ಶರಣರ ವಚನಗಳಿಂದ ಮನುಷ್ಯನ ಬಾಳಲ್ಲಿ ಬೆಳಕು
ಮುಂಡರಗಿ: ಬಸವಾದಿ ಶಿವಶರಣರ ವಚನಗಳಿಂದ ಮನುಷ್ಯನ ಬಾಳಲ್ಲಿ ಬೆಳಕು ಮೂಡುತ್ತದೆ ಎಂದು ಡಂಬಳ-ಗದಗ ಸಂಸ್ಥಾನ ಮಠದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಮಂಗಳವಾರ ರಾತ್ರಿ ಪಟ್ಟಣದ ತೋಂಟದಾರ್ಯ ಮಠದಲ್ಲಿ ಜರುಗಿದ 68ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣ, ಮಡಿವಾಳ ಮಾಚದೇವ, ಹಡಪದ ಅಪ್ಪಣ್ಣ, ಅಕ್ಕಮಹಾದೇವಿ, ನೀಲಾಂಬಿಕೆ, ಸೂಳೆ ಸಂಕವ್ಯ ಸೇರಿದಂತೆ ಅನೇಕ ಶಿವಶರಣ-ಶರಣೆಯರು ಬರೆದಿರುವ ವಚನಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ವಚನ ಸಾಹಿತ್ಯ ತನ್ನ ದೇಶೀಗುಣವನ್ನು ಇಂದಿಗೂ ಉಳಿಸಿಕೊಂಡಿದೆ. ಶರಣರು ವಚನಗಳಲ್ಲಿ ಜಾತೀಯತೆ ಅಲ್ಲಗಳೆದಿದ್ದಾರೆ. ಮೂಢನಂಬಿಕೆ ದೂರತಳ್ಳಿದ್ದಾರೆ. ಸುಳ್ಳು, ಕೊಲೆ, ಮೋಸ ಮಾಡದಿರುವಂತೆ ವಚನಗಳ ಮೂಲಕ ಎಲ್ಲರಿಗೂ ತಿಳಿಸಿಕೊಟ್ಟಿದ್ದಾರೆ. ಎಲ್ಲರೂ ತಪ್ಪದೇ ಸಮಯ ಸಿಕ್ಕಾಗ ವಚನಗಳನ್ನು ಓದಿರಿ ಎಂದರು. ಕೇವಲ ಲಿಂಗ ಕಟ್ಟಿದವರು ಮಾತ್ರ ಲಿಂಗಾಯತರಲ್ಲ, ನಿತ್ಯ ಸತ್ಯ ಶುದ್ಧ ಕಾಯಕ ಮಾಡಿ ತಾನು ಬದುಕುವುದರ ಜತೆಗೆ ಇತರರನ್ನು ನೋಡಿಕೊಳ್ಳುವವ ನಿಜವಾದ ಲಿಂಗಾಯತ. ಲಿಂಗ ಕೇವಲ ಗುರುತು, ಅದೇ ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವುದಿಲ್ಲ. ನಮ್ಮದು ಜಾತಿ ವ್ಯವಸ್ಥೆಯ ನೀಚದೇಶ. ನಮ್ಮ ದೇಶದಲ್ಲಿ ಈ ಹಿಂದೆ 5 ಸಾವಿರ ಜಾತಿಗಳಿದ್ದವು. ಬುದ್ಧ, ಬಸವಣ್ಣ, ಮಹಾವೀರ ಸೇರಿದಂತೆ ಅನೇಕ ಶಿವಶರಣರ ತತ್ವಾದರ್ಶಗಳಿಂದ ಕೆಲವು ಜಾತಿಗಳನ್ನು ಕೈಬಿಟ್ಟಿದ್ದು, ಇನ್ನೂ ಸುಮಾರು 3 ಸಾವಿರ ಜಾತಿಗಳಿರುವುದು ನಮ್ಮ ದುರ್ದೈವವಾಗಿದೆ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಸಮಾನ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ ಎಲ್ಲರೂ ಒಂದೇ. ಮನುಷ್ಯ ಮನುಷ್ಯನ ಹೆಗಲ ಮೇಲೆ ಕುಳಿತುಕೊಂಡು ಮೇರೆಯುವುದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಇಲ್ಲಿ ಎಲ್ಲರೂ ಸರಿಸಮನಾಗಿ ಬಾಳಬೇಕಾಗಿದೆ. ಇಂದಿಗೂ ಅನೇಕ ಕಡೆಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ, ಪಾದಪೂಜೆ, ಪಾದೋದಕ ಕುಡಿಯುವುದು, ಅಷ್ಟಾವರಣ, ಪಂಚಾಚಾರಗಳ ಆಚರಣೆ ಇಂದಿಗೂ ನಡೆಸುತ್ತಿರುವುದು ವಿಷಾದಕರ ಸಂಗತಿ. ಮಕ್ಕಳಿಗೆ ಇಂತಹ ಸಂಪ್ರದಾಯಗಳಿಂದ ದೂರವಿಟ್ಟು, ವಚನ ಸಾಹಿತ್ಯದತ್ತ ಮುಖ ಮಾಡಿಸಿರಿ ಎಂದು ಶ್ರೀಗಳು ಹೇಳಿದರು. ಪ್ರೊ. ಎ.ವೈ. ನವಲಗುಂದ ಮಾತನಾಡಿದರು. ಭಕ್ತಿ ಸೇವೆ ವಹಿಸಿದ್ದ ರೇಷ್ಮೆ ಇಲಾಖೆಯ ನೌಕರ ಮಲ್ಲಿಕಾರ್ಜುನ ತೋಡ್ಕರ ಕುಟುಂಬ ವರ್ಗದವರನ್ನು ಶ್ರೀಗಳು ಸನ್ಮಾನಿಸಿದರು. ಅಕ್ಕಮಹಾದೇವಿ ಕೆಳಗಿನಮನಿ ಧರ್ಮಗ್ರಂಥ ಪಠಿಸಿದರು. ಜಯಶ್ರೀ ಪಾಟೀಲ ವಚನ ಚಿಂತನ ನಡೆಸಿಕೊಟ್ಟರು. ಕರ್ನಾಟಕ ಜನಪದ ಕಲಾ ತಂಡದ ಎ.ಪಿ. ದಂಡಿನ, ಸುರೇಶ ಬಣಗಾರ, ಖಮರೂನ್ ರಾಟಿ, ವೀರೇಶ ಕುಬಸದ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಧ್ರುವಕುಮಾರ ಹೊಸಮನಿ, ಸೊಲಬಣ್ಣ ಜೋಬಾಳಿ, ಕೊಟ್ರೇಶ ಅಂಗಡಿ, ಕೆ.ಎ. ಹಿರೇಮಠ ಮುಂತಾದವರು ಪಾಲ್ಗೊಂಡಿದ್ದರು. ತೋಂಟದಾರ್ಯ ಸೇವಾ ಸಮಿತಿ ಅಧ್ಯಕ್ಷ ಈಶಣ್ಣ ಬೆಟಗೇರಿ ಸ್ವಾಗತಿಸಿದರು. ಗಿರೀಶಗೌಡ ಪಾಟೀಲ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

