ಗದಗ

ಮುಂಡರಗಿ ಪುರಸಭೆ ಉಪಾಧ್ಯಕ್ಷ ಗಾದಿಗೆ ಪೈಪೋಟಿ

Published On :

ಮುಂಡರಗಿ: ಮೀಸಲಾತಿ ವಿವಾದದಿಂದ ಕೋರ್ಟ್ ಮೆಟ್ಟಿಲೇರಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆಗೆ ಕೋರ್ಟ್ ತೀರ್ಪಿನಿಂದಾಗಿ ಕೊನೆಗೂ ಮುಹೂರ್ತ ಕೂಡಿಬಂದಿದೆ. ಮುಂಡರಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಾ. 7ರಂದು ಚುನಾವಣೆ ನಿಗದಿಯಾಗಿದೆ.
ಇಲ್ಲಿನ ಪುರಸಭೆ ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿದೆ. ಇಲ್ಲಿ ಒಬ್ಬಳೇ ಎಸ್‌ಟಿ ಮಹಿಳೆ ಇರುವುದರಿಂದ ಅಧ್ಯಕ್ಷ ಹುದ್ದೆಗೆ ಪೈಪೋಟಿ ಇಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರಲ್ಲಿಯೇ ಬೇಡಿಕೆ ಹೆಚ್ಚಾಗಿದ್ದು, ಅವಕಾಶ ದೊರೆತರೆ ನಾವೂ ಹಿಂದೆ ಸರಿಯುವುದಿಲ್ಲ ಎನ್ನುವ ಮಾತು ಬಿಜೆಪಿ ಸದಸ್ಯರಿಂದಲೂ ಕೇಳಿ ಬರುತ್ತಿದೆ. 23 ಸದಸ್ಯರ ಬಲ ಹೊಂದಿದ ಮುಂಡರಗಿ ಪುರಸಭೆಯಲ್ಲಿ ಈ ಬಾರಿ 12 ಕಾಂಗ್ರೆಸ್ ಸದಸ್ಯರು, 8 ಬಿಜೆಪಿ, 2 ಪಕ್ಷೇತರ ಹಾಗೂ 1 ಜೆಡಿಎಸ್ ಸದಸ್ಯರಿದ್ದಾರೆ. 12 ಸದಸ್ಯ ಬಲ ಹೊಂದಿದ ಕಾಂಗ್ರೆಸ್‌ಗೆ ಬಹುಮತವಿದೆ. 20ನೇ ವಾರ್ಡಿನ ಭಾರತಿ ಈರಪ್ಪ ಹಕ್ಕಿ ಅವರು ಒಬ್ಬರೇ ಎಸ್‌ಟಿ ಮಹಿಳೆ ಇರುವುದರಿಂದ ಅಧ್ಯಕ್ಷರ ಆಯ್ಕೆ ಯಾವುದೇ ವಿರೋಧವಿಲ್ಲದೇ ಆಗುತ್ತಿದೆ.
ಅಧ್ಯಕ್ಷ ಆಕಾಂಕ್ಷಿಗಳಿದ್ದರು: ಮುಂಡರಗಿ ಪುರಸಭೆ ಚುನಾವಣೆಗೆ ಈ ಬಾರಿ ಯುವಕರೇ ಹೆಚ್ಚಿನ ಪ್ರಮಾಣದಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಬಹುಮತ ಹೊಂದಿದ ಕಾಂಗ್ರೆಸ್‌ನ 12 ಸದಸ್ಯರಲ್ಲಿಯೇ ಎಸ್ಸಿ ಮೀಸಲಾತಿ ಬಂದಿದ್ದರೆ ಎರಡು ಜನ, ಎಸ್‌ಟಿ ಮೀಸಲಾತಿ ಬಂದಿದ್ದರೆ ಎರಡು ಜನ, ಸಾಮಾನ್ಯ ಮೀಸಲಾತಿ ಬಂದಿದ್ದರೆ 5 ಜನ, ಸಾಮಾನ್ಯ ಬ ವರ್ಗಕ್ಕೆ ಮೀಸಲಾತಿ ಬಂದಿದ್ದರೆ 3 ಜನ. ಹೀಗೆ ಇವರೆಲ್ಲ ಅಧ್ಯಕ್ಷ ಹುದ್ದೆ ಆಕಾಂಕ್ಷಿಗಳಾಗಿದ್ದರು. ಆದರೆ ಒಂದೇ ಒಂದು ಸದಸ್ಯರನ್ನು ಹೊಂದಿದ ಎಸ್‌ಟಿ ಮಹಿಳೆಗೆ ಮೀಸಲಾತಿ ಬಂದಿದ್ದರಿಂದ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಾಗಿದ್ದ ಎಲ್ಲ ಸದಸ್ಯರಿಗೂ ನಿರಾಶೆಯಾಗಿತ್ತು. ಆದರೆ, ಮೀಸಲಾತಿ ಪ್ರಶ್ನಿಸಿ ಬೇರೆ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರಿಂದ ಆಯ್ಕೆಗೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದೀಗ ಕೋರ್ಟ್ ಆಯ್ಕೆಗೆ ಹಸಿರು ನಿಶಾನೆ ತೋರಿಸಿದ್ದು, ಮೊದಲಿನ ಮೀಸಲಾತಿಯಂತೆಯೇ ಆಯ್ಕೆಗೆ ಸೂಚಿಸಿದೆ. ಹೀಗಾಗಿ ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಗಳಾಗಿಗೆ ಮತ್ತೊಮ್ಮೆ ಬೇಸರ ಉಂಟಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಬೇಡಿಕೆ: ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಹುದ್ದೆಗೆ ಈ ಹಿಂದೆ 4 ಕಾಂಗ್ರೆಸ್ ಸದಸ್ಯರು ಆಕಾಂಕ್ಷಿಗಳಾಗಿದ್ದರು. ಶಾಸಕರು ಒಮ್ಮತದಿಂದ ಒಬ್ಬರ ಹೆಸರನ್ನು ಸೂಚಿಸಿದ್ದರು. ಅದಕ್ಕೆ ಎಲ್ಲ ಆಕಾಂಕ್ಷಿಗಳೂ ಸಮ್ಮತಿ ಸೂಚಿಸಿದ್ದರು. ಆದರೆ, ಇದೀಗ ಈ ಹಿಂದೆ ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದ 1ನೇ ವಾರ್ಡ್‌ನ ಸದಸ್ಯ ಫಕ್ರುದ್ದೀನ ಹಾರೋಗೇರಿ, 4ನೇ ವಾರ್ಡಿನ ಮುದಿಯಪ್ಪ ಕುಂಬಾರ, 6ನೇ ವಾರ್ಡಿನ ದಾನೇಶ್ವರಿ ಭಜಂತ್ರಿ, 12ನೇ ವಾರ್ಡಿನ ಸೋಮನಗೌಡ ಗೌಡ್ರ, 18ನೇ ವಾರ್ಡಿನ ಪ್ರೇಮವ್ವ ಗಣದಿನ್ನಿ ಆಕಾಂಕ್ಷಿಗಳಾಗಿದ್ದು ಇನ್ನೂ ಅನೇಕರು ತೆರೆಮರೆಯ ಪ್ರಯತ್ನದಲ್ಲಿದ್ದಾರೆ. ಶಾಸಕರು ಹಾಗೂ ಪಕ್ಷದ ವರಿಷ್ಠರು ಕೊನೆಗೆ ಯಾವ ನಿರ್ಧಾರ ಮಾಡುತ್ತಾರೋ? ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಬಿಜೆಪಿಯಿಂದಲೂ: ಕಾಂಗ್ರೆಸ್‌ನಲ್ಲಿನ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಮಗೆ ಉಪಾಧ್ಯಕ್ಷ ಸ್ಥಾನ ದೊರೆಯದಿರುವ ಲಕ್ಷಣವಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಚುನಾವಣೆ ಸಂದರ್ಭದಲ್ಲಿ ತಮಗೆ ಸಿಗದಿರುವ ಸ್ಥಾನ ತಮ್ಮವರಿಗೆ ಸಿಗಬಾರದೆನ್ನುವ ಉದ್ದೇಶದಿಂದ ಬಿಜೆಪಿ ಸದಸ್ಯರಿಗೆ ಬೆಂಬಲಿಸುವ ಮೂಲಕ 8 ಸದಸ್ಯರನ್ನು ಹೊಂದಿದ ಬಿಜೆಪಿಯವರೇ ಉಪಾಧ್ಯಕ್ಷರಾದರೂ ಆಶ್ಚರ್ಯಪಡಬೇಕಾಗಿಲ್ಲ ಎನ್ನುವ ಮಾತುಗಳು ಬಿಜೆಪಿ ವಲಯದಿಂದ ಕೇಳಿ ಬರುತ್ತಿವೆ.
ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಹೆಚ್ಚಿದ್ದರಿಂದ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕುರಿತು ಯಾವ ನಿರ್ಧಾರ ಕೈಗೊಳ್ಳುವರೋ ಕಾದುನೋಡಬೇಕಾಗಿದೆ.

ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.