ಗದಗ

ಇಂದು ನರಗುಂದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಮಾ. 6
ಹಲವಾರು ರಾಜಕೀಯ ಮೇಲಾಟ, ಪರಸ್ಪರ ಆರೋಪ, ಪ್ರತ್ಯಾರೋಪ ಜಿದ್ದಾಜಿದ್ದಿನ ಹೋರಾಟದ ಮೂಲಕ ಪುರಸಭೆ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಆದರೆ, ಇಂದಿಗೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಾಧ್ಯವಾಗಿರಲಿಲ್ಲ. ಮಾ 7ರಂದು ಆಯ್ಕೆ ಪ್ರಕ್ರಿಯೆಗೆ ಮುಹೂರ್ತ ಫಿಕ್ಸ್ ಆಗಿದೆ.
23 ಸದಸ್ಯರನ್ನು ಹೊಂದಿರುವ ನರಗುಂದ ಪುರಸಭೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 9, ಪಕ್ಷೇತರ 1 ಹಾಗೂ ಬಿಎಸ್‌ಆರ್ ಕಾಂಗ್ರೆಸ್ 1 ಸ್ಥಾನ ಹೊಂದಿವೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ 'ಅ' ವರ್ಗಕ್ಕೆ ಮೀಸಲಾಗಿದೆ. ಎರಡೂ ಪ್ರಮುಖ ಪಕ್ಷಗಳು ನಾವೇ ಅಧಿಕಾರ ಹಿಡಿಯುತ್ತೇವೆ ಎನ್ನುವ ಹುಮ್ಮಸ್ಸಿನಲ್ಲಿವೆ. ಆದರೆ, ಈ ಹಿಂದೆ ನಡೆದ ತೀವ್ರ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷೇತರ ಅಭ್ಯರ್ಥಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಒಬ್ಬರು ಮತ್ತು 23ನೇ ವಾರ್ಡಿನ ಸದಸ್ಯ ಶಾಂತವ್ವ ಭಜಂತ್ರಿ ಅವರು ಕಾಂಗ್ರೆಸ್‌ಗೆ ಪಲಾಯಾನ ಮಾಡಿದ್ದು ಮತ್ತು ಶಾಸಕರ ಒಂದು ಮತ ಸೇರಿ ಒಟ್ಟು 13 ಆಗುವುದರಿಂದ ನರಗುಂದ ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದರೆ, ಬಿಜೆಪಿಯವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಮೂಲಕ ಶುಕ್ರವಾರದ ಚುನಾವಣೆಗೆ ಹೆಚ್ಚಿನ ಪ್ರಾಧಾನ್ಯತೆ ಪಡೆದಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ತಂತ್ರ, ಪ್ರತಿತಂತ್ರಗಳು ಬಲು ಜೋರಾಗಿಯೇ ನಡೆಯುತ್ತಿವೆ. ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಎರಡೂ ಪಕ್ಷದಲ್ಲಿ ಸಾಮಾನ್ಯ ಮಹಿಳೆಯರಿದ್ದಾರೆ. ಆದರೆ, ಆಪರೇಶನ್ ಕಾಂಗ್ರೆಸ್ ನಡೆದಿದ್ದರಿಂದ ಹಿಂದುಳಿದ ವರ್ಗದ ಮಹಿಳೆ ಶಾಂತವ್ವ ಭಜಂತ್ರಿ ಮತದಾನ ಮಾಡಿದರೆ ಅವರ ಸದಸ್ಯತ್ವ ರದ್ದಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಪಕ್ಷವು ಅವರನ್ನೇ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸುವ ಕಾತರದಲ್ಲಿದ್ದಾರೆ. ಆದರೆ, ಅದೇ ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಾಗುವ ಇಚ್ಛೆಯುಳ್ಳ ಹಲವಾರು ಸಾಮಾನ್ಯ ವರ್ಗಕ್ಕೆ ಮೀಸಲಾದ ಮಹಿಳಾ ಸದಸ್ಯರಿದ್ದು ಅವರೆಲ್ಲಾ ಆಕಾಂಕ್ಷಿಗಳು, ನಮ್ಮ ಅಧಿಕಾರದ ಭಾಗ್ಯ ಬೇರೆಯವರಿಗೆ ಏಕೆ ಎಂದು ಅಸಮಾಧಾನ ತೀವ್ರವಾಗಿದೆ. ಒಂದು ವೇಳೆ ಅದು ಕೊನೆ ಕ್ಷಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಲ್ಲಿ ಇದರ ಲಾಭ ಬಿಜೆಪಿಗೆ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ಇನ್ನು ಉಪಾಧ್ಯಕ್ಷ ಸ್ಥಾನ 'ಅ' ವರ್ಗಕ್ಕೆ ಮೀಸಲಾಗಿದ್ದರಿಂದ ಈ ಹುದ್ದೆಯ ಬಗ್ಗೆ ಹೆಚ್ಚಿನ ಆಸಕ್ತಿ ಎಲ್ಲಿಯೂ ಕಂಡು ಬರುತ್ತಿಲ್ಲ.

ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.