ರೋಣ ಪುರಸಭೆ ರು. 5.09 ಲಕ್ಷ ಉಳಿತಾಯ ಬಜೆಟ್
ಕನ್ನಡಪ್ರಭ ವಾರ್ತೆ, ರೋಣ, ಮಾ. 3
ಸ್ಥಳೀಯ ಪುರಸಭೆಯ 2014-15ನೇ ಸಾಲಿನ ಮುಂಬರುವ ವರ್ಷದ ಬಜೆಟ್ ಆಯವ್ಯಯವನ್ನು ಪುರಸಭೆಯ ಸಭಾಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಂಡನೆ ಮಾಡಲಾಯಿತು.
ಒಟ್ಟು ಬಜೆಟ್ ಜಮಾ ಮೊತ್ತ ರು. 8,98,26,883ಗಳಲ್ಲಿ, ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಖರ್ಚು ಮಾಡುವಲ್ಲಿ ರು. 8,93,16,950ಗಳಲ್ಲಿ ಅಂದಾಜು ಪತ್ರಿಕೆ ತಯಾರಿಸಲಾಗಿದೆ. ರು. 5,09,927 ಗಳು ಉಳಿತಾಯ ಬಜೆಟ್ ಮೊತ್ತವಾಗಿದೆ ಎಂದು ಮುಖ್ಯಾಧಿಕಾರಿ ಬಾಬುರಾವ್ ಕಮತಗಿ ತಿಳಿಸಿದರು.
ಕೆಲಸ ತೃಪ್ತಿಯಾಗದಿದ್ದಲ್ಲಿ ರಾಜಿನಾಮೆಗೆ ಸಿದ್ಧ:
ಬಜೆಟ್ ಮಂಡನೆ ವೇಳೆ ಸಭೆಯಲ್ಲಿದ್ದ ಕೆಲ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ನೆನಗುದಿಗೆ ಬಿದ್ದಿರುವ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ, ರಸ್ತೆ ದುರಸ್ತಿ ಸೇರಿದಂತೆ ಅನೇಕ ಕಾಮಗಾರಿಗಳ ಅಭಿವೃದ್ಧಿ ಮತ್ತು ಈ ಹಿಂದೆ ಕೈಗೊಳ್ಳಲಾದ ದುರಸ್ತಿ ಕಾಮಗಾರಿಗಳ ಬಿಲ್ ಪಾವತಿಯಲ್ಲಿ ವಿಳಂಬವಾದ ಕುರಿತು ಅಧ್ಯಕ್ಷ ಮುತ್ತಣ್ಣ ಸಂಗಳದ ಅವರೊಂದಿಗೆ ವಾಗ್ವಾದಕ್ಕಿಳಿದರು. ಇದರಿಂದ ಕೆರಳಿದ ಅಧ್ಯಕ್ಷ ಮುತ್ತಣ್ಣ ಸಂಗಳದ ಮಾತನಾಡಿ, ನಾನು ಯಾವುದೇ ವಾರ್ಡ್‌ನ ಅಭಿವೃದ್ಧಿ ಕುರಿತು ವಿಳಂಬ ಧೋರಣೆ ಅನುಸರಿಸುವುದಿಲ್ಲ. ಬಿಲ್ ಪಾವತಿಗೆ ತಾಂತ್ರಿಕ ಕಾರಣದಿಂದ ವಿಳಂಬವಾಗುವುದು ಸಹಜ. ಅದನ್ನೆ ನೆಪ ಮಾಡಿಕೊಂಡು ದೂರುವುದು ಸರಿಯಲ್ಲ. ಕಾಮಗಾರಿ ಪೂರ್ಣಗೊಂಡಿದ್ದರೆ ಮಾತ್ರ ಪರಿಶೀಲಿಸಿ ಬಳಿಕ ಬಿಲ್ ಪಾವತಿಸಲಾಗುವುದು. ನಾನು ಕೈಗೊಳ್ಳುವ ಕಾರ್ಯದಲ್ಲಿ ನಿಮಗೆ ನಂಬಿಗೆ ಇದ್ದರೆ ನಾನು ಅಧ್ಯಕ್ಷನಾಗಿ ಮುಂದುವರಿಯುತ್ತೇನೆ. ಇಲ್ಲದಿದ್ದರೆ ರಾಜಿನಾಮೆ ಕೊಡಲು ಸಿದ್ಧನಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಮಾತಿನ ಚಕಮಕಿ: 9ನೇ ವಾರ್ಡ್ ಸದಸ್ಯ ಬಸವರಾಜ ಬಸನಗೌಡ ಮಾತನಾಡಿ, ನಮ್ಮ ವಾರ್ಡಿನಲ್ಲಿ ಕೈಗೊಳ್ಳಲಾದ ಕಾಮಗಾರಿಯ ಬಿಲ್‌ನ್ನು 4 ತಿಂಗಳಾದರೂ ಈವರೆಗೂ ಕೊಟ್ಟಿರುವುದಿಲ್ಲ. ನಮ್ಮ ವಾರ್ಡಿನ ವಿಷಯದಲ್ಲಿ ಅಧ್ಯಕ್ಷರು ಪದೇ ಪದೇ ಮಧ್ಯೆ ಪ್ರವೇಶಿಸುತ್ತಾರೆ. ಯಾವುದಕ್ಕೂ ಅವರೇ ನಿರ್ಣಯ ಕೈಗೊಳ್ಳುವದಾದರೆ ನಾವಿರುವುದಾರರೂ ಏಕೆ. ನಮಗೆ ಅಧಿಕಾರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಅಧ್ಯಕ್ಷ ಮುತ್ತಣ್ಣ ಸಂಗಳದ ಮಾತನಾಡಿ, ನಿಮ್ಮ ವಾರ್ಡ್‌ನಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಬಿಲ್‌ಗೆ ಸಹಿ ಮಾಡಲಾಗಿದೆ. ಮಂಜೂರಾತಿಗೆ ಕಳಿಸಲಾಗಿದ್ದು, ಅಲ್ಲಿಯವರೆಗೂ ತಡೆಯಬೇಕು. ಕೂಡಲೇ ಬಿಲ್ ಮಾಡಲು ಬರುವುದಿಲ್ಲ ಎಂದಾಗ ಕೆಲಕಾಲ ಪರಸ್ಪರ ಮಾತಿನ ಚಕಮಕಿ ನಡೆಯಿತು.
ಉಪಾಧ್ಯಕ್ಷೆ ಲಕ್ಷ್ಮಿ ಗಡಗಿ ಮಾತನಾಡಿ, 19 ಮತ್ತು 20ನೇ ವಾರ್ಡ್‌ನಲ್ಲಿ ಕುಡಿಯುವ ನೀರಿಗಾಗಿ ಸಿಸ್ಟನ್ ನಿರ್ಮಿಸಲು ಕಳೆದ 6 ತಿಂಗಳಿಂದ ಸಭೆಯಲ್ಲಿ ಒತ್ತಾಯಿಸಲಾಗುತ್ತಾ ಬರಲಾಗಿದೆ. ಈ ಹಿಂದೆ ರು. 60 ಲಕ್ಷಗಳಲ್ಲಿ ವಿವಿಧ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯೋಜನೆ ತಯಾರಿಸಿದ್ದು, ಅದರಲ್ಲಿ 19 ಮತ್ತು 20ನೇ ವಾರ್ಡ್‌ಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ವಿರೋಧ ಪಕ್ಷದ ನಾಯಕ ಬಸನಗೌಡ ಪಾಟೀಲ, ಮುಖ್ಯಾಧಿಕಾರಿ ಬಾಬುರಾವ್ ಕಮತಗಿ, ಅಭಿಯಂತ ಬಿ.ಎ. ನದಾಫ್, ಸದಸ್ಯ ತೋಟಪ್ಪ ನವಲಗುಂದ, ಅಜ್ಜಪ್ಪ ರಡ್ಡೇರ, ಗದಿಗೆಪ್ಪ ಕಿರೇಸೂರ, ಮಂಜುನಾಥ ಹಾಳಕೇರಿ, ಖಾದಿರಸಾಬ್ ಸಂಕನೂರ, ಶಫೀಕ ಮೂಗನೂರ, ಬಾಬುಸಾಬ್ ಚಿನ್ನೂರ, ಶಿವಪ್ಪ ಕರಲಿಂಗಣ್ಣವರ, ರಾಜು ಪಲ್ಲೇದ, ರತ್ನಾ ಕೊಳ್ಳಿ, ವಿದ್ಯಾ ಬಡಿಗೇರ, ಯಮನವ್ವ ಜಮ್ಮನಕಟ್ಟಿ, ಶರಣವ್ವ ಜಿಡ್ಡಿಬಾಗೀಲ, ಜಯಶ್ರೀ ನವಲಗುಂದ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

