿಸಲಾಗುವ ಸ್ಕ್ವಾಡ್‌ಗಳು ಶ್ರದ್ಧೆಯಿಂದ ಕೆಲಸ ನಿರ್ವವಹಿಸಬೇಕು ಎಂದು ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ನೆಲದಮೇಲೆ ಕುಳಿತುಕೊಳ್ಳದಂತೆ ಎಚ್ಚರವಹಿಸಿ, ಪ್ರತಿ ವಿದ್ಯಾರ್ಥಿಗೂ ಡೆಸ್ಕ್‌ನ ವ್ಯವಸ್ಥೆ ಕಲ್ಪಿಸಲು ಕ್ರಮ ಜರುಗಿಸಲು ಸೂಚನೆ ನೀಡಿದರು.
ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಸ್. ಗೌಡರ ಮಾತನಾಡಿ, ಕಲಾ ವಿಭಾಗದಿಂದ 6697, ವಾಣಿಜ್ಯ ವಿಭಾಗದಿಂದ 3500, ವಿಜ್ಞಾನ ವಿಭಾಗದ 1980 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಒಟ್ಟಾರೆ ನಿಯಮಿತ 9720, 650 ಖಾಸಗಿ ಅಭ್ಯರ್ಥಿಗಳು ಹಾಗೂ ಪುನರಾವರ್ತಿತ 1807 ಪರೀಕ್ಷಾರ್ಥಿಗಳಿದ್ದಾರೆ ಎಂದರು.
ಪಪೂ ಮಂಡಳಿಯಿಂದ ವಿಭಾಗ ಮಟ್ಟದ 2 ಹಾಗೂ ಗದಗ ಜಿಲ್ಲೆಗೆ 8 ಮೊಬೈಲ್ ಸ್ಕ್ವಾಡ್ ಹಾಗೂ ಜಿಲ್ಲೆಯಿಂದ ಪ್ರತಿ ತಾಲೂಕಿಗೆ ಒಂದರಂತೆ ವಿಶೇಷ ಜಾಗ್ರತ ದಳಗಳನ್ನು ರಚಿಸಲಾಗುತ್ತಿದ್ದು ಅವುಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಲಿವೆ. ಒಂದು ಸಿಟ್ಟಿಂಗ್ ಸ್ಕ್ವಾಡ್ ಪರೀಕ್ಷಾ ಕೇಂದ್ರದಲ್ಲೆ ಇರುತ್ತದೆ. ಜಿಲ್ಲೆಯಲ್ಲಿ 89 ಪದವಿ ಕಾಲೇಜುಗಳಿದ್ದು, 23 ಪರೀಕ್ಷಾ ಕೇಂದ್ರಗಳಿವೆ ಎಂದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಪಪೂ ಮಹಾವಿದ್ಯಾಲಯಗಳ ಪ್ರಾಂಶುಪಾಲರು ಭಾಗವಹಿಸಿದ್ದರು.
ಪರೀಕ್ಷಾ ವೇಳಾಪಟ್ಟಿ
ಪರೀಕ್ಷಾ ದಿನಗಳಂದು ಪ್ರತಿದಿನ ಬೆಳಗ್ಗೆ 9 ರಿಂದ 12.15ರ ವರೆಗೆ 12ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾ. 13ರಂದು ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್. 14ರಂದು ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ. 15ರಂದು ಭೌತಶಾಸ್ತ್ರ, ಮನಃಶಾಸ್ತ್ರ. ಮಧ್ಯಾಹ್ನ 2ರಿಂದ 5.15ರ ವರೆಗೆ ಕರ್ನಾಟಕ, ಹಿಂದುಸ್ತಾನಿ ಸಂಗೀತ. ಮಾ. 16 ರಜೆಯ ದಿನ. 17ರಂದು ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ. 18ರಂದು ಗಣಿತ, ಭೂಗೋಳಶಾಸ್ತ್ರ. 19ರಂದು ಐಚ್ಚಿಕ ಕನ್ನಡ, ಗೃಹವಿಜ್ಞಾನ, ಬೇಸಿಕ್ ಮ್ಯಾಥ್ಸ್. 20ರಂದು ರಸಾಯನಶಾಸ್ತ್ರ, ವ್ಯವಹಾರ ಅಧ್ಯಯನ. 21ರಂದು ತರ್ಕಶಾಸ್ತ್ರ, ಶಿಕ್ಷಣ. 22ರಂದು ಇತಿಹಾಸ, ಗಣಕ ವಿಜ್ಞಾನ. 23ರಂದು ರಜೆಯ ದಿನ. 24ರಂದು ಕನ್ನಡ, ತಮಿಳು, ಮಲೆಯಾಳಂ, ಅರೇಬಿಕ್. ಮಧ್ಯಾಹ್ನ 2ರಿಂದ 5.15ರ ವರೆಗೆ ಫ್ರೆಂಚ್. 25ರಂದು ಮರಾಠಿ, ಉರ್ದು, ಸಂಸ್ಕೃತ. 26ರಂದು ಇಂಗ್ಲಿಷ್. 27ರಂದು ಹಿಂದಿ ಮತ್ತು ತೆಲುಗು ಪರೀಕ್ಷೆಗಳು ಜರುಗಲಿವೆ. ಪರೀಕ್ಷಾ ವಿಷಯ ಕುರಿತ ಪಪೂ ಮಂಡಳಿಯ ಸಹಾಯವಾಣಿ ಸಂ. 080-23361856, 23361858

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.